Advertisement

ಗರಿಗೆದರಿದ ಕೃಷಿ ಚಟುವಟಿಕೆ

11:35 AM May 19, 2022 | Team Udayavani |

ಕಟಪಾಡಿ: ನಿಗದಿತ ಅವಧಿಗೆ ಪೂರ್ವ ದಲ್ಲಿ ಧಾರಾಕಾರವಾಗಿ ಮಳೆಯು ಸುರಿದ ಪರಿಣಾಮ ಕರಾವಳಿಯ ವಿವಿಧೆಡೆ ಕೃಷಿ ಚಟುವಟಿಕೆಯು ಗರಿಗೆದರಿದೆ. ಗದ್ದೆಗಳ ಉಳುಮೆ ಕೆಲಸ ಕಾರ್ಯ ಆರಂಭಗೊಂಡಿದೆ. ಉಳುಮೆಯ ಸಂದರ್ಭ ನೂರಾರು ಸಂಖ್ಯೆಯಲ್ಲಿ ಕೊಕ್ಕರೆಗಳು ಸಂತಸದಿಂದ ಹಾರಾಡುವ ದೃಶ್ಯವು ಮಟ್ಟು ಭಾಗದಲ್ಲಿ ಕಂಡು ಬಂದಿದೆ.

Advertisement

ಗದ್ದೆಯನ್ನು ಯಾಂತ್ರೀಕೃತ ಉಳುಮೆ ಮಾಡುವ ಸಂದರ್ಭ ಕೊಕ್ಕರೆಗಳು ರಾಶಿ ರಾಶಿಯಾಗಿ ಉಳುಮೆ ಯಂತ್ರದ ಬೆನ್ನ ಹಿಂದೆ ಮುಂದೆ ಹಾರಾಡುತ್ತಾ, ಉಳುಮೆ ಯಂತ್ರದ ಯಾವುದೇ ಹೆದರಿಕೆ ಇಲ್ಲದೆ ತಮ್ಮ ಆಹಾರವನ್ನು ಅರಸುತ್ತಿರುವುದು ಕಂಡುಬಂತು.

ಮಟ್ಟುಗುಳ್ಳಕ್ಕೆ ಖೊಕ್‌, ಭತ್ತದ ಬೇಸಾಯ

ನಿಗದಿತ ಅವಧಿಗೆ ಪೂರ್ವದಲ್ಲಿ ಮಳೆಯು ಸುರಿದ ಪರಿಣಾಮ ಮಟ್ಟುಗುಳ್ಳದ ಕೃಷಿಯನ್ನು ಮೊಟಕು ಗೊಳಿಸಲಾಗಿದೆ. ಭತ್ತದ ಬೇಸಾಯಕ್ಕೆ ಮುಂದಡಿ ಇರಿಸಲಾಗಿದೆ. ಮಟ್ಟು ಭಾಗದಲ್ಲಿ ಸುಮಾರು 400 ಎಕರೆಗೂ ಮಿಕ್ಕಿ ಭತ್ತದ ಬೇಸಾಯ ನಡೆಸಲಾಗುತ್ತದೆ ಎಂದು ಕೃಷಿಕರಾದ ಪ್ರದೀಪ್‌ ಪೂಜಾರಿ, ಕೊರಗ ಪೂಜಾರಿ, ಹರೀಶ್‌ ಪೂಜಾರಿ, ಯಶೋಧರ ಮಟ್ಟು, ಸಂತೋಷ್‌ ಮಾಹಿತಿ ನೀಡಿದ್ದಾರೆ.

Advertisement

ರಾಷ್ಟ್ರೀಕೃತ ಬ್ಯಾಂಕ್‌ ಸಣ್ಣ ರೈತರನ್ನು ಉತ್ತೇಜಿಸಲಿ

ನಗರೀಕರಣದ ಭರದಲ್ಲಿ ಕೃಷಿ ಚಟುವಟಿಕೆಗಳು ನಿಲುಗಡೆಗೊಳ್ಳುವ ಹಂತದಲ್ಲಿ ಇದೆ. ಆದರೂ ಮಟ್ಟು ಭಾಗದಲ್ಲಿ ಯಾಂತ್ರೀಕೃತ ಕೃಷಿ ಚಟುವಟಿಕೆಗೆ ರೈತಾಪಿ ವರ್ಗವು ಮುಂದಡಿ ಇರಿಸುತ್ತಿದೆ. ಆದರೆ ಟ್ರ್ಯಾಕ್ಟರ್‌ ಖರೀದಿಗೆ ಯಾವುದೇ ಸಬ್ಸಿಡಿ ಅಥವಾ ಸಾಲ ಸೌಲಭ್ಯವು ಲಭಿಸುತ್ತಿಲ್ಲ.

ರಾಷ್ಟ್ರೀಕೃತ ಬ್ಯಾಂಕ್‌ ರೈತಾಪಿ ವರ್ಗದವರ ಚಟುವಟಿಕೆಗೆ ಪ್ರೋತ್ಸಾಹ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ಕನಿಷ್ಠ 6 ಎಕರೆ ಕೃಷಿ ಭೂಮಿ ಬೇಕೆಂಬ ಕಾರಣವನ್ನು ನೀಡುತ್ತಿದೆ. ಆ ನಿಟ್ಟಿನಲ್ಲಿ ಸಣ್ಣ ರೈತರನ್ನು ಸಬ್ಸಿಡಿ ಮುಖಾಂತರ ಉತ್ತೇಜಿಸಬೇಕಾದ ಆವಶ್ಯಕತೆ ಇದೆ ಎಂದು ಸುಜನ್‌ ಸಹಿತ ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಫೋರ್‌ ವ್ಹೀಲ್‌ ಡ್ರೈವ್‌ ಟ್ರ್ಯಾಕ್ಟರ್‌

ದಿನದ 14 ಗಂಟೆ ಉಳುವ ಸಾಮರ್ಥ್ಯವುಳ್ಳ ಹೊಸ ಫೋರ್‌ವ್ಹೀಲ್‌ ಡ್ರೈವ್‌ ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಲಾಗುತ್ತದೆ. ಗದ್ದೆಯಲ್ಲಿ ಹೂತು ಹೋಗುವ ಭಯ ಇಲ್ಲ. ಕಬ್ಬಿಣದ ಚಕ್ರವನ್ನು ಹೆಚ್ಚುವರಿ ಜೋಡಿಸುವ ಆವಶ್ಯಕತೆ ಇಲ್ಲ. ಹೊರರಾಜ್ಯ, ಹೊರ ಜಿಲ್ಲೆಗಳ ಟಿಲ್ಲರ್‌, ಟ್ರ್ಯಾಕ್ಟರ್‌ತಿಲಾಂಜಲಿ ಇರಿಸಲಾಗುತ್ತದೆ ಎಂದು ಈ ಭಾಗದ ಕೃಷಿಕರು ಸಂತಸ ವ್ಯಕ್ತಪಡಿಸುತ್ತಿದ್ದು, ಆಳವಾದ ಉಳುಮೆ ಟ್ರ್ಯಾಕ್ಟರ್‌ ಮೂಲಕ ಸಾಧ್ಯವಾಗುತ್ತದೆ. ಮಟ್ಟು ಭಾಗದಲ್ಲಿ ಬಹುತೇಕ ಹೆಚ್ಚಿನ ರೈತರು ಒಟ್ಟಾಗಿ ಸಹೋದರರಂತೆ ಕೃಷಿ ಚಟುವಟಿಕೆ ನಿರತರಾಗುತ್ತೇವೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next