ಬೆಂಗಳೂರು: ರೈತ ವಿರೋಧ ಕೃಷಿ ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸುರು ಸೇನೆ ಎ. 21ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರಕಾರ ಈಗಾಗಲೇ ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಮಸೂದೆವನ್ನು ಹಿಂಪಡೆದಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಇನ್ನೂ ಈ ಮಸೂದೆಗಳನ್ನು ಹಿಂಪಡೆದಿಲ್ಲ. ರಾಜ್ಯ ಸರಕಾರದ ರೈತ ವಿರೋಧ ನೀತಿ ಖಂಡಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಳಗ್ಗೆ 11ಗಂಟೆಗೆ ಸಮಾವೇಶ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ರೈತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವರೆಗೂ ನಮ್ಮ ಹೋರಾಟ ಹೀಗೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.ಈ ಹಿಂದೆ ರೈತರ ಸಂಘ ಈ ಮಸೂದೆಯನ್ನು ಹಿಂಪಡೆಯುವಂತೆ ಬೆಳಗಾವಿ ಅಧಿವೇಶನದಲ್ಲೂ ಬೀದಿಗಿಳಿದು ಹೋರಾಟ ಮಾಡಿತ್ತು. ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಿತ್ತು. ಆ ವೇಳೆ ಮುಖ್ಯಮಂತ್ರಿಗಳು ಕಾಯ್ದೆ ಹಿಂಪಡೆಯುವ ಬಗ್ಗೆ ಆಶ್ವಾಸನೆ ನೀಡಿದ್ದರು ಆದರೆ ಇನ್ನೂ ಹಿಂಪಡೆಯುವ ಕೆಲಸ ಮಾಡಿಲ್ಲ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ದೇಶದ ಅನ್ನದಾತರ ಬಗ್ಗೆ ಪ್ರೀತಿಯಿಲ್ಲ. ರೈತರಿಂದ ಭೂಮಿ, ಕೃಷಿ ಮಾರುಕಟ್ಟೆಯನ್ನು ಕಿತ್ತು ಕಾರ್ಪೋರೆಟ್ ಸಂಸ್ಥೆಗಳ ಕೈಗೆ ನೀಡಲು ಹೊರಟಿದೆ. ಕನಿಷ್ಟ ಬೆಂಬಲ ಬೆಲೆ ನೀಡುವ ವಿಚಾರದಲ್ಲೂ ಕೂಡ ಯಾವುದೇ ರೀತಿಯ ಮಾತನಾಡುತ್ತಿಲ್ಲ ಎಂದು ಹೇಳಿದರು.
ರೈತರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈಗಾಗಲೇ ಕೃಷಿ ತಿದ್ದುಪಡಿ ಮಸೂದೆವನ್ನು ಸಂಪೂರ್ಣವಾಗಿ ಹಿಂಪಡೆದಿದೆ.ಆದರೆ ದಿಢೀರ್ ಎಂದು ಕಾಯ್ದೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದು ಕೇಂದ್ರ ಸರ್ಕಾರದ ವರಿಷ್ಠರ ಮೆಚ್ಚುಗೆ ಗಳಿಸಲು ಹೊರಟ್ಟಿದ್ದ ರಾಜ್ಯದ ವರಿಷ್ಠರು. ಈಗ ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು.ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟವನ್ನು ರೈತ ಸಂಘ ರೂಪಿಸಲಿದೆ ಎಂದು ಹೇಳಿದರು.