Advertisement

ರೈತರಿಗೆ ಕೃಷಿ ವಿಜ್ಞಾನಿಗಳ ಪಾಠ

12:46 PM Jul 12, 2020 | Suhan S |

ರಾಣಿಬೆನ್ನೂರ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ. ಅವರ ನೇತೃತ್ವದ ವಿಜ್ಞಾನಿಗಳ ತಂಡ ಸವಣೂರ ತಾಲೂಕಿನ ಬರದೂರ ಗ್ರಾಮದ ಪ್ರಗತಿಪರ ರೈತ ಭರಮಪ್ಪ ಮಳಳ್ಳಿ, ಅಂದಾನಗೌಡ ಪಾಟೀಲ ಅವರ ಕ್ಷೇತ್ರಗಳಿಗೆ ಭೇಟಿ ನೀಡಿತು.

Advertisement

ಈ ಸಮಯದಲ್ಲಿ ಹೆಸರು ಬೆಳೆಯಲ್ಲಿ ಹೊಸ ತಳಿಯ ಕುರಿತು ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು. ಹೊಸ ತಳಿಯು ಪ್ರತಿ ಎಕರೆಗೆ 6-7 ಕ್ವಿಂಟಲ್‌ ಇಳುವರಿಯಿದ್ದು ಸ್ಥಳೀಯ ತಳಿಗಳಿಂತ ಹೆಚ್ಚಿನ ಇಳುವರಿಯೊಂದಿಗೆ ಬೆಳೆಯಬಹುದು ಎಂದು ತಿಳಿಸಿದರು.

ಬಿತ್ತನೆ ಅಂತರವನ್ನು ಸಾಲಿನಿಂದ ಸಾಲಿಗೆ 30 ಸೆಮೀ ಹಾಗೂ ಬೀಜದಿಂದ ಬೀಜಕ್ಕೆ 7.5 -10 ಸೆಮೀ ಅಂತರ ಇರುವಂತೆ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು. ಸಮಗ್ರ ಬೆಳೆ ಪದ್ಧತಿಗಳಾದ ಜೈವಿಕ ಗೊಬ್ಬರವಾದ ರೈಜೋಬಿಯಂದಿಂದ ಬೀಜೋಪಚಾರ ಮಾಡುವುದರ ಜೊತೆಗೆ ಬಿತ್ತಿದ 25 ದಿನಗಳ ನಂತರ 2 ಸಲ ಎಡೆಕುಂಟೆ ಹಾಯಿಸುವುದು. ನಂತರ ಹೂವಾಡುವ ಮತ್ತು ಕಾಳು ಕಟ್ಟುವ ಸಮಯದಲ್ಲಿ ಶೇ.1ರ 19:19:19 (10ಗ್ರಾಂ/ ಲೀಟರ್‌ ನೀರಿಗೆ) ಅಥವಾ ಶೇ. 2ರ ಡಿ.ಎ.ಪಿ. (20 ಗ್ರಾಂ ಡಿ.ಎ.ಎಪಿ. ಪ್ರತಿ ಲೀಟರ್‌ ನೀರಿಗೆ) ಸಿಂಪರಣೆ ಮಾಡಬೇಕು. ಇದರಿಂದ ಕಾಯಿಗಳ ಸಂಖ್ಯೆ ಹೆಚ್ಚಾಗಲಿದ್ದು, ಕಾಳುಗಳ ಗಾತ್ರ ಸಹ ದೊಡ್ಡದಾಗುವುದರಿಂದ ರೈತರಿಗೆ ಲಾಭದಾಯಕ ಎಂದು ವಿವರಿಸಿದರು.

ಹೆಸರು ಬೆಳೆ ಬಿತ್ತಿದ 20-25 ದಿನಗಳ ನಂತರ ಎಲೆ ಕತ್ತರಿಸುವ ಕೀಟ, ಕಾಂಡ ಕೊರಕ ನೊಣ ಮತ್ತು ರಸ ಹೀರುವ ಕೀಟಗಳ ಬಾಧೆ ಕಂಡು ಬರುತ್ತದೆ. ಎಲೆ ಕತ್ತರಿಸುವ ಮತ್ತು ಕಾಂಡ ಕೊರಕ ನೊಣಗಳ ಬಾಧೆ ಕಂಡು ಬಂದಾಗ ಅವುಗಳ ಹತೋಟಿಗಾಗಿ 0.2 ಗ್ರಾಂ ಡೈಯಾಮೆಥಾಕ್ಸಾಮ್‌ ಅಥವಾ 1 ಮಿಲೀ ಮೊನೊಕ್ರೋಟೋಫಾಸ್‌ 30 ಇ.ಸಿ. ಪ್ರತಿ ಲೀಟರ್‌ ಬೆರೆಸಿ ಸಿಂಪರಣೆ ಮಾಡಬೇಕು ಎಂದರು. ವಿಜ್ಞಾನಿಗಳಾದ ಡಾ| ರಾಜಕುಮಾರ ಜಿ.ಆರ್‌., ಡಾ| ಶಿವಮೂರ್ತಿ ಅವರು ರೈತರೊಂದಿಗೆ ಇತರ ಬೆಳೆಗಳ ಬಗ್ಗೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next