Advertisement

ನೀರಾವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಚುರುಕು

04:57 PM Jan 25, 2018 | Team Udayavani |

ಮಂಡ್ಯ: ಬೇಸಿಗೆ ಬೆಳೆಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಚುರುಕು ಗೊಂಡಿದೆ. ಭತ್ತ ಮತ್ತು ರಾಗಿ ಬೆಳೆ ಬೆಳೆಯುವುದಕ್ಕೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಾಲ್ಕು ಕಟ್ಟು ನೀರು ಹರಿಸುವುದಾಗಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದರಿಂದ ರೈತರು ಹರ್ಷಚಿತ್ತರಾಗಿ ಕೃಷಿಯಲ್ಲಿ ನಿರತರಾಗಿದ್ದಾರೆ.

Advertisement

ಮುಂಗಾರು ಮಳೆ ಸಕಾಲಕ್ಕೆ ಬಾರದೆ ಭತ್ತ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈಗ ಭತ್ತ ಬೆಳೆಯುವುದಕ್ಕೆ ರೈತರು ಹೆಚ್ಚು ಆಸಕ್ತರಾಗಿದ್ದಾರೆ. ಭೂಮಿ ಯನ್ನು ಉಳುಮೆ ಮಾಡುವುದು, ಸಸಿ ಮಡಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಲವೆಡೆ ಹದಗೊಳಿಸಿದ ಭೂಮಿಯಲ್ಲಿ ಭತ್ತದ ನಾಟಿ ಕಾರ್ಯವೂ ಚುರುಕುಗೊಂಡಿದೆ.

ಕೃಷ್ಣರಾಜಸಾಗರ ಅಚ್ಚುಕಟ್ಟು ವ್ಯಾಪ್ತಿಯ ಮೇಲ್ಭಾಗಕ್ಕೆ ಸೇರಿದ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ತಾಲೂಕು ವ್ಯಾಪ್ತಿಗಳಲ್ಲಿ ಭತ್ತದ ಸಸಿ ಮಡಿ ಹಾಗೂ ನಾಟಿ ಕಾರ್ಯ ಬಿರುಸಿನಿಂದ ಸಾಗಿದೆ. ನಾಲಾ ಭಾಗದ ವ್ಯಾಪ್ತಿಯ ರೈತರು ಭತ್ತ ಬೆಳೆಯು ವುದಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ಇನ್ನು ಮದ್ದೂರು ಹಾಗೂ ಮಳವಳ್ಳಿ ತಾಲೂಕಿನ ರೈತರು ತಾವು ಬೆಳೆದಿದ್ದ ರಾಗಿಯನ್ನೇ ಬಿತ್ತನೆ ಮಾಡಲು ಮುಂದಾಗಿದ್ದಾರೆ. ನಾಗಮಂಗಲ ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವುದ ರಿಂದ ಬೇಸಿಗೆ ಬೆಳೆ ಬೆಳೆಯುವುದಕ್ಕೆ ರೈತರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಭತ್ತ, ಮೆಕ್ಕೆಜೋಳ ವಿತರಣೆ: ಪ್ರಸ್ತುತ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ ಮತ್ತು ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಇದುವರೆಗೆ ಮದ್ದೂರು ತಾಲೂಕಿನಲ್ಲಿ 33.50 ಕ್ವಿಂಟಲ್‌, ಮಳವಳ್ಳಿ ತಾಲೂಕಿನಲ್ಲಿ 13 ಕ್ವಿಂಟಲ್‌, ಮಂಡ್ಯ ತಾಲೂಕಿನಲ್ಲಿ 58.65 ಕ್ವಿಂಟಲ್‌, ಶ್ರೀರಂಗ ಪಟ್ಟಣ ತಾಲೂಕಿನಲ್ಲಿ 67 ಕ್ವಿಂಟಲ್‌, ಪಾಂಡವಪುರ ತಾಲೂಕಿನಲ್ಲಿ 60 ಕ್ವಿಂಟಲ್‌, ಕೆ.ಆರ್‌.ಪೇಟೆ ತಾಲೂಕಿ ನಲ್ಲಿ 30 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜಗಳನ್ನು ನೀಡಲಾಗಿದೆ. ನಾಗಮಂಗಲ ತಾಲೂಕಿನಲ್ಲಿ 25 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜ ದಾಸ್ತಾನಿದ್ದು, ಇನ್ನೂ ವಿತರಣೆ
ಮಾಡಿಲ್ಲ.

Advertisement

ರೈತಸಂಪರ್ಕ ಕೇಂದ್ರದಿಂದ 120 ದಿನದಲ್ಲಿ ಬೆಳೆಯಬಹುದಾದ ಎಂಟಿಯು-1001 ಹಾಗೂ ಐಆರ್‌-64 ತಳಿಯ ಭತ್ತದ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ. ದೀರ್ಘಾವಧಿ ಬೆಳೆಯಾದ ಜಯಾ ತಳಿಯ ಭತ್ತವನ್ನು ನೀಡಲಾಗುತ್ತಿಲ್ಲ. ಅದು 140 ದಿನದ ಬೆಳೆಯಾಗಿದ್ದು, ಹಲವು ರೈತರು ಹೊರಗಿನಿಂದ ತಂದು ಜಯಾ ಭತ್ತವನ್ನು ಬಿತ್ತನೆ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

21 ಟಿಎಂಸಿ ಅಡಿ ನೀರು: ಹಾಲಿ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ 97.70 ಅಡಿಗೆ ಕುಸಿದಿದೆ. ಜಲಾಶಯಕ್ಕೆ 156 ಕ್ಯುಸೆಕ್‌ ನೀರು ಮಾತ್ರ ಹರಿದುಬರುತ್ತಿದ್ದು, ಜಲಾಶಯದಿಂದ 3715 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ 2811 ಕ್ಯುಸೆಕ್‌ ನೀರು ಹಾಗೂ ನದಿಗೆ 904 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ.

ಜಲಾಶಯದಲ್ಲಿ 21.35 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 79.24 ಅಡಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶ ಯಕ್ಕೆ 264 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. 254 ಕ್ಯುಸೆಕ್‌ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು.

ರೈತರಲ್ಲಿ ಗೊಂದಲ: ಬೇಸಿಗೆ ಬೆಳೆಗೆ ನಾಲ್ಕು ಕಟ್ಟು ನೀರು ಕೊಡುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಒಪ್ಪಿ$ಕೊಂಡಿದ್ದಾರೆ. ಆದರೆ, ಬೆಳೆದು ನಿಂತಿರುವ ಬೆಳೆಗಳಿಗಷ್ಟೇ ನೀರು ಎಂದು ತೀರ್ಮಾನವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೂ ಇನ್ನೊಂದೆಡೆ ಭತ್ತದ ಬಿತ್ತನೆ ಬೀಜಗಳನ್ನು ನೀಡುವಂತೆ ಸೂಚಿಸಲಾಗಿದೆ. ಇದರಿಂದ ರೈತರು ಸಹಜವಾಗಿ ಗೊಂದಲಕ್ಕೆ ಒಳಗಾಗಿದ್ದಾರೆ.

ಅಲ್ಲದೆ, ಬೇಸಿಗೆ ಬೆಳೆಗೆ ಕೆಆರ್‌ಎಸ್‌ನಿಂದ 15 ದಿನ ನೀರು ಹರಿಸುವುದು ಮುಂದಿನ 15 ದಿನ ನೀರು ನಿಲ್ಲಿ ಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ತೀರ್ಮಾನಿಸಲಾಗಿದೆ. ಆದರೆ, ಹದಿನೈದು ದಿನ ನೀರು ನಿಲ್ಲಿಸು ವುದರಿಂದ ರೈತರಿಗೆ ತೊಂದರೆಯಾಗಲಿದೆ. ಅದಕ್ಕಾಗಿ 10 ದಿನಕ್ಕೊಮ್ಮೆ ನೀರು ಹರಿಸಿ ನಂತರ 10 ದಿನ ಬಿಟ್ಟು ನೀರು ಹರಿಸಬೇಕೆನ್ನುವುದು ರೈತರ ಆಗ್ರಹವಾಗಿದೆ. 

ಬೇಸಿಗೆ ಬೆಳೆಗೆ ನೀರು ಹರಿಸುತ್ತಿರುವುದರಿಂದ ರೈತರು ಭತ್ತ ಮತ್ತ ರಾಗಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಭತ್ತದ ಸಸಿ ಮಡಿ ಮಾಡಿಕೊಳ್ಳುವುದು, ಭೂಮಿಯನ್ನು ಹದಗೊಳಿಸುವುದು, ಬಿತ್ತನೆ ಚಟುವಟಿಕೆ ಪ್ರಕ್ರಿಯೆ ಕಂಡುಬರುತ್ತಿದೆ.
ಭತ್ತದ ಜೊತೆಯಲ್ಲಿ ರಾಗಿ ಬಿತ್ತನೆಯೂ ಸಾಗಿದೆ. ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳಿಂದ ಭತ್ತದ ಬಿತ್ತನೆ ಬೀಜಗಳನ್ನೂ ವಿತರಿಸಲಾಗುತ್ತಿದೆ.
● ರಾಜಸುಲೋಚನಾ, ಜಂಟಿ ಕೃಷಿ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next