ದೇವನಹಳ್ಳಿ: ಸತತ ಐದಾರು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ನಿಗದಿಗಿಂತ ಹೆಚ್ಚು ಮಳೆಯಾಗುತ್ತಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಜಿಲ್ಲೆಗೆ ಆಗಮಿಸಿರುವ ಯುವಕರು, ಕೃಷಿ ಮಾಡಲು ಮುಂದಾಗಿದ್ದು ಈ ಬಾರಿನಿಗದಿಗಿಂತ ಹೆಚ್ಚು ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಬಿತ್ತನೆಮಾಡಿದ್ದ ರಾಗಿ ಹಾಗೂ ಮಿಶ್ರ ತಳಿಗಳ ಬೆಳೆ ಸಮೃದ್ಧವಾಗಿ ಬೆಳೆಯುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ 499ಮಿ.ಮೀ ಮಳೆಗೆ 517 ಮಿ.ಮೀ ಮಳೆ ಯಾಗಿ ಶೇ.4 ಹೆಚ್ಚು ಮಳೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆ 485ಮಿ.ಮೀ ಮಳೆಗೆ 727 ಮಿ.ಮೀ ಮಳೆಯಾಗುವ ಮೂಲಕ ಶೇ.50 ಹೆಚ್ಚು ಮಳೆಯಾಗಿದೆ. ಇನ್ನೂ ಕಳೆದ 3-4 ದಿನಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 3-4 ದಿನಗಳಿಂದ ಸುರಿದ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ರಾಗಿ, ಜೋಳ, ತೊಗರಿ, ಅವರೆ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಇಲಾಖೆ ಗುರಿ ಮೀರಿದ ರಾಗಿ ಬಿತ್ತನೆ: ಜಿಲ್ಲೆಯಲ್ಲಿ 60,107 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. 58,563 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯವಾಗಿದೆ. ರಾಗಿ ಜಿಲ್ಲೆಯಲ್ಲಿ 41,326 ಹೆಕ್ಟೇರ್ ಗುರಿ ಹೊಂದಿದ್ದು, 41,338ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜೋಳ 10295ಹೆಕ್ಟೇರ್ ಗುರಿ ಹೊಂದಿದ್ದು, 10622ಹೆಕ್ಟೇರ್ ಸಾಧನೆಯಾಗಿದೆ. ತೊಗರಿ 1213 ಹೆಕ್ಟೇರ್ ಗುರಿ ಇದ್ದು, 981ಹೆಕ್ಟೇರ್ ಅಲಸಂದೆ 511 ಹೆಕ್ಟೇರ್‌ನಲ್ಲಿ 519ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗುತ್ತಿದೆ.
ಜಿಲ್ಲೆಯಲ್ಲಿ ಯೂರಿಯಾ ಕೊರತೆ ನಿವಾರಣೆ : ಈಗಾಗಲೇ ಜಿಲ್ಲೆಯ 4ತಾಲೂಕುಗಳಲ್ಲಿ ಯೂರಿ ಯಾ ಸಮಸ್ಯೆ ಬಾರದಂತೆ 180 ಟನ್ ಯೂರಿಯಾವನ್ನು ದಾಸ್ತಾನು ಇಡಲಾಗಿದೆ. ಮಳೆ ಬರುತ್ತಿರುವುದರಿಂದ ಯೂರಿಯಾ ರಸಗೊಬ್ಬರ ಗಳಿಗೆ ಹೆಚ್ಚು ಬೇಡಿಕೆ ಇದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆಯಾದರೂ ಅಥವಾ ಕಡಿಮೆ ಮಳೆಯಾದರೂ ರೈತರಿಗೆ ಸಂಕಷ್ಟ ಎದುರಾಗುತ್ತದೆ. ಈ ಬಾರಿಯ ಕುಂದಾಣ ಹೋಬಳಿ ಯಾದ್ಯಂತ ಉತ್ತಮ ಮಳೆಯಾಗಿದೆ. ಸಾಮಾನ್ಯವಾಗಿ ಹೂ ಬಿಡುವ ಹಂತದಲ್ಲಿ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಆಗುತ್ತಿರುವುದರಿಂದ ರಾಗಿ ಬೆಳೆಗೆ ತೇವಾಂಶ ಹೆಚ್ಚುತ್ತಿದ್ದು ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ. ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿದರೆ, ರೈತರು ಮತ್ತಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ.
–ಎಚ್.ಎಂ.ರವಿಕುಮಾರ್, ದೇವನಹಳ್ಳಿ
ಕೃಷಿಕ ಸಮಾಜದ ನಿರ್ದೇಶಕ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರುಮಳೆಯಾಶ್ರಿತ ಬೆಳೆ ಬೆಳೆಯಲು ಎಲ್ಲಾ ವಿಧವಾದ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು ಉತ್ತಮ ಇಳುವರಿ ಬರುವ ಸಾಧ್ಯತೆಯಿದೆ.
–ಎಂ.ಸಿ.ವಿನುತಾ, ಜಿಲ್ಲಾ ಕೃಷಿ ಉಪ ನಿರ್ದೇಶಕಿ
-ಎಸ್.ಮಹೇಶ್