ಆಳಂದ : ಮುಂದಿನ ಕೃಷಿ ಹಂಗಾಮಿಗಾಗಿ ವೈಜ್ಞಾನಿಕವಾಗಿ ಮಹತ್ವ ಪಡೆದಿರುವ ಮಾಗಿ ಉಳುಮೆಗೆ ರೈತರು ಭೂಮಿಗೆ ಜೀವ ಕಳೆ ತುಂಬಲು ಕೊರೊನಾ ಸಂಕಷ್ಟದಲ್ಲೂ ಕಸರತ್ತು ಆರಂಭಿಸಿದ್ದಾರೆ. ತೊಗರಿ, ಜೋಳ, ಕಡಲೆ, ಗೋಧಿ ರಾಶಿಗಳು ಬಹುತೇಕ ಮುಗಿದು ಹೋಗಿವೆ. ಇನ್ನೇನು ಮುಂದಿನ ಹಂಗಾಮಿಗಾಗಿ ಭೂಮಿ ಹದಗೊಳ್ಳುವುದಕ್ಕಾಗಿ ಎರಡ್ಮೂರು ಬಾರಿ ಉಳುಮೆ ಮಾಡುವುದು ಸಾಮಾನ್ಯವಾಗಿದೆ. ರಾಸಾಯನಿಕ ಗೊಬ್ಬರ, ಬೀಜ ಹಾಗೂ ಸಾಧನ ಸಲಕರಣೆಗಳು ಈಗ ಸಾಕಷ್ಟು ದುಬಾರಿಯಾಗಿದ್ದು ರೈತರು ಉಳುಮೆ ಮಾಡಲು ಹಿಂದೆಮುಂದೆ ನೋಡುವಂತೆ ಆಗಿದೆ.
ಸರಣಿ ವರ್ಷಗಳಲ್ಲಿ ಬರಗಾಲ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಹೀಗಾಗಿ ಶೇ. 60 ರೈತರು ತಮ್ಮ ಎತ್ತು, ದನಕರು ಮಾರಿಕೊಂಡಿದ್ದಾರೆ. ಹೀಗಾಗಿ ಸದ್ಯ ಮಾಗಿ ಉಳುಮೆಗೆ ಎತ್ತುಗಳ ಕೊರತೆ ಎದುರಾಗಿದ್ದು, ಇನ್ನೊಬ್ಬರ ಎತ್ತುಗಳ ಮೇಲೆ ಅವಲಂಬಿತರಾಗಿದ್ದಾರೆ. ಸಾಲದ್ದಕ್ಕೆ ಬಹುತೇಕ ಮಂದಿ ಟ್ರ್ಯಾಕ್ಟರ್‌ಗಳಿಂದ ಮಾಗಿ ಉಳುಮೆ ಕೈಗೊಳ್ಳತೊಡಗಿದ್ದಾರೆ.
ಏಪ್ರಿಲ್, ಮೇ ತಿಂಗಳು ಕಳೆಯುವುದು ಹೇಗೆ ಎನ್ನುತ್ತಲೇ ಇನ್ನೇನು ಜೂನ್ ಸಮೀಪಿಸಿ ಮಳೆ ಬಂದರೆ ಬಿತ್ತನೆ ಹೇಗೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದಾನೆ ರೈತ. ಇದ್ದ ಎತ್ತುಗಳನ್ನು ಬರಗಾಲದ ಹಿನ್ನೆಲೆಯಲ್ಲಿ ಮಾರಲಾಗಿದೆ. ಬಿತ್ತನೆ ಮಾಡಲು ಮುಂದಾದರೆ ಬೀಜ, ಗೊಬ್ಬರ ಖರೀದಿಗೂ ಹಣವಿಲ್ಲ. ಸಕಾಲಕ್ಕೆ ಬ್ಯಾಂಕ್ ಗಳು ಸಾಲ ನೀಡುತ್ತಿಲ್ಲ. ಸಹಕಾರಿ ಸಾಲಗಳು ದೊರೆಯದ ಪರಿಸ್ಥಿತಿ ಉಂಟಾಗಿದೆ. ರೈತರಿಗೆ ಬರದ ಹಸಿವಿನ ನಡುವೆ ಮುಂಗಾರು ಹಂಗಾಮಿನ ಸಿದ್ಧತೆಯ ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಿದೆ. ಜತೆಗೆ ಕೊರೊನಾ ಸಂಕಷ್ಟದಿಂದ ಹಣ ಹೊಂದಿಸುವುದೇ ಕಷ್ಟಕರವಾಗಿದೆ. ನಿತ್ಯ ಹೊತ್ತೇರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿ ಹೊಡೆದು ಭೂಮಿ ಸಾಗಮಾಡುವಲ್ಲಿ ಮಗ್ನವಾಗಿದ್ದಾರೆ. ಮಾಗಿ ಉಳುಮೆ ಕೈಗೊಂಡರೆ ಮಾತ್ರ ಬಿತ್ತನೆಗೆ ಭೂಮಿ ಹದವಾಗಿ ಪರಿಣಮಿಸುವ ಹಿನ್ನೆಲೆಯಲ್ಲಿ ಮತ್ತು ಇದರಿಂದ ಬೆಳೆಗೆ ವೈಜ್ಞಾನಿಕ ಲಾಭ ಆಗುವುದರಿಂದ ರೈತರು ಪ್ರತಿ ವರ್ಷ ಭೂಮಿಯನ್ನು ಕನಿಷ್ಟ ಎರಡ್ಮೂರು ಬಾರಿಯಾದರೂ ಉಳುಮೆ ಮಾಡಿ ಸ್ವತ್ಛಗೊಳಿಸುತ್ತಾರೆ.