Advertisement

842 ರೈತರ ಆತ್ಮಹತ್ಯೆ: ಅಧ್ಯಯನಕ್ಕೆ ಮುಖ್ಯಮಂತ್ರಿ ಸೂಚನೆ

11:45 PM May 23, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳೊಂದಿಗೆ ಗುರುವಾರ ವೀಡಿಯೋ ಸಂವಾದ ನಡೆಸಿ, ರೈತರ ಆತ್ಮಹತ್ಯೆ ಪ್ರಕರಣಗಳು ಯಾವ ಜಿಲ್ಲೆಯಲ್ಲಿ ಹೆಚ್ಚಿದೆ? ಅದಕ್ಕೆ ಕಾರಣ, ಪರಿಹಾರಗಳೇನೆಂಬ ಬಗ್ಗೆ ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

Advertisement

ರಾಜ್ಯದಲ್ಲಿ 2023-24ರಲ್ಲಿ 842 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅನ್ನದಾತರ ಆತ್ಮಹತ್ಯೆ ಪ್ರಕರಣದ ಹಿಂದಿನ ಕಾರಣ ತಿಳಿಯುವುದಕ್ಕೆ ಸರಕಾರ ಮುಂದಾಗಿದೆ. ಅಧಿಕಾರಿಗಳು ಸಭೆಗೆ ನೀಡಿರುವ ಮಾಹಿತಿ ಪ್ರಕಾರ ಒಟ್ಟು ಪ್ರಕರಣಗಳ ಪೈಕಿ 90 ಮನವಿಗಳು ತಿರಸ್ಕೃತವಾಗಿವೆ. 63 ಉಪ ವಿಭಾಗಾಧಿಕಾರಿ ಹಂತದಲ್ಲಿ ಬಾಕಿಯಿವೆ. ಉಳಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಕೆಯಲ್ಲಿ ವಿಳಂಬವಾಗಿದೆ.

82.4 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ
ರಾಜ್ಯದಲ್ಲಿ ಉತ್ತಮ ಮುಂಗಾರು ನಿರೀಕ್ಷೆ ಹುಟ್ಟಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 82.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ಮುಂಗಾರು ಪೂರ್ವದಲ್ಲಿ 2.95 ಲಕ್ಷ ಹೆಕ್ಟೇರ್‌ ಗುರಿಯ ಪೈಕಿ 68 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಆಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಮಾರ್ಚ್‌ 1ರಿಂದ ಈವರೆಗೆ 87 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 123 ಮಿ.ಮೀ. ಮಳೆಯಾಗಿದೆ. 8 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಕಂಡಿದೆ. ಸಹಾಯಧನ ಯೋಜನೆ ಅನ್ವಯ 5,52,350 ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಬೇಡಿಕೆಯಿದೆ. 9,01,397 ಕ್ವಿಂಟಾಲ್‌ ಬಿತ್ತನೆ ಬೀಜ ಲಭ್ಯವಿದೆ. ಮೇ 22ರ ವರೆಗೆ 5492.44 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 14,608.49 ಕ್ವಿಂಟಾಲ್‌ ಬಿತ್ತನೆ ಬೀಜ ದಾಸ್ತಾನಿದೆ. ಎಪ್ರಿಲ್‌ 1ರಿಂದ ಈವರೆಗೆ 3.22 ಲಕ್ಷ ಟನ್‌ ರಸಗೊಬ್ಬರ