Advertisement

ಕೃಷಿ ಸಮ್ಮಾನ್‌: ಹಣ ಹೊಂದಿಸಲು ಲೆಕ್ಕಾಚಾರ

11:45 PM Aug 15, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಪೂರಕವಾಗಿ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಹೆಚ್ಚುವರಿ 4000 ಸಾವಿರ ರೂ. ಪ್ರೋತ್ಸಾಹ ನೀಡುವ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಹೊಸ ಲೆಕ್ಕಾಚಾರಕ್ಕೆ ಮುಂದಾಗಿದೆ.

Advertisement

ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಘೋಷಣೆ ಮಾಡಿರುವ ಯೋಜನೆಗೆ ತಕ್ಷಣ ಹಣ ಹೊಂದಿಸುವುದು ಅತಿ ದೊಡ್ಡ ಸವಾಲಾಗಿದ್ದು, ಈ ಯೋಜನೆಗಾಗಿ ಹೊಸ ಸರ್ಕಾರ ಯಾವುದೇ ಬಜೆಟ್‌ನಲ್ಲಿ ಹಣ ಮೀಸಲಿಡದೇ ಇರುವುದರಿಂದ ಈಗ ಜಾರಿಯಲ್ಲಿರುವ ಯೋಜನೆಗಳಲ್ಲಿ ಹಣ ಹೊಂದಾಣಿಕೆ ಮಾಡಲು ಸಾಧ್ಯವಿದೆಯೇ ಎನ್ನುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ. ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಯಡಿಯೂರಪ್ಪ ರೈತರಿಗೆ ಎರಡು ಕಂತುಗಳಲ್ಲಿ 4000ರೂ ಹಣ ನೀಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಮೊದಲ ಕಂತಿನ 2000 ರೂ. ಮೊತ್ತವನ್ನು ಯೋಜನೆಗೆ ನೋಂದಾಯಿಸಿಕೊಂಡ 1 ಲಕ್ಷ ರೈತರಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ 2200 ಕೋಟಿ ರೂ ಅನುದಾನದ ಅಗತ್ಯವಿದೆ. ಮೊದಲ ಕಂತಿನ ಹಣ ಪಾವತಿಗೆ 1100 ಕೋಟಿ ರೂ ಹಾಗೂ ಎರಡನೇ ಕಂತಿಗೆ ಇಷ್ಟೇ ಮೊತ್ತದ ಹಣದ ಅಗತ್ಯವಿದೆ. ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸಲು ಆರ್ಥಿಕ ವರ್ಷದ ಮಧ್ಯಂತರ ಅವಧಿಯಲ್ಲಿ ಕಷ್ಟ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಕೆಲವು ಯೋಜನೆಗಳಲ್ಲಿ ಹಣ ಹೊಂದಾಣಿಕೆ ಮಾಡುವ ಮೂಲಕ ಕಿಸಾನ್‌ ಸಮ್ಮಾನ್‌ ಯೋಜನೆಗೆ ಹಣಕಾಸಿನ ಸಮಸ್ಯೆ ನಿವಾರಿಸಬಹುದು ಎಂಬ ಸಲಹೆಯನ್ನೂ ಆರ್ಥಿಕ ಇಲಾಖೆ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸರ್ಕಾರ ಘೋಷಿಸಿದ ಯೋಜನೆ ಜಾರಿಗೊಳಿಸಬೇಕಾದರೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಹಾಗೂ ಹೊಸದಾಗಿ ಘೋಷಿಸಲ್ಪಟ್ಟು ಅನುಷ್ಠಾನಗೊಳಿಸದೆ ಇರುವ ಕೆಲವು ಯೋಜನೆಗಳ ಅನುದಾನವನ್ನು ಹೊಂದಾಣಿಕೆ ಮಾಡಿ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಅನುದಾನ ಒದಗಿಸಬೇಕಾದರೆ ಕೆಲ ಬದಲಾವಣೆಗಳು ಅಗತ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ಯೋಜನಾವಾರು ಅನುದಾನದ ಅಂಕಿ ಅಂಶಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Advertisement

ಯೋಜನಾ ವೆಚ್ಚ ಕಡಿತಕ್ಕೂ ಚಿಂತನೆ
-ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಯುನಿಟ…ಗೆ 5 ಕೆ.ಜಿ. ಅಕ್ಕಿಯನ್ನು ಪ್ರತಿ ಕೆಜಿಗೆ 3 ರೂ.ನಂತೆ ನೀಡುತ್ತಿದ್ದು ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 2 ಕೆಜಿ ಸೇರಿಸಿ 7 ಕೆಜಿ ಅಕ್ಕಿ ವಿತರಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಅಷ್ಟೂ ಅಕ್ಕಿಯನ್ನು ಉಚಿತವಾಗಿ ಫ‌ಲಾನುಭವಿಗಳಿಗೆ ನೀಡುತ್ತಿದ್ದು, ಅದರ ವೆಚ್ಚ ರಾಜ್ಯದ ಬೊಕ್ಕಸದಿಂದಲೇ ಭರಿಸಲಾಗುತ್ತಿದೆ. ಹೆಚ್ಚುವರಿ ನೀಡಲಾಗುವ 2 ಕೆಜಿ ಅಕ್ಕಿಗೆ ವಾರ್ಷಿಕ 2,850 ಕೋಟಿ ರೂ. ವೆಚ್ಚವಾಗುತ್ತಿತ್ತು. ಅದೇ ರೀತಿ 1 ಕೆಜಿ ತೊಗರಿ ಬೇಳೆ ನೀಡಲು 576 ಕೋಟಿ ರೂ ವೆಚ್ಚವಾಗುತ್ತಿದೆ. ಹೆಚ್ಚುವರಿ 2 ಕೆಜಿ ಅಕ್ಕಿ ಹಾಗೂ 1 ಕೆಜಿ ತೊಗರಿ ಬೇಳೆ ಹಂಚಿಕೆಗೆ 500 ಕೋಟಿ ರೂ.ನೀಡಲಾಗುತ್ತಿದೆ. ಹೆಚ್ಚುವರಿ ಅಕ್ಕಿಯ ವೆಚ್ಚವನ್ನು ಕಿಸಾನ್‌ ಸಮ್ಮಾನ್‌ಗೆ ಬಳಸಬಹುದೇ ಎಂಬುದು ಒಂದು ಲೆಕ್ಕಾಚಾರ.

-ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಆವರ್ತ ನಿಧಿಗೆ ನಿಗದಿ ಮಾಡಿದ್ದ 500 ಕೋಟಿ ರೂ. ಗಳನ್ನು ಬಳಸಿಕೊಳ್ಳಬಹುದು. ಅಲ್ಲದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಘೋಷಿಸಿ, ಮೀಸಲಿಟ್ಟಿದ್ದ 134 ಕೋಟಿ ರೂ. ಮತ್ತು ವಿಜಯಪುರ ಜಿಲ್ಲೆಯ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರಿಗಾಗಿ ಘೋಷಿಸಿದ್ದ 150 ಕೋಟಿ ರೂ. ವಿಶೇಷ ಪ್ಯಾಕೇಜ್ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಿಗಾಗಿ ಘೋಷಿಸಿದ್ದ 150 ಕೋಟಿ ರೂ.ಗಳ ಪ್ಯಾಕೆಜ್‌ಗಳನ್ನು ಬಳಸಿಕೊಂಡರೆ 1434 ಕೋಟಿ ರೂ.ದೊರೆಯಲಿದೆ ಎಂಬುದು ಇನ್ನೊಂದು ಲೆಕ್ಕಾಚಾರ.

-ಇತರ ಯೋಜನೆಗಳಲ್ಲಿ ಯೋಜನಾ ವೆಚ್ಚ ಕಡಿತ ಮಾಡುವ ಸಾಧ್ಯತೆ ಬಗ್ಗೆಯೂ ಚಿಂತನೆ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next