Advertisement
ಕಳೆದ ಕೆಲ ವರ್ಷಗಳಿಂದ ಸಮರ್ಪಕ ಮಳೆಯ ಕೊರತೆ ಎದುರಿಸುತ್ತಿದ್ದ ಜಿಲ್ಲೆಯ ರೈತರು ಈ ಬಾರಿ ಮುಂಗಾರು ಆರಂಭದಲ್ಲೇ ಉತ್ತಮ ಮಳೆ ಸುರಿದಿದೆ. ಕಳೆದ ಮಾರ್ಚ್ 1 ರಿಂದ ಮೇ.20ರ ವರೆಗೆ ಸಾಧಾರಣವಾಗಿ 63 ಮಿ.ಮೀ. ಸುರಿಯಬೇಕಿದ್ದ ಮಳೆಯು 97 ಮಿ.ಮೀ. ಮಳೆಯಾಗಿದೆ. ಪರಿಣಾಮ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆಯಾಶ್ರಿತ ಪ್ರದೇಶ ಹೊಂದಿರುವ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ತಾಲೂಕುಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಕೃಷಿ ಚಟುವಟಿಕೆಗಳು ಚಾಲನೆ ಪಡೆದುಕೊಂಡಿವೆ. ರೈತರು ಸಹ ಬೀಜ ಬಿತ್ತನೆಗಾಗಿ ಹೊಲವನ್ನು ಹದ ಮಾಡಿಕೊಳ್ಳುತ್ತಿದ್ದಾರೆ.
ಮಳೆಯಾಶ್ರಿತ ಪ್ರದೇಶವನ್ನು ಹೊಂದಿದೆ. ಕಳೆದ ವರ್ಷ 3.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ನಿಗದಿತ ಗುರಿ ಹೊಂದಿದ್ದ ಕೃಷಿ ಇಲಾಖೆ 3.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 6.5 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿತ್ತು. ಈ ಬಾರಿ 3.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ನಿಗದಿತ ಗುರಿ ಇದ್ದು, 7.20 ಮೆಟ್ರಿಕ್ ಟನ್ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಸುರಿಯದ ಮಳೆ ಈ ಬಾರಿ ಶೇ.96 ರಷ್ಟು ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಇದಕ್ಕಾಗಿ 57850 ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆ ಇದ್ದು, ಕರ್ನಾಟಕ ಬೀಜ ನಿಗಮ ಮಂಡಳಿಯಲ್ಲಿ ಈಗಾಗಲೇ 15 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಈ ಬಿತ್ತನೆ ಬೀಜಗಳನ್ನು ಜಿಲ್ಲೆಯಲ್ಲಿರುವ 27 ರೈತ ಸಂಪರ್ಕ ಕೇಂದ್ರಗಳ ಮೂಲಕವೇ ರೈತರಿಗೆ ಬೀಜಗಳನ್ನು ವಿತರಿಸಲಾಗುತ್ತದೆ. 5 ಎಕರೆವರೆಗೂ ಜಮೀನುವುಳ್ಳರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತದೆ. ಇನ್ನು ನೀರಾವರಿ ಪ್ರದೇಶದಲ್ಲಿ ಜೂನ್, ಜುಲೈ ತಿಂಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಳ್ಳಲಿದೆ. ಈ ಬಾರಿ ಶೇ.96 ರಷ್ಟು ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ. ಅಲ್ಲದೇ, ಈ ಬಾರಿ ರಸಾಯನಿಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದಂತೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜತೆಗೆ ಕಳೆದ ಬಾರಿಯಂತೆ ಈ ಬಾರಿಯೂ ಕೂರಿಗೆ ಬಿತ್ತನೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಇದರೊಂದಿಗೆ ಜಿಲ್ಲೆಯ ಮಳೆಯಾಧಾರಿತ ಮತ್ತು ನೀರಾವರಿ ಪ್ರದೇಶದಲ್ಲಿ ಮಾಡಲಾಗುವ ನಿರೀಕ್ಷಿತ ಪ್ರಮಾಣಕ್ಕೆ ತಕ್ಕಂತೆ ಅಗತ್ಯ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಜಿಲ್ಲೆಯಲ್ಲಿ ಮಳೆ ವಿವರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಸದಾ ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ ವರಣನ ಕೃಪೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ಸೋಮವಾರ ರಾತ್ರಿ ಜಿಲ್ಲೆಯಲ್ಲಿ ಒಟ್ಟು 217.5 ಮಿ.ಮೀ. ಮಳೆಯಾಗಿದೆ. ಬಳ್ಳಾರಿ 3.3 ಮಿ.ಮೀ., ಹೂವಿನಹಡಗಲಿ 56.4, ಹಗರಿಬೊಮ್ಮನಹಳ್ಳಿ 94.6, ಹೊಸಪೇಟೆ 8.6, ಕೂಡ್ಲಿಗಿ 35.4. ಸಂಡೂರು 19.2ಮಿ.ಮೀ.ನಷ್ಟು ಮಳೆ ಪ್ರಮಾಣ ದಾಖಲಾಗಿದೆ ಮಾರ್ಚ್ 1 ರಿಂದ ಮೇ.20ರ ವರೆಗೆ ನಿಗದಿಗಿಂತ ಅಧಿಕ ಮಳೆಯಾಗಿದೆ. ಬಳ್ಳಾರಿ, ಸಿರುಗುಪ್ಪ ಹೊರತುಪಡಿಸಿ,
