Advertisement
ಬಡತನ ಮತ್ತು ಅನ್ನದಾತನ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮ ದೇಶದ ಸರಕಾರಗಳು ಕೈಗೊಂಡ ಯೋಜನೆಯ ಪಟ್ಟಿಯನ್ನು ಪುಟಗಟ್ಟಲೆ ಬರೆಯುತ್ತಾ ಹೋಗಬಹುದು. ಬಡತನ ನಿವಾರಣಾ ಕಾರ್ಯಕ್ರಮದ ಹೊರತಾಗಿಯೂ ಬಡತನದ ಸಮಸ್ಯೆಯು ನಿವಾರಣೆಯಾಗಿಲ್ಲ. ಅನ್ನದಾತನು ಸಮಸ್ಯೆಯ ಸುಳಿಯಲ್ಲಿ ಬದುಕುತ್ತಿದ್ದು ಕೃಷಿಯಿಂದ ದೂರ ಸರಿಯುತ್ತಿದ್ದಾನೆ. ಈ ಸಮಸ್ಯೆಗಳಿಗೆ ಪರಿಹಾರವಂತೂ ಸಿಕ್ಕೇ ಇಲ್ಲ. ಕೃಷಿ ಪ್ರಧಾನ ರಾಷ್ಟ್ರವಾದ ನಮ್ಮಲ್ಲಿ ಕೃಷಿಯು ಇವತ್ತು ಯಾರಿಗೂ ಬೇಡದ ಕಸುಬಾಗಿದೆ.
Related Articles
Advertisement
ಲಾಭ ಹೇಗೆ?ಸಾಲ ಕೊಂಡದ್ದನ್ನು ಮನ್ನಾ ಮಾಡಿದರೆ ಕೃಷಿಕನಿಗೆ ಲಾಭ. ಆದರೆ ಸಾಲ ಮನ್ನಾವೇ ಕೃಷಿಕನ ಸಮಸ್ಯೆಗೆ ಪರಿಹಾರವಲ್ಲ. ಕೃಷಿಕನು ಸಾಲ ಪಡೆದು ಕೃಷಿ ಮಾಡುತ್ತಾನೆ. ನಂತರ ಬರುವ ಇಳುವರಿಯನ್ನು ಉತ್ತಮ ಬೆಲೆಗೆ ಮಾರಿ ಸಾಲವನ್ನು ವಾಪಾಸು ಮಾಡುತ್ತಾನೆ. ಈ ಉದ್ದೇಶದಿಂದಲೇ ಕೃಷಿ ಸಾಲಕ್ಕೆ ಮೊರೆ ಹೋಗುತ್ತಾನೆ. ಕೃಷಿ ಎಂಬುದು ನೈಸರ್ಗಿಕ ಚಟುವಟಿಕೆ. ಮಳೆ ಬಂದರೆ ಕೃಷಿ ಸಾಧ್ಯ ಮಳೆ ಕೈ ಕೊಟ್ಟರೆ ಹಾಕಿದ ಹಣ ವಾಪಾಸು ಬರದೆ ಇರಬಹುದು. ಅಥವಾ ಉತ್ತಮ ಇಳುವರಿ ಬಂದ್ರೂ ಯೋಗ್ಯ ಬೆಲೆ ಬರದಿದ್ದರೆ ಕೃಷಿಕನಿಗೆ ನಷ್ಟ ಖಂಡಿತ. ಇನ್ನುಳಿದ ಮಾರ್ಗ ಆತ್ಮಹತ್ಯೆ. ಈ ಹಂತದಲ್ಲಿ ಕೃಷಿಗಾಗಿ ಪಡೆದ ಸಾಲ ಮನ್ನಾ ಆದರೆ ಕೃಷಿಯ ಸಮಸ್ಯೆ ನಿವಾರಣೆಯಾಗುವುದಿದ್ರೆ ಈ ಹೊತ್ತಿಗೆ ಅನ್ನದಾತನ ಸಮಸ್ಯೆಗಳೆಲ್ಲವೂ ಪರಿಹಾರವಾಗಬೇಕಿತ್ತು. ಹಾಗಾಗಲಿಲ್ಲ. ನಷ್ಟ ಹೇಗೆ?
ಸಾಲ ಮನ್ನಾ ಮಾಡಿದರೆ ಅದರ ಹೊರೆಯನ್ನು ಬ್ಯಾಂಕುಗಳು ಭರಿಸಬೇಕಾಗುತ್ತದೆ. ತದನಂತರ ಆ ಮೊತ್ತವನ್ನು ಸರಕಾರವೇ ತುಂಬಬೇಕಾಗುತ್ತದೆ. ಸರಕಾರದ ಆಯವ್ಯಯ ಪಟ್ಟಿಯಲ್ಲಿ ಒಟ್ಟು ಖರ್ಚಿನ ಪ್ರಮಾಣ ಒಟ್ಟು ಆದಾಯದ ಪ್ರಮಾಣಕ್ಕಿಂತ ಹೆಚ್ಚಾಗುತ್ತದೆ. ವಿತ್ತೀಯ ಕೊರತೆಯ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನೀಗಿಸಲು ಹೆಚ್ಚು ತೆರಿಗೆಯನ್ನು ನಿಷ್ಠಾವಂತ ತೆರಿಗೆದಾರರ ಮೇಲೆ ವಿಧಿಸಲಾಗುತ್ತದೆ. ಕೊನೆಗೆ ಸಾಲದ ಹೊರೆಯನ್ನು ಹೊರುವವರು ನಾವು ಜನಸಾಮಾನ್ಯರು. 2019ರ ಹೊತ್ತಿಗೆ ಸಾಲ ಮನ್ನಾ ಪ್ರಮಾಣ ಒಟ್ಟು ಆಂತರಿಕ ಉತ್ಪನ್ನದ ಶೇ.2ರಷ್ಟಿರಬಹುದು ಎಂದು ಊಹಿಸಲಾಗಿದೆ. ಕೃಷಿಕರನ್ನು ಸಬಲರನ್ನಾಗಿಸಬೇಕಾಗಿದೆ. ಸಾಲ ಮನ್ನಾದಿಂದ ಮಾತ್ರ ಅಲ್ಲ. ಸಾಲ ಮನ್ನಾ ಎಂಬುದು ಮತ ಕೀಳುವ ಯಂತ್ರ. ಸಾಲ ಮನ್ನಾ ಒಮ್ಮೆ ಮಾಡಿದರೆ ಮತ್ತೆ ಅದು ಅಭ್ಯಾಸವಾಗಿ ಬಿಡುತ್ತದೆ. ಅಭಿವೃದ್ಧಿ ಕಾರ್ಯಗಳಿಗಾಗಿ ಇರುವ ಸಂಪತ್ತನ್ನು ಸಾಲ ಮನ್ನಾ ಮಾಡಿ ಹಾಳು ಮಾಡಿದಂತಾಗುತ್ತದೆ. ದೇಶದ ಬಂಡವಾಳ ಕರಗುತ್ತದೆ. ಸಾಲ ಮನ್ನಾದ ಲಾಭವನ್ನು ಉಳ್ಳವರು ಅಥವಾ ಶ್ರೀಮಂತ ರೈತರು ಬಾಚಿಕೊಂಡದ್ದಷ್ಟೇ? ಸಾಲ ಮನ್ನಾ ಮಾಡಿದರೆ ಪಡೆದ ಸಾಲವನ್ನು ಹಿಂದಿರುಗಿಸದಿರುವುದು ಒಂದು ರೂಢಿಯಾಗುತ್ತದೆ. ಕೆಟ್ಟ ಸಾಲದಿಂದ ನಲುಗಿ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಕೆಡುತ್ತದೆ. ಇನ್ನು ಚುನಾವಣೆಯ ಮೊದಲು ಮತ್ತು ಚುನಾವಣೆಯ ಅನಂತರದ ಸಮಯದಲ್ಲಿ ಕೃಷಿ ಸಾಲದ ಪ್ರಮಾಣ ಜಾಸ್ತಿಯಾಗುತ್ತದೆ. ಜತೆಗೆ ಸಾಲ ವಾಪಾಸಾಗದಿರುವ ಮೊತ್ತದ ಪ್ರಮಾಣ ಹೆಚ್ಚಾಗಬಹುದು. ಯಾಕೆಂದರೆ ಈ ಸಂದರ್ಭಗಳಲ್ಲಿ ಕೃಷಿ ಸಾಲ ಮನ್ನಾ ಅವಕಾಶ ಜಾಸ್ತಿ. ಬ್ಯಾಂಕಿನವರೂ ಕೃಷಿ ಸಾಲವನ್ನು ಕೆಟ್ಟ ಸಾಲ ಎಂದು ಪರಿಗಣಿಸುವುದಲ್ಲದೆ ಮತ್ತೆ ಕೃಷಿಕ ಸಾಲ ಕೇಳಿದರೆ ಸಾಲ ನಿರಾಕರಿಸುವ ಸಾಧ್ಯತೆಗಳೇ ಜಾಸ್ತಿ. ಶ್ರೀಮಂತ ಕೃಷಿಕರು ಸಾಲದ ಆವಶ್ಯಕತೆ ಇಲ್ಲದಿದ್ದರೂ ಸಾಲ ತೆಗೆದುಕೊಳ್ಳಬಹುದು. ಯಾಕೆಂದರೆ ನಾಳೆ ಸಾಲ ಮನ್ನಾವಾಗಬಹುದೆಂಬ ಅಶಾವಾದ. ಇದು ನಿಜವಾದ ರೈತವರ್ಗಕ್ಕೆ ಹಾನಿ ಉಂಟುಮಾಡುವುದಂತೂ ಖಂಡಿತ. ಸಾಲ ಮನ್ನಾ ಆಗುವ ಮೊದಲೇ ಪಡೆದ ಸಾಲ ವಾಪಾಸು ನೀಡಿದರೂ ಸಾಲ ಮನ್ನಾದಿಂದ ನಷ್ಟವೇ ಸರಿ. ಹೀಗಾಗಿ ಸಾಲ ಮರುಪಾವತಿಯಲ್ಲಿ ಅಶಿಸ್ತನ್ನೂ ಇದು ಪ್ರೇರೇಪಿಸುತ್ತದೆ. ಏನಾಗಬೇಕು?
ಸಾಲ ಮನ್ನಾ ಅಲ್ಪಾವಧಿ ಪರಿಹಾರ ಕ್ರಮ. ರೈತನ ಹಿತವನ್ನು ಸಂರಕ್ಷಿಸಲು ದೀರ್ಘಾವಧಿ ಕ್ರಮಗಳನ್ನು ಕಂಡುಕೊಳ್ಳುವುದೊಂದೇ ಉಳಿದಿರುವ ದಾರಿ. ಕೃಷಿ ಮಾರುಕಟ್ಟೆ ಮತ್ತು ಸಾಲ ವಿತರಣಾ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬೇಕಾಗಿದೆ. ಸಾಲ ಮನ್ನಾ ಯೋಜನೆಗಳು ರಾಜಕೀಯ ಪಕ್ಷಗಳ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿರದಂತೆ ಚುನಾವಣಾ ಆಯೋಗ ಕಾರ್ಯಪ್ರವೃತ್ತರಾಗಬೇಕಾಗಿದೆ. ಇದು ಚುನಾವಣಾ ಆಯೋಗದಿಂದ ಮಾತ್ರ ಸಾಧ್ಯ. ಕೊಡುಗೆಗಳಿಗೆ ಪೂರ್ಣ ವಿರಾಮ ಬೇಕಾಗಿದೆ. ಸಾಲ ಮನ್ನಾವು ಸಾಂಕ್ರಾಮಿಕ ರೋಗ. ಅದು ಬಹುಬೇಗ ಹರಡುತ್ತದೆ. ರಾಜಕೀಯ ಪಕ್ಷಗಳು ಮತದಾರರಿಗೆ ಏನು ಆಶ್ವಾಸನೆಯನ್ನು ನೀಡಬಹುದು, ನೀಡಬಾರದು – ಎಂಬೆಲ್ಲ ವಿಷಯಗಳ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ತಯಾರಿಸುವ ಕಾಲ ಪಕ್ವವಾಗಿದೆ ಎಂದರೆ ತಪ್ಪಿಲ್ಲ. ಸಾಲ ಮನ್ನಾ ಯೋಜನೆಯು ರಾಜಕೀಯ ಪಕ್ಷಗಳಿಗೆ ರಾಜಕೀಯದಲ್ಲಿ ಬಹಳ ಕಾಲ ಜನ ಮನ್ನಣೆಯನ್ನು ಉಳಿಸಿಕೊಳ್ಳಲು ನೀಡುವ ಒಂದು ರೀತಿಯ ಡೌನ್ ಪೇಮೆಂಟ್ ಇದ್ದ ಹಾಗೆ. ಉತ್ತಮ ನೀರಾವರಿ ಸೌಕರ್ಯ, ಮೂಲಭೂತ ಸೌಲಭ್ಯಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಉತ್ತೇಜನ ಜತೆಗೆ ಕೃಷಿಯ ಉತ್ಪನ್ನಗಳಿಗೆ ಯೋಗ್ಯ ಬೆಲೆ, ಕೃಷಿ ವಿಮೆ ಇವೆಲ್ಲ ಕೃಷಿಯನ್ನು ರಕ್ಷಿಸಬಹುದು. ಇವೆಲ್ಲವೂ ಕೃಷಿಕರ ಬಹುಕಾಲದ ಬೇಡಿಕೆಯಾಗಿವೆ. ಇವೆಲ್ಲ ಪರಿಹಾರೋಪಾಯಗಳು ಓದುವಾಗ, ಬರೆಯುವಾಗ ಚೆನ್ನಾಗಿರುತ್ತವೆ, ಆದರೆ ಕಾರ್ಯಗತವಾಗಿರುವುದು ಅಷ್ಟಕ್ಕಷ್ಟೇ. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಕ್ಕಿದರೆ ಬಹುಶಃ ಯಾವ ಕೃಷಿಕನಿಗೂ ಸಾಲ ಮನ್ನಾ ಬೇಕಾಗಿಲ್ಲ. ಸಾಲ ಸಂರಕ್ಷಣಾ ಕಾರ್ಯಕ್ರಮವು ಚಿನ್ನದ ಮೊಟ್ಟೆಯನ್ನಿಡುವ ಕೃಷಿ ಸಾಲ ಮಾರುಕಟ್ಟೆಯನ್ನು ಅಳಿಸಿಹಾಕದಿರುವ ರೀತಿಯಲ್ಲಿದ್ದರೆ ಕೃಷಿಗೆ ಪೂರಕ. ಈ ಮಧ್ಯೆ ಎಲ್ಲೆಲ್ಲೂ ಉದ್ಯೋಗ ಕಡಿತದ ಭೀತಿಯು ನಮ್ಮ ಯುವಜನರನ್ನು ಕಾಡುತ್ತಿದೆ. ಉದ್ಯೋಗಕ್ಕಾಗಿ ಮತ್ತೆ ನಮ್ಮ ಯುವಕರು ಕೃಷಿಯತ್ತ ನಡೆಯಿಡುವರೋ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಾ ಇದೆ. ಮತ್ತೆ ಕೃಷಿ ತನ್ನ ಗತವೈಭವವನ್ನು ಮರಳಿ ಪಡೆಯಲೆಂದು ಆಶಿಸೋಣ. – ರಾಘವೇಂದ್ರ ರಾವ್, ನಿಟ್ಟೆ