ಚಾಮರಾಜನಗರ: ರೈತ ಸಂಘಟನೆಗಳ ನಿರಂತರ ಹೋರಾಟದ ನಂತರ ಕೇಂದ್ರ ಸರ್ಕಾರ ನೂತನಕೃಷಿ ಕಾಯಿದೆ ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಹಿಂಪಡೆಯದೇ ಅದನ್ನೇಮುಂದುವರಿಸುತ್ತಿದೆ. ಇದು ನ್ಯಾಯಯುತ ಅಲ್ಲ. ರಾಜ್ಯ ಸರ್ಕಾರವೂ ಕೃಷಿ ಕಾಯಿದೆಹಿಂಪಡೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್‌ಉಪಾಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕೇಂದ್ರ ಸರ್ಕಾರ ಹಿಂತೆಗೆದುಕೊಂಡರೂ ರಾಜ್ಯ ಸರ್ಕಾರ ಈ ಕಾಯಿದೆ ಹಿಂಪಡೆಯದೇಇರುವುದು ಅನ್ಯಾಯ. ಈ ಬಗ್ಗೆ ಸದನದಲ್ಲಿಪ್ರತಿಪಕ್ಷದವರು ಪ್ರಶ್ನಿಸಿದರೆ, ಸಹಕಾರ ಸಚಿವ ಸೋಮಶೇಖರ್ ತಪ್ಪು ಮಾಹಿತಿ ನೀಡಿದ್ದಾರೆ.
ಎಪಿಎಂಸಿಯಲ್ಲಿ ಹಿಂದೆ ರೈತರಿಗೆ ದಂಡ ವಿಧಿಸಲಾಗುತ್ತಿತ್ತು. ಈಗ ಹೊಸ ಕಾಯಿದೆಯಲ್ಲಿ ಆ ರೀತಿಯಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ಸುಳ್ಳು. ಎಪಿಎಂಸಿಯಲ್ಲಿ ಹಿಂದೆ ದಂಡ ವಿಧಿಸುತ್ತಿರಲಿಲ್ಲ. ಖರೀದಿದಾರರಿಗೆ ದಂಡ ವಿಧಿಸಲಾಗುತ್ತದೆ ಎಂದರು.
ಹೊಸ ಕಾಯಿದೆಯಿಂದ ಎಪಿಎಂಸಿಗಳು ಎಷ್ಟು ಸೊರಗಿವೆ ಎಂದರೆ ಚಾಮರಾಜನಗರ ಎಪಿಎಂಸಿಯನ್ನೇ ನಿದರ್ಶನವಾಗಿ ತೆಗೆದುಕೊಂಡರೆ, ಕಾಯಿದೆಗೂ ಮುನ್ನ 2018-19 ರಲ್ಲಿ , 1.13ಕೋಟಿ ರೂ. ಆದಾಯ ಬಂದಿತ್ತು. ಅದುಬರಗಾಲ. ಆದರೂ ಸಹ ಉತ್ತಮ ಆದಾಯವಿತ್ತು.ಇನ್ನು 2019-20ನೇ ಸಾಲಿನಲ್ಲಿ 1.50 ಕೋಟಿ ರೂ.ಆದಾಯವಿತ್ತು. ಹೊಸ ಕಾಯಿದೆ ಬಂದ ನಂತರ,ಕಳೆದ ವರ್ಷ 60 ಲಕ್ಷ ರೂ. ಲಭಿಸಿದೆ. ಈ ವರ್ಷ ಕೇವಲ 17 ಲಕ್ಷ ಮಾತ್ರ ಆದಾಯ ಬಂದಿದೆ.ಇದರಿಂದಾಗಿ ಎಪಿಎಂಸಿಯಲ್ಲಿ ಉದ್ಯೋಗ ಕಡಿತಮಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಾದರೆ ಎಪಿಎಂಸಿ ಸುಧಾರಣೆ ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೇ ಹಿಂದೆ ಅರಿಶಿನ, ತೆಂಗಿನ ಬೆಲೆ ಕುಸಿದಾಗ ಎಪಿಎಂಸಿ ವತಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಈಗ ಬೆಂಬಲ ಬೆಲೆಯೂ ಇಲ್ಲದಂತಾಗಿದೆ. ಆತ್ಮನಿರ್ಭರ್ ಭಾರತ್ ಯೋಜನೆಯಡಿ, ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ನಮ್ಮಲ್ಲಿ ಅರಿಶಿನ ಆಯ್ಕೆಯಾಗಿದೆ.ಆದರೆ ಯೋಜನೆ ಘೋಷಿಸಲಾಯಿತೇ ಹೊರತು,ಅದನ್ನು ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ನಲ್ಲೂರು ಸೋಮೇಶ್ವರ,ಕುಮಾರನಾಯಕ್, ಟಗರಪುರ ಬಸವಣ್ಣ,ನಾಗವಳ್ಳಿ ನಂಜುಂಡಸ್ವಾಮಿ, ಮಹಾದೇವ ಸ್ವಾಮಿ ಹಾಜರಿದ್ದರು.