ಯಲಹಂಕ: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಆವಿಷ್ಕರಿಸಿದ 3.72 ಕೋಟಿ ರೂ ವೆಚ್ಚದ ಕೃಷಿ ಯಂತ್ರೋಪಕರಣ ಹಾಗೂ ತಂತ್ರ ಜ್ಞಾನಗಳನ್ನು ರಾಜ್ಯ ತೋಟಗಾರಿಕಾ ಇಲಾಖೆಯ ಸಹಯೋಗದ ರೈತ ಉತ್ಪಾದಕಾ ಸಂಸ್ಥೆಗಳಿಗೆ ವಿತರಿಸಲಾಯಿತು.
ವಿಶ್ವಬ್ಯಾಂಕ್ ಅನುದಾನಿತ ಸೃಜಲಾ ಯೋಜನೆಯಡಿ ರಾಜ್ಯದ 11ಜಿಲ್ಲೆಗಳ (ಎಫ್ ಪಿಒ)ರೈತ ಉತ್ಪಾದಕ ಸಂಸ್ಥೆಗಳಿಗೆ ಸುಮಾರು ಉಪಕರಣಗಳಾದ ತಾಜಾ ತರಕಾರಿ ಹಣ್ಣು ಮಾರಾಟ ಮಾಡುವ ವಾಹನ, ಮಾವು ಕತ್ತರಿಸುವ ಯಂತ್ರ, ಈರುಳ್ಳಿ ಬಿತ್ತುವ ಯಂತ್ರಗಳನ್ನು 20 ತಂಡ ಗಳಿಗೆ 280 ರೈತ ಉತ್ಪಾದಕರ ಸಂಸ್ಥೆಯ ರೈತರಿಗೆ ತರಬೇತಿಯನ್ನು ನೀಡಿ ಯಂತ್ರೋ ಪಕರಣಗಳನ್ನು ನೀಡಲಾಯಿತು.
ತೋಟಗಾರಿಕೆ ಇಲಾಖೆಯ ರಾಜ್ಯ ಮುಖ್ಯ ಕಾರ್ಯದರ್ಶಿ ಮಹೇಶ್ವರ ರಾವ್ ಮಾತನಾಡಿ, ಕೃಷಿ ಕ್ಷೇತ್ರ ಗುಣ ಮಟ್ಟವನ್ನು ಸಾಧಿಸಬೇಕಾದರೆ ನೂತನ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಮತ್ತು ಐಐಎಚ್‌ಆರ್ ಸಂಶೋಧನಾ ತಂತ್ರಜ್ಞಾನಗಳನ್ನು ರೈತರಿಗೆ ಅಧಿಕ ಸಂಖ್ಯೆಯಲ್ಲಿ ದೊರಕಿಸಿ ಕೊಡಲು ನಾವು ಸವಲತ್ತುಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು.
ಸುಜಲಾ ಯೋಜನೆಯ ಯೋಜನ ನಿರ್ದೇಶಕರಾದ ಪ್ರಭಾಷ್ ಚಂದ್ರ ರೇ ಮಾತನಾಡಿ, ಕೃಷಿಕರಿಗೆ ಭೂ ಮಾಹಿತಿ ಯುಳ್ಳ
ಕಾರ್ಡನ್ನು ನೀಡುವ ಯೋಜನೆ ಕಾರ್ಯನಿರ್ವಹಿಸುತ್ತಿದೆ. ರೈತರು ತಮ್ಮ ಭೂಮಿಯಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು, ಮಣ್ಣಿನ ಗುಣ ಮಟ್ಟ, ಈ ಭೂಮಿಯಲ್ಲಿ ಬೆಳೆಯ ಬಹುದಾದ ಬೆಳೆಗಳ ಮಾಹಿತಿಯನ್ನು ಈ ಕಾರ್ಡ್‌ನಲ್ಲಿ ಅಳವಡಿಸಲಾಗುವುದು ಎಂದರು.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಎಂ.ಆರ್. ದಿನೇಶ್, ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ವೈ.ಎಸ್. ಪಾಟೀಲ್ ಮಾತನಾಡಿದರು.