ಹುಬ್ಬಳ್ಳಿ: ಮುಂಗಾರು ಹಂಗಾಮಿಗೆ ಅನ್ನದಾತರು ಸಜ್ಜಾಗಿದ್ದು, ಮುಂಗಾರು ಮಳೆ ಸಕಾಲಕ್ಕೆ ಪ್ರವೇಶಿಸುವ ನಿರೀಕ್ಷೆಯೂ ಇದೆ. ಮುಂಗಾರು ಹಂಗಾಮು ಕೃಷಿಗೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದ ರೀತಿಯ ದಾಸ್ತಾನು ಹಾಗೂ ವಿವಿಧ ರೀತಿಯ ಸೌಲಭ್ಯ, ರ್ಗದರ್ಶನಕ್ಕೆ ತಾಲೂಕು ಕೃಷಿ ಇಲಾಖೆ ಸಕಲ ರೀತಿಯಿಂದ ಸಜ್ಜಾಗಿದೆ.
ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ತಾಲೂಕುಗಳಲ್ಲಿ ಒಟ್ಟು 73 ಸಾವಿರ ಹೆಕ್ಟೇರ್ ಕೃಷಿ ಜಮೀನು ಇದ್ದು, ಮುಂಗಾರು ಹಂಗಾಮಿಗೆ 45,500 ಹೆಕ್ಟೇರ್ ಭೂಮಿ ಬಿತ್ತನೆ ಮಾಡುವ ಸಾಧ್ಯತೆ ಇದೆ. ಮಳೆ ಹೆಚ್ಚಾದರೆ ಬಿತ್ತನೆ ಕ್ಷೇತ್ರದ ಪ್ರಮಾಣ ಹೆಚ್ಚಾಗಲಿದೆ. ಮುಂಗಾರು ಬಿತ್ತನೆಗಾಗಿ ರೈತರು ಈಗಾಗಲೇ ತಮ್ಮ ಜಮೀನುಗಳನ್ನು ಸಜ್ಜು ಮಾಡಿಕೊಂಡಿದ್ದು, ಹಲವು ಕಡೆಗಳಲ್ಲಿ ಅಡ್ಡ ಹಾಗೂ ಮುಂಗಾರು ಪೂರ್ವ ಮಳೆಗಳು ಬಿದ್ದಿದ್ದರಿಂದ ಇನ್ನಷ್ಟು ಮಳೆಯಾದರೆ ಬಿತ್ತನೆ ಆರಂಭಿಸುವ ತಯಾರಿಯಲ್ಲಿದ್ದಾರೆ.
ಎರಡು ತಾಲೂಕುಗಳಲ್ಲಿ ಈ ಬಾರಿ ಮುಂಗಾರಿನಲ್ಲಿ ಗೋವಿನ ಜೋಳ 7,527 ಹೆಕ್ಟೇರ್, ಹೆಸರು 18,000 ಹೆಕ್ಟೇರ್, ಶೇಂಗಾ 5,200 ಹೆಕ್ಟೇರ್, ಸೋಯಾಬಿನ್ 9,400 ಹೆಕ್ಟೇರ್, ಹತ್ತಿ 9,700 ಹೆಕ್ಟೇರ್ ಬಿತ್ತನೆ ನಿರೀಕ್ಷೆ ಹೊಂದಲಾಗಿದೆ. ಹೆಸರು, ಸೋಯಾಬಿನ್, ಉದ್ದು, ತೊಗರಿ, ಗೋವಿನ ಜೋಳ, ಶೇಂಗಾ ಬೀಜಗಳ ಬೇಡಿಕೆಯಂತೆ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಸೋಮವಾರದಿಂದ ಇಲಾಖೆಗೆ ವಿತರಣೆ ಮಾಡಲಾಗುತ್ತದೆ.
ಬೀಜ-ರಸಗೊಬ್ಬರ ದಾಸ್ತಾನು: ಇನ್ನೆರಡು ಮೂರು ದಿನಗಳಲ್ಲಿ ಸುಮಾರು 3,200 ಹೆಕ್ಟೇರ್ ಸೋಯಾಬಿನ್, 380 ಕ್ವಿಂಟಲ್ ಹೆಸರು, 80 ಕ್ವಿಂಟಲ್ ಉದ್ದು, 15 ಕ್ವಿಂಟಲ್ ತೊಗರಿ, 325 ಕ್ವಿಂಟಲ್ ಶೇಂಗಾ, 280 ಕ್ವಿಂಟಲ್‌ಗೋವಿನ ಜೋಳ ಬೀಜಗಳು ದಾಸ್ತಾನು ಆಗಲಿದೆ. ಇಲಾಖೆಯಿಂದ ಈಗಾಗಲೇ ರೈತರಿಗೆ ಬೇಕಾಗುವ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಸದ್ಯ ಇಲಾಖೆಯಿಂದ ಯೂರಿಯಾ ಸೊಸೈಟಿಯಲ್ಲಿ 132, ಖಾಸಗಿಯಾಗಿ 150 ಟನ್, ಡಿಎಪಿ 497 ಟನ್, ಕಾಂಪ್ಲೆಕ್ಸ್ 356 ಟನ್,
ಎಂಒಪಿ 2 ಟನ್ ದಾಸ್ತಾನು ಇರಿಸಲಾಗಿದೆ. ಇದಲ್ಲದೆ, ಖಾಸಗಿಯಾಗಿಯೂ ಮಾರುಕಟ್ಟೆಯಲ್ಲಿ ರಸಗೊಬ್ಬರ ಹೇರಳ ದಾಸ್ತಾನು ಇದೆ.
ವಿತರಣೆಗೆ ವ್ಯವಸ್ಥೆ: ರೈತರಿಗೆ ಬೇಕಾಗುವ ಬಿತ್ತನೆ ಬೀಜಗಳು, ರಸಗೊಬ್ಬರಗಳನ್ನು ಆಯಾ ತಾಲೂಕು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುವುದು. ಅದಕ್ಕಾಗಿ ಶಿರಗುಪ್ಪಿ ರೈತ ಸಂಪರ್ಕ ಕೇಂದ್ರದ ಜೊತೆಯಲ್ಲಿ ಬ್ಯಾಹಟ್ಟಿ, ಕುಸುಗಲ್ಲ ಗ್ರಾಮದಲ್ಲಿ ಕೇಂದ್ರಗಳನ್ನು ತೆರೆಯಲಾಗುವುದು. ನಗರ ವ್ಯಾಪ್ತಿಯಲ್ಲಿ ಎಪಿಎಂಸಿ ಹಾಗೂ ಬಂಕಾಪುರ ವೃತ್ತ ರೈತ ಸಂಪರ್ಕ ಕೇಂದ್ರ, ಛಬ್ಬಿ ಹೋಬಳಿ ವ್ಯಾಪ್ತಿಗೆ ನೂಲ್ವಿ ಹಾಗೂ ಅಂಚಟಗೇರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯುವ ಮೂಲಕ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಅಗತ್ಯ ಮಳೆ ನಿರೀಕ್ಷೆ: ತಾಲೂಕಿನಾದ್ಯಂತ ಸೂಕ್ತ ಸಮಯ ದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಮಳೆ ಆರಂಭವಾಗಬೇಕಾಗಿತ್ತು. ಆದರೆ ಇದುವರೆಗೂ ಆಗಿಲ್ಲ, ಹವಾಮಾನ ಇಲಾಖೆಯ ಅನುಸಾರ ಮಳೆಯಿಂದ ಯಾವುದೇ ತೊಂದರೆಯಾಗುವುದಿಲ್ಲವಂತೆ.
ಮುಂಗಾರು ಬಿತ್ತನೆಗೆ ಈಗಾಗಲೇ ಕೃಷಿ ಇಲಾಖೆಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ದಾಸ್ತಾನು ಕಾರ್ಯ ಸೋಮವಾರದಿಂದ ಮಾಡಲಾಗುತ್ತಿದ್ದು, ಇನ್ನೆರಡು ಮೂರು ದಿನಗಳಲ್ಲಿ ಬೀಜದ ದಾಸ್ತಾನು ಕೆಲಸ ಆಗಲಿದೆ. ಮುಂದಿನ ವಾರದಲ್ಲಿ ಬಿತ್ತನೆ ಬೀಜ ವಿತರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ. ಜೊತೆಗೆ ರಸಗೊಬ್ಬರವೂ ಸಹ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದ್ದು, ರೈತರಿಗೆ ಅಗತ್ಯಕ್ಕೆ ತಕ್ಕಂತೆ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.
ರಾಜಶೇಖರ ಅನಗೌಡರ,
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ಬಸವರಾಜ ಹೂಗಾರ