ಕುಳಗೇರಿ ಕ್ರಾಸ್: ಮಲೆನಾಡಿನಂತೆ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ಸುರಿದ ಜಿಟಿ ಜಿಟಿ ಮಳೆಗೆ ರೈತರು ಕಂಗಾಲಾಗಿದ್ದರು. ರೈತ ಬೆಳೆಗಾರರ ನಿದ್ದೆಗೆಡಿಸಿದ್ದ ಮಳೆರಾಯ ಬಿಡುವು ಕೊಟ್ಟಿದ್ದು, ರೈತರ ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಬಿಸಿಲಿನ ದರ್ಶನದಿಂದ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ರೈತರು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ. ರಸಗೊಬ್ಬರ ಅಂಗಡಿಗಳಿಗೆ ತೆರಳಿ ಔಷಧಿ ಖರೀದಿಗೆ ಮುಂದಾಗಿದ್ದಾರೆ. ಬೆಳೆದ ಬೆಳೆಗಳು ಕೈ ತಪ್ಪಬಾರದು ಎಂಬ ಕಾರಣಕ್ಕೆ ಸಾಲಮಾಡಿ ಔಷಧಿ ಖರೀದಿಸುತ್ತಿದ್ದಾರೆ.
ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡ ಕೆಲವು ರೈತರು ಬೆಳೆನಷ್ಟ ಅನುಭವಿಸುವ ಚಿಂತೆಯಲ್ಲಿದ್ದರೆ, ಇನ್ನು ಕೆಲ ರೈತರು ಔಷಧ ಗೊಬ್ಬರ ಕೊಟ್ಟು ತಮ್ಮ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಎತ್ತುಗಳನ್ನು ಬಳಸಿ ಎಡೆ ಹೊಡೆದು ಕಸ ಕಿತ್ತು ಸ್ವಚ್ಛಗೊಳಿಸುವಲ್ಲಿ ಮಗ್ನರಾಗಿದ್ದಾರೆ.
ಸತತ ಮಳೆಗೆ ಚಿಕ್ಕ ಬೆಳೆಗಳು ಹಾಳಾಗಿವೆ. ಸದ್ಯ ವಾತಾವರಣ ಬದಲಾಗಿದ್ದು ಬಿಸಿಲಿಗೆ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದು ರೈತರು ತಿಳಿಸಿದ್ದಾರೆ. ಸತತ ಮಳೆಗೆ ರೈತರ ಬೆಳೆಗಳು ಹಾಳಾಗುವ ಸ್ಥಿತಿಗೆ ಬಂದಿದ್ದವು. ಈ ಮಳೆಯಿಂದ ಅಲ್ಪ-ಸ್ವಲ್ಪ ರೈತರ ಬೆಳೆಗಳು ಹಾಳಾಗಿದ್ದು ಸದ್ಯ ಎರಡ್ಮೂರು ದಿನಗಳಿಂದ ಬಿಸಿಲಿನ ಕಿರಣಗಳು ಬಿದ್ದಿದ್ದು, ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಸಾಕಷ್ಟು ಖರ್ಚು ಮಾಡಿ ಔಷಧಿ ಬಳಸಿ ಬೆಳೆ ಉಳಿಸಿಕೊಳ್ಳುವ ಸತತ ಪ್ರಯತ್ನದಲ್ಲಿದ್ದಾರೆ ರೈತರು. ವಾರ ಬಿಸಿಲು ಇದ್ದರೆ ರೈತರ ಬೆಳೆಗಳು ಉತ್ತಮ ಸ್ಥಿತಿಗೆ ಬದಲಾಗುತ್ತವೆ ಎನ್ನುತ್ತಾರೆ ಕಾಕನೂರ ರೈತ ರವಿ ಹೆರಕಲ್.
ಧಾರಾಕಾರ ಮಳೆ: ಕಳೆದ ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಶನಿವಾರ ಸಂಜೆ ಆರ್ಭಟ ತೋರಿಸಿದ್ದಾನೆ. ಗ್ರಾಮದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಭಸದಿಂದ ಸುರಿದ ಮಳೆಗೆ ಚರಂಡಿ ಮತ್ತು ರಸ್ತೆ ತುಂಬ ನೀರು ಹರಿದಿದೆ.
ಸದ್ಯ ಮಳೆ ಕಡಿಮೆಯಾಗಿದ್ದು, ರೈತರು ಅವಸರ ಪಡದೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದು ಬೆಳೆಗಳ ರಕ್ಷಣೆಗೆ ಮುಂದಾಗಬೇಕು. ಅನಾವಶ್ಯಕ ಔಷಧಿ ಬಳಸದೆ ಬೆಳೆಗಳಿಗೆ ಮಿತವಾಗಿ ಔಷಧಿ ಗೊಬ್ಬರ ಕೊಡಬೇಕು. –
ಬಸವರಾಜ ಬುದ್ನಿ, ಕುಳಗೇರಿ ಕೃಷಿ ಅಧಿಕಾರಿ
-ಮಹಾಂತಯ್ಯ ಹಿರೇಮಠ