ಇನ್ನುಳಿದ ಪಶ್ಚಿಮ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಆರಂಭವಾಗಿದೆ. ಈ ಬಾರಿ 3.65 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ. ಜಿಲ್ಲೆಯ 27 ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಸಿದ್ಧತೆ ಮಾಡಿದ್ದು, ಇನ್ನು ಮೂರ್‍ನಾಲ್ಕು ದಿನಗಳಲ್ಲಿ ರೈತರಿಗೆ ತಲುಪಿಸಲಾಗುತ್ತದೆ. ಇನ್ನು ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ನೀರಾವರಿ ಪ್ರದೇಶದಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು, ಕೃಷಿ ಚಟುವಟಿಕೆ ಜೂನ್-ಜುಲೈ ತಿಂಗಳಲ್ಲಿ ಚಾಲನೆ ಸಿಗಲಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ದಿವಾಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊಲದತ್ತ ಮುಖ ಮಾಡಿದ ಅನ್ನದಾತ
ಕಂಪ್ಲಿ : ಕಂಪ್ಲಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿದ ಉತ್ತಮ ಮಳೆಯಿಂದಾಗ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಮಳೆಯಾಶ್ರಿತ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಆರಂಭದ ಪೂರ್ವದಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರ, ಸಹಕಾರಿ ಸಂಘ, ಇತರೆ ಖಾಸಗಿ ಬಿತ್ತನೆ ಬೀಜ ಮಾರಾಟ ಅಂಗಡಿಗಳಲ್ಲಿ ಈಗಾಗಲೇ ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಮುಂದಾಗುತ್ತಿದ್ದಾರೆ. ಕಳೆದ ರಾತ್ರಿ ಕಂಪ್ಲಿ ಭಾಗದಲ್ಲಿ 14 ಮಿ.ಮೀ. ಮಳೆಯಾಗಿದ್ದು, ರೈತರು ಬಿತ್ತನೆ ಪೂರ್ವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಮಾಗಿ ಉಳುಮೆಯಲ್ಲಿ ನಿರತರಾಗಿದ್ದಾರೆ. ಅಲ್ಲದೇ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಅನುಕೂಲವಾಗಲು ವಿವಿಧ ತಳಿಯ ಬಿತ್ತನೆ ಬೀಜಗಳನ್ನು ಕೃಷಿ ಅಧಿಕಾರಿಗಳು ದಾಸ್ತಾನು ಮಾಡಿಕೊಂಡಿದ್ದಾರೆ. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಭತ್ತ, ತೊಗರಿ, ಸೇರಿದಂತೆ ಅನೇಕ ಬೀಜಗಳನ್ನು ಮಾರಾಟ ಮಾಡುತ್ತಿದ್ದು, ಭತ್ತ ಬಿಪಿಟಿ-5204- 50 ಕ್ವಿಂಟಲ್, ಭತ್ತ ಎಂಟಿಯು-1010-30 ಕ್ವಿಂಟಲ್, ತೊಗರಿ-ಟಿ.ಎಸ್.-3ಆರ್ 120 ಕೆ.ಜಿ. ಬಿತ್ತನೆ ಬೀಜಗಳ ದಸ್ತಾನು ಇದ್ದು, ರೈತರು ತಮ್ಮ ಜಮೀನುಗಳ ಪಹಣಿ ತಂದು ರಿಯಾಯಿತಿ ಬೀಜ ಪಡೆಯಬಹುದಾಗಿದೆ. ಸಜ್ಜೆ, ನವಣೆ, ಸೂರ್ಯಕಾಂತಿ, ಮೆಕ್ಕೆಜೋಳ,
ಹೆಸರು,ಅಲಸಂದಿ ಬೀಜ ಶೀಘ್ರದಲ್ಲಿ ತರಿಸಿ ದಾಸ್ತಾನು ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಎಸ್. ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಮೃದ್ಧಿ ಮಳೆ ಇಲ್ಲದಿರುವುದರಿಂದ ರೈತರು ಅಧಿಕ ನೀರಿನ ಬೆಳೆ ಬೆಳೆಯದೆ
ಮಿತ ನೀರಾವರಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಅದರಲ್ಲೂ ಮುಖ್ಯವಾಗಿ ರೈತರು ಕೂರಿಗೆ ಭತ್ತ ಬಿತ್ತನೆಗೆ ಹೆಚ್ಚಿನ ಮಹತ್ವ ನೀಡಬೇಕು. ರೈತರು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು. (8277930451, 8277930452, 8277930453) ಮೊಬೈಲ್ ಸಂಪರ್ಕಿಸಲು ಕೋರಿದ್ದಾರೆ. ವೆಂಕೋಬಿ ಸಂಗನಕಲ್ಲು