Advertisement

ಕೃಷಿ ಉತ್ಪನ್ನ ರಫ್ತು: 5 ಎಕ್ಸ್‌ಪೋರ್ಟ್‌ ಲ್ಯಾಬ್‌: ಸಚಿವ ಬಿ.ಸಿ. ಪಾಟೀಲ್‌

11:33 PM Aug 20, 2022 | Team Udayavani |

ಬೆಂಗಳೂರು: ರೈತರು ಮತ್ತು ರಫ್ತುದಾರರ ನಡುವೆ ಸಂಪರ್ಕ ಕಲ್ಪಿಸುವುದು, ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಜ್ಯದ 5 ಕಡೆ “ಎಕ್ಸ್‌ಪೋರ್ಟ್‌ ಲ್ಯಾಬ್‌’ ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

Advertisement

ಕೃಷಿ, ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಅಪೆಡಾ ಸಹಯೋಗದಲ್ಲಿ ಜಿಕೆವಿಕೆಯಲ್ಲಿರುವ ಡಾ| ಬಾಬು ರಾಜೇಂದ್ರ ಪ್ರಸಾದ್‌ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ರೈತ ಉತ್ಪಾದಕ ಸಂಸ್ಥೆಗಳ ಮತ್ತು ರಫ್ತುದಾರರ ಸಮಾವೇಶ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಲ್ಲಿ ಮಹಾರಾಷ್ಟ್ರ, ಗುಜರಾತಿನ ಬಳಿಕ ಕರ್ನಾಟಕವು 3ನೇ ಸ್ಥಾನದಲ್ಲಿದೆ. ಇದನ್ನು ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ವಿಜಯಪುರದ ಇಂಡಿ, ಹಾವೇರಿಯ ಹನುಮನಮಟ್ಟಿ, ಮೈಸೂರಿನ ನಾಗೇನಹಳ್ಳಿ, ಚಿಕ್ಕಬಳ್ಳಾಪುರ ವರದಾಗೇರಾ ಮತ್ತು ಶಿರಸಿಯ ಬನವಾಸಿಯಲ್ಲಿ ಅಪೆಡಾ ಶೇ.90 ಮತ್ತು ರಾಜ್ಯ ಸರಕಾರದ ಶೇ.10 ಅನುದಾನದೊಂದಿಗೆ ಲ್ಯಾಬ್‌ಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಕರ್ನಾಟಕದ ಹಸಿರು ಮೆಣಸಿನಕಾಯಿ ಮಹಾರಾಷ್ಟ್ರಕ್ಕೆ ಹೋಗಿ ಅನಂತರ ವಿದೇಶಗಳಿಗೆ ರಫ್ತು ಆಗುತ್ತದೆ. ಅದನ್ನು ರಾಜ್ಯದಿಂದಲೇ ರಫ್ತು ಮಾಡುವಂತಾಗಬೇಕು. ಮಧ್ಯವರ್ತಿಗಳಿಗೆ ನೀಡುವ ಪ್ರಕ್ರಿಯೆಯನ್ನು ಕಡಿತಗೊಳಿಸಬೇಕು ಎಂದು ಸಲಹೆ ನೀಡಿದರು.

11 ಕಡೆ ಶೀತಲೀಕರಣ ಘಟಕ
ಇದೇ ರೀತಿ ರೈತರ ಉತ್ಪನ್ನಗಳು ಹಾಳಾಗದಂತೆ ಸಂರಕ್ಷಿಸಿಡುವ ದೃಷ್ಟಿಯಿಂದ ರಾಜ್ಯದ 11 ಕಡೆ ತಲಾ 2.5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಶೀತಲೀಕರಣ ಘಟಕ (ಕೋಲ್ಡ್‌ ಸ್ಟೋರೇಜ್‌) ಆರಂಭಿಸಲಾಗುತ್ತಿದೆ. ರೈತ ಉತ್ಪಾದಕ ಸಂಸ್ಥೆ (ಎಫ್ಜಿಒ)ಗಳನ್ನು ಉಪಯೋಗಿಸಿಕೊಂಡು ರಫ್ತು ಮಾಡಬೇಕು ಎಂದರು.

ರೈತರಿಗೆ ಡೀಸೆಲ್‌ನಲ್ಲಿ ರಿಯಾಯಿತಿ
ಗರಿಷ್ಠ 5 ಎಕರೆ ಜಮೀನು ಹೊಂದಿರುವ ರೈತರಿಗೆ ಟ್ರ್ಯಾಕ್ಟರ್‌ಗೆ ರಿಯಾಯಿತಿ ದರದಲ್ಲಿ ಡೀಸೆಲ್‌ ವಿತರಿಸಲಾಗುತ್ತಿದೆ. ಪ್ರತಿ ಎಕರೆಗೆ 250 ರೂ.ಗಳಂತೆ 1,250 ರೂ.ಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next