Advertisement

842 ರೈತರ ಆತ್ಮಹತ್ಯೆ; ಮನೋಸ್ಥೈರ್ಯ ತುಂಬುವ ಕಾರ್ಯವಾಗಲಿ

01:22 AM May 25, 2024 | Team Udayavani |

ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 842 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕಳೆದೆರಡು ದಶಕಗಳಿಂದ ಹೆಚ್ಚುತ್ತಲೇ ಸಾಗಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ದೇಶವ್ಯಾಪಿಯಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಲೇ ಇದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ತಜ್ಞರ ಸಮಿತಿಗಳನ್ನು ರಚಿಸಿ, ತರಹೇವಾರಿ ಅಧ್ಯಯನ ನಡೆಸಿದರೂ ಅನ್ನದಾತರ ಆತ್ಮಹತ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕದ ಸ್ಥಿತಿಯೂ ಇದೇ ತೆರನಾಗಿದ್ದು, ರೈತರ ಆತ್ಮಹತ್ಯೆಗೆ ಕಡಿವಾಣ ಹಾಕುವ ನಿಟ್ಟನಲ್ಲಿ ಸರಕಾರ ರೂಪಿಸಿದ ವಿವಿಧ ಯೋಜನೆಗಳು ನಿರೀಕ್ಷಿತ ಫ‌ಲಿತಾಂಶವನ್ನು ನೀಡಿಲ್ಲ.

Advertisement

ರಾಜ್ಯ ಸರ್ಕಾರದ ಅಂಕಿಅಂಶದ ಪ್ರಕಾರ 2013-2022ರ ವರೆಗೆ ರಾಜ್ಯದಲ್ಲಿ 8,245 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳೆ ಹಾನಿ, ಸಾಲದ ಹೊರೆ, ಸಾಲಗಾರರ ಕಾಟ ಇವೇ ಮೊದಲಾದ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಬೆರಳೆಣಿಕೆ ಸಂಖ್ಯೆಯ ಪ್ರಕರಣಗಳಲ್ಲಷ್ಟೇ ವೈಯಕ್ತಿಕ ಸಮಸ್ಯೆಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015-20ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015-16ರಲ್ಲಿ 1,525, 2016-17ರಲ್ಲಿ 1,203, 2017-18ರಲ್ಲಿ 323, 2018-19ರಲ್ಲಿ 1,084, 2019-20ರಲ್ಲಿ 1,091 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಳಿಕದ ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆಯಾದರೂ ಈ ಬಾರಿ ಮತ್ತೆ ಒಂದಿಷ್ಟು ಏರಿಕೆ ಕಂಡಿದೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಮೇಲ್ನೋಟಕ್ಕೆ ಬರ, ಬೆಳೆ ಹಾನಿಯೇ ಕಾರಣ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸುವ ಅಗತ್ಯವಿದೆ. ಅನ್ನದಾತರು ಆತ್ಮಹತ್ಯೆಯಂತಹ ಕಠಿನ ನಿರ್ಧಾರಕ್ಕೆ ಬರಲು ಕಾರಣಗಳೇನು ಎಂಬುದರ ಬಗೆಗೆ ಸಮರ್ಪಕ ಅಧ್ಯಯನ ನಡೆಸಿ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಇವುಗಳಿಂದ ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿರುವ ರೈತರಲ್ಲಿ ಮನೋಸ್ಥೈರ್ಯ ತುಂಬುವ ಕಾರ್ಯ ಜಿಲ್ಲಾಡಳಿತಗಳಿಂದಾಗಬೇಕಿದೆ. ಸಾಲದಾತರು ಅದರಲ್ಲೂ ಮುಖ್ಯವಾಗಿ ಲೇವಾದೇವಿದಾರರು ಸಾಲ ವಾಪಸಾತಿಗಾಗಿ ರೈತರಿಗೆ ಕಿರುಕುಳ ನೀಡುತ್ತಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇನ್ನು ರೈತರು ಪಡೆದ ಸಾಲ ಮರುಪಾವತಿ ವಿಚಾರದಲ್ಲಿ ಒಂದಿಷ್ಟು ಸಂಯಮ ವಹಿಸುವಂತೆ ಮತ್ತು ಸಂದರ್ಭಕ್ಕನುಸಾರ ಮರುಪಾವತಿಗೆ ಕಾಲಾವಕಾಶ ನೀಡುವಂತೆ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಸರಕಾರ ಕಟ್ಟುನಿಟ್ಟಿನ ಆದೇಶ ನೀಡಬೇಕು. ಅಗತ್ಯ ಬಿದ್ದಲ್ಲಿ ಸ್ವತಃ ಸರಕಾರವೇ ರೈತರ ಸಾಲದ ಮೊತ್ತಕ್ಕೆ ಭದ್ರತೆಯಾಗಿ ಈ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬೇಕು. ಇದರಿಂದ ರೈತರ ಮೇಲಿನ ಒತ್ತಡ ಬಹಳಷ್ಟು ಕಡಿಮೆಯಾಗಲಿದೆ.

ಇದರ ಜತೆಯಲ್ಲಿ ವಿವಿಧ ಕಾರಣಗಳಿಂದಾಗಿ ಮಾನಸಿಕವಾಗಿ ಕುಗ್ಗಿರುವ ರೈತರಲ್ಲಿ ಆಶಾವಾದ ಮೂಡಿಸುವ ನಿಟ್ಟಿನಲ್ಲಿ ಕೌನ್ಸೆಲಿಂಗ್‌ ನಡೆಸುವ ಪ್ರಕ್ರಿಯೆಗೆ ಆಯಾಯ ಜಿಲ್ಲಾಡಳಿತಗಳು ಹೆಚ್ಚಿನ ಉತ್ತೇಜನ ನೀಡಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಸ್ಥೆಯಿಂದ ಆಲಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ತಿಳಿಹೇಳುವ ಮೂಲಕ ಅವರಲ್ಲಿ ಧೈರ್ಯ ತುಂಬಬೇಕು. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಾಗಲಾರದು, ಇದರಿಂದ ಅವರ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗುತ್ತದೆ ಎಂದು ಮನದಟ್ಟು ಮಾಡುವ ಕಾರ್ಯವಾಗಬೇಕು. ರೈತಾಪಿ ವರ್ಗ ಯಾವುದೇ ತೆರನಾದ ಸಂಕಷ್ಟವನ್ನು ಎದುರಿಸುವಂತಾಗಲು ಸರಕಾರಿ ಇಲಾಖೆಗಳು ಪರಸ್ಪರ ಬೆರಳು ತೋರಿಸಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದರ ಬದಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next