Advertisement

‘ಹಳ್ಳಿಗಳ ಕಡೆ ಹೋಗದಿದ್ದರೆ ನಿಮ್ಮ ಕರ್ಮ..’

06:24 AM Jan 15, 2019 | Harsha Rao |

ಬೆಂಗಳೂರು: ಈ ಬೆಂಗಳೂರಿನಲ್ಲಿದ್ದು ಏನು ಮಾಡ್ತೀರಾ? ಇಲ್ಲಿ ಸೇವಿಸುವ ಆಹಾರ, ನೀರು ಎಲ್ಲವೂ ವಿಷ. ತಿಂಗಳಿಗೆ 2 ಲಕ್ಷ ದುಡಿದ್ರೂ ಬ್ಯಾಂಕ್‌ ಖಾತೆಯಲ್ಲಿ ಹಣ ಇರಲ್ಲ; ನೆಮ್ಮದಿಯೂ ಇರಲ್ಲ. ಹಳ್ಳಿಗೆ ಹೋಗಿ, ಅಲ್ಲಿ ಬರೀ 10 ಗುಂಟೆ ಜಮೀನು ಇಟ್ಕೊಂಡು, ಅದರಲ್ಲಿ ಮನೆಗೆ ಬೇಕಾದಷ್ಟೇ ತರಕಾರಿ-ಹಣ್ಣು ಬೆಳ್ಕೊಂಡು, ಹಿಡಿ ರಾಗಿಗಂಜಿ ಕುಡ್ಕೊಂಡು ಹಾಡು ಹೇಳ್ಕೊಂಡು ಹಾಯಾಗಿರಿ. ಊರು ಕಡೆಗೆ ಹೋಗದಿದ್ದರೆ ನಿಮ್ಮ ಕರ್ಮ…

Advertisement

– ಹಿಂದೊಮ್ಮೆ ‘ಮನೆಯಂಗಳದಲ್ಲಿ ಮಾತುಕತೆ’ಗೆ ಬಂದಿದ್ದ ಕೃಷಿ ಸಾಧಕ ನಾಡೋಜ ನಾರಾಯಣ ರೆಡ್ಡಿ ಹೀಗೆ ಕಿವಿಮಾತು ಹೇಳಿದ್ದರು. ಆ ಕಿವಿಮಾತಿನಲ್ಲಿ ಹಳ್ಳಿಯಿಂದ ಯುವಕರು ನಗರದತ್ತ ಮುಖಮಾಡುತ್ತಿರುವ ಬಗ್ಗೆ ರೆಡ್ಡಿ ಅವರಲ್ಲಿ ಸಿಟ್ಟು ಮತ್ತು ಕಳವಳ ಎರಡೂ ಇತ್ತು.

‘ಕೃಷಿ ಲಾಭದಾಯಕವಲ್ಲ. ಸಾಲದಿಂದ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಕೇಳಿದ್ರೆ, ನನಗೆ ನಗು ಮತ್ತು ಅಳು ಬರುತ್ತದೆ. ಕಸಬಿನ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಇದು ರೈತರಿಗೂ ಅನ್ವಯಿಸುತ್ತದೆ. ನಮ್ಮ ರೈತರು ಕೆಟ್ಟಿದ್ದು ಇಲ್ಲಿಯೇ. ಬೀಜ- ಗೊಬ್ಬರ ಕಂಪನಿಯವರು ತೋರಿಸುವ ಚಿತ್ರಗಳಿಗೆ ಮರುಳಾಗಿ, ಸಮರ್ಪಕ ಮಾಹಿತಿ ಇಲ್ಲದೆ ಬೆಳೆಯುತ್ತಾರೆ. ನಂತರ ಸಾಲ ತೀರಿಸಲಾಗದೆ ಪರದಾಡುತ್ತಾರೆ. 40 ವರ್ಷ ದಿಂದ ಕೃಷಿ ಮಾಡುತ್ತಿದ್ದೇನೆ. ಯಾವತ್ತೂ ಸಾಲ ಮಾಡಿಲ್ಲ. ಬದಲಿಗೆ 150 ಕೋಟಿ ರೂ.ಗಳ ಒಡೆಯನಾಗಿದ್ದೇನೆ’ ಎಂದು ಹೇಳುವ ಮೂಲಕ ಕೃಷಿಯಿಂದ ವಿಮುಖರಾದವರನ್ನು ಕರೆತರುವ ಪ್ರಯತ್ನವನ್ನೂ ಮಾಡಿದ್ದ ನಾರಾಯಣರೆಡ್ಡಿ ನೆನಪು ಮಾತ್ರ.

ನಾರಾಯಣರೆಡ್ಡಿ ಓದಿದ್ದು ಕೇವಲ 8ನೇ ತರಗತಿ. ಆದರೆ, ಅವರೊಂದು ಕೃಷಿ ವಿಶ್ವವಿದ್ಯಾಲಯವೇ ಆಗಿದ್ದರು. ಏಳೆಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ದೇಶ-ವಿದೇಶಗಳ ಕೃಷಿ ವಿದ್ಯಾರ್ಥಿಗಳಿಗೆ ಅವರು ‘ಮೇಷ್ಟ್ರು’. ಕೃಷಿ ಸಂಬಂಧಿಸಿದಂತೆ ನೂರಾರು ಉಪನ್ಯಾಸಗಳನ್ನು ನೀಡಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದರು.

ಅಂದಹಾಗೆ, ಕೃಷಿಗೂ ಮುನ್ನ ನಾರಾಯಣ ರೆಡ್ಡಿ ಹೋಟೆಲ್‌ನಲ್ಲಿ ಲೋಟ ತೊಳೆದಿದ್ದರು. ಟ್ರಾನ್ಸ್‌ಪೋರ್ಟ್‌ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿದ್ದರು. ಹೀಗೆ ಬದುಕು ಕಟ್ಟಿಕೊಳ್ಳುವುದರಲ್ಲೇ ತನ್ನ ಅರ್ಧ ಜೀವನ ಕಳೆದುಹೋಯ್ತು ಎಂದು ಹಲವು ವೇದಿಕೆಗಳಲ್ಲಿ ಅವರು ಹೇಳಿದ್ದರು. ಎಲ್ಲೆಡೆ ತಿರುಗಾಗಿ 8 ವರ್ಷಗಳ ನಂತರ ಹಳ್ಳಿಗೆ ಹಿಂತಿರುಗಿದ್ದರು. ತಂದೆಯ ಒಂದೂವರೆ ಎಕರೆ ಇದ್ದ ಜಮೀನಿನಲ್ಲಿ ದುಡಿದು ಸಂಗ್ರಹಿಸಿಟ್ಟ 45 ಸಾವಿರ ರೂ.ನಿಂದ ಜಮೀನು ಖರೀದಿಸಿ, ವ್ಯವಸಾಯದಲ್ಲಿ ತೊಡಗಿಕೊಂಡವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next