ಕಲಬುರಗಿ: ರಾಜ್ಯದಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಮಾತ್ರವಿದ್ದ ಕೃಷಿ ಇಲಾಖೆಯ ಜಾಗೃತ ದಳದ (ಕೋಶ) ವಿಭಾಗೀಯ ಕಚೇರಿಗಳ ಜತೆಗೆ ರಾಜ್ಯ ಸರ್ಕಾರ ಮತ್ತೆ ಎರಡು ವಿಭಾಗೀಯ ಕಚೇರಿಗಳನ್ನು ಮಂಜೂರಾತಿಗೊಳಿಸಿ ಆದೇಶ ಹೊರಡಿಸಿದೆ.
ಕೃಷಿ ಇಲಾಖೆ ಆಯುಕ್ತರು ಜು.2ರಂದು ಕಲಬುರಗಿ-ಮೈಸೂರು ಕೃಷಿ ಜಾಗೃತ ದಳದ ವಿಭಾಗೀಯ ಕಚೇರಿ ಹಾಗೂ ಹುದ್ದೆಗಳನ್ನು ಮಂಜೂರುಗೊಳಿಸಿ ಅಧಿಸೂಚನೆ ಹೊರಡಿಸಿದ್ದು, ಜು.5ರಂದು ಮೈಸೂರು ವಿಭಾಗೀಯ ಕಚೇರಿಯನ್ನು ಉದ್ಘಾಟನೆಗೊಳಿಸಿ ಕಾರ್ಯಾರಂಭಗೊಳಿಸಲಾಗುತ್ತಿದೆ. ಜಂಟಿ ಕೃಷಿ ನಿರ್ದೇಶಕರ ನೇತೃತ್ವದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕೃಷಿ ನಿರ್ದೇಶಕರು, ಜಾಗೃತ ದಳದ ವಿಭಾಗೀಯ ಕಚೇರಿ ಅಸ್ತಿತ್ವಕ್ಕೆ ಬರುವ ಮುಖಾಂತರ ವಿಭಾಗೀಯ ಕಚೇರಿಯ ಬಹು ದಿನಗಳ ಬೇಡಿಕೆ ಸಾಕಾರಗೊಳ್ಳುವಂತಾಗಿದೆ.
ಬೆಂಗಳೂರು ವಿಭಾಗದಲ್ಲಿದ್ದ ಹಲವು ಜಿಲ್ಲೆಗಳನ್ನು ಮೈಸೂರು ವಿಭಾಗಕ್ಕೆ ಹಾಗೂ ಬೆಳಗಾವಿ ವಿಭಾಗದಲ್ಲಿದ್ದ ಜಿಲ್ಲೆಗಳನ್ನು ಬೇರ್ಪಡಿಸಿ ಕಲಬುರಗಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಬೆಳಗಾವಿ ಕಚೇರಿ ಮಂಗಳವಾರ ಕಾರ್ಯಾರಂಭವಾಗುತ್ತಿದ್ದರೆ, ವಾರದೊಳಗೆ ಕಲಬುರಗಿ ವಿಭಾಗೀಯ ಕಚೇರಿ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ಮೈಸೂರಿನ ವಿಭಾಗೀಯ ಕಚೇರಿ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಾಗೂ ಕಲಬುರಗಿ ವಿಭಾಗೀಯ ಕಚೇರಿ ಕೋಟನೂರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಲಭ್ಯವಿರುವ ಕಟ್ಟಡದಲ್ಲಿ ಕಚೇರಿಗಳು ಕಾರ್ಯಾರಂಭವಾಗಲಿವೆ.
ಕೆಲಸ ಏನು?: ರೈತರಿಗೆ ನಕಲಿ ಬೀಜ, ಗೊಬ್ಬರ ವಿತರಣೆಯಲ್ಲಿ ಆಗುತ್ತಿರುವ ಮೋಸ ಹಾಗೂ ಹೆಚ್ಚಿನ ದರದಲ್ಲಿ ಕೃಷಿ ಮಾರಾಟ ಸೇರಿದಂತೆ ಇತರ ಅಕ್ರಮಗಳ ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಜಾಗೃತ ದಳದ ವಿಭಾಗೀಯ ಕಚೇರಿ ಪ್ರಮುಖವಾಗಿ ಕಾರ್ಯನಿರ್ವಹಿಸಲಿದೆ. ಈ ಮುಂಚೆ ಜಿಲ್ಲಾ ಮಟ್ಟದಲ್ಲಿ ಜಾಗೃತ ದಳವಿದ್ದು, ಆದರೆ ಸೂಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲದಿರುವುದಕ್ಕೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಆದರೆ ಅಸ್ತಿತ್ವಕ್ಕೆ ಬರುವ ಜಂಟಿ ಕೃಷಿ ನಿರ್ದೇಶಕರ ಜಾಗೃತ ದಳ ಸೂಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಿದೆ.
ಶೀಘ್ರ ವರದಿಗೆ ಸಹಕಾರಿ: ಜಿಲ್ಲಾ ಜಾಗೃತ ದಳಗಳು ದಾಳಿ ನಡೆಸುತ್ತಿವೆ. ಆದರೂ ಸಮರ್ಪಕ ಮಾಹಿತಿ ಕಲೆ ಹಾಕುವಲ್ಲಿ ಸೂಕ್ತ ವರದಿ ರೂಪಿಸುವಲ್ಲಿ ಹೆಚ್ಚು ಕ್ರಿಯಾಶೀಲತೆ ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ ಹೆಸರಿಗೆ ಮಾತ್ರ ದಾಳಿ ಎನ್ನುವಂತಾಗಿರುವುದರಿಂದ ಈ ವಿಭಾಗೀಯ ಕಚೇರಿ ಇಂತಹ ದಾಳಿಗಳ ವರದಿ ಪರಿಣಾಮಕಾರಿ ರೂಪಿಸುವಲ್ಲಿ ಹಾಗೂ ಬೇಗನೆ ವರದಿ ರೂಪಿಸಲು ವಿಭಾಗೀಯ ಕಚೇರಿಗಳ ಅನುಕೂಲವಾಗಲಿದೆ.
ಯಾವ್ಯಾವ ಹುದ್ದೆಗಳಿಗೆ ಮಂಜೂರಾತಿ? ಜಾಗೃತ ದಳದ ವಿಭಾಗೀಯ ಕಚೇರಿಗೆ ಜಂಟಿ ಕೃಷಿ ನಿರ್ದೇಶಕರು 1, ಉಪಕೃಷಿ ನಿರ್ದೇಶಕರು 1, ಸಹಾಯಕ ಕೃಷಿ ನಿರ್ದೇಶಕರು 1, ಕೃಷಿ ಅಧಿಕಾರಿ 1, ಅಧೀಕ್ಷರು 1, ಪ್ರಥಮ ದರ್ಜೆ ಸಹಾಯಕರು 1, ಟೈಪಿಸ್ಟ್ 1, ಡಿ ದರ್ಜೆ ನೌಕರರು 2 ಹಾಗೂ ವಾಹನ ಚಾಲಕರ 1 ಹುದ್ದೆಗಳು ಮಂಜೂರಾತಿಗೊಂಡಿವೆ.
ಜು.5ರಂದು ಮೈಸೂರು ಕೃಷಿ ಜಾಗೃತಿ ದಳದ ವಿಭಾಗೀಯ ಕಚೇರಿ ಉದ್ಘಾಟನೆ ನಡೆಯುತ್ತಿದ್ದು, ನಂತರ ಕಚೇರಿ ಕಾರ್ಯಾರಂಭಗೊಳ್ಳಲಿದೆ. ಕಲಬುರಗಿ ಕಚೇರಿ ಉದ್ಘಾಟನೆಗೂ ದಿನಾಂಕ ನಿಗದಿಯಾಗಲಿದೆ. ಒಟ್ಟಾರೆ ಬಹು ದಿನಗಳ ವಿಭಾಗೀಯ ಜಾಗೃತ ದಳ (ಕೋಶ) ಈಗ ಅಸ್ತಿತ್ವಕ್ಕೆ ಬಂದಂತಾಗಿದೆ.
ಬಿ.ಶರತ್, ಕೃಷಿ ಆಯುಕ್ತರು
*ಹಣಮಂತರಾವ ಭೈರಾಮಡಗಿ