Advertisement

ಕೃಷಿ ಕಾಲೇಜುಗಳಿಗೆ ಅವಕಾಶವಿಲ್ಲ

11:08 AM Jul 14, 2018 | |

ವಿಧಾನಸಭೆ: ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ವಿರೋಧಿಸಿ ಸರ್ಕಾರಿ ಕೃಷಿ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಕೃಷಿ ಸಂಬಂಧಿ ಕೋರ್ಸ್‌ ಆರಂಭಿಸಲು ನೀಡಿದ್ದ ಅವಕಾಶವನ್ನು ಹಿಂಪಡೆಯಲು ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಶುಕ್ರವಾರ ಅನುಮೋದನೆ ನೀಡಿದೆ.

Advertisement

ರೈ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ, ಆರೋಗ್ಯ ವಿಜ್ಞಾನಗಳು, ಕೃಷಿ ವಿಜ್ಞಾನಗಳು ಮತ್ತು ತಂತ್ರಜ್ಞಾನ, ವ್ಯವಸ್ಥಾಪನೆ ಮತ್ತು ತಂತ್ರಜ್ಞಾನ, ನೈಸರ್ಗಿಕ ವಿಜ್ಞಾನಗಳು, ಮಾನವಿಕಗಳು ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ ಆರಂಭಿಸಲು ಈ ಹಿಂದೆ ಅನುಮತಿ ನೀಡಲಾಗಿತ್ತು.

ಇದೀಗ ತಿದ್ದುಪಡಿ ವಿಧೇಯಕದಲ್ಲಿ ಕೃಷಿ ವಿಜ್ಞಾನಗಳು ಮತ್ತು ತಂತ್ರಜ್ಞಾನ ಮತ್ತು ಕೃಷಿ ವಿಜ್ಞಾನಗಳು ಎಂಬ ಪದಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಹೀಗಾಗಿ ಇನ್ನು ಮುಂದೆ ರೈ ತಾಂತ್ರಿಕ ವಿವಿ ಕೃಷಿ ಮತ್ತು ಭೂ ವಿಜ್ಞಾನಗಳಿಗೆ ಸಂಬಂಧಿಸಿದ ಕೋರ್ಸ್‌ ನಡೆಸುವಂತಿಲ್ಲ.

ಆದರೆ, ರೈ ತಾಂತ್ರಿಕ ವಿವಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಿ ಆರಂಭಿಸಿರುವ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಅಂತಹ ಸುಮಾರು 2000 ವಿದ್ಯಾರ್ಥಿಗಳ 4 ವರ್ಷದ ಕೋರ್ಸ್‌ ಪೂರೈಸುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಮತ್ತೆ ಹೊಸದಾಗಿ ಕೃಷಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ.

ನಿಯಮ ಉಲ್ಲಂಘನೆ: ಉನ್ನತ ಶಿಕ್ಷಣ ಸಚಿವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು (ತಿದ್ದುಪಡಿ) ವಿಧೇಯಕ-2018ನ್ನು ಮಂಡಿಸಿದರು. ರೈ ತಾಂತ್ರಿಕ ವಿವಿ ಕೃಷಿಗೆ ಸಂಬಂಧಿಸಿದ ಪದವಿ ಕೋರ್ಸ್‌ಗಳನ್ನು ಆರಂಭಿಸಿದೆಯಾದರೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ.

Advertisement

ಸರ್ಕಾರಿ ಕೃಷಿ ಕಾಲೇಜುಗಳಿಗೆ ನಿಗದಿಪಡಿಸಿರುವ ಮಾನದಂಡ ಅನುಸರಿಸುತ್ತಿಲ್ಲ. ಅಲ್ಲದೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ಐಸಿಎಆರ್‌) ಮಾನಂದಂಡ ಮತ್ತು ನಿಯಂತ್ರಣದ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಈ ಕಾರಣಕ್ಕಾಗಿ ಕೃಷಿ ವಿಜ್ಞಾನಗಳು ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸಲು 2012ರ ಕಾಯ್ದೆಯಲ್ಲಿ ನೀಡಿದ್ದ ಅವಕಾಶ ಹಿಂಪಡೆಯಲು ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದರು.

ವಿಧೇಯಕವನ್ನು ಸ್ವಾಗತಿಸಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಸುರೇಶ್‌ಕುಮಾರ್‌, ಅರಗ ಜ್ಞಾನೇಂದ್ರ, ಅರವಿಂದ ಲಿಂಬಾವಳಿ, ಪಿ.ರಾಜೀವ್‌, ಖಾಸಗಿ ವಿವಿಯಲ್ಲಿ ಕೃಷಿ ಕೋರ್ಸ್‌ಗೆ ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಆ ವಿವಿಯಲ್ಲೇ ಪದವಿ ಪೂರೈಸುವ ಬದಲು ಅವರನ್ನು ಸರ್ಕಾರಿ ಕೃಷಿ ಕಾಲೇಜುಗಳಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಆದರೆ, 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಬಳಿಕ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅಂಗೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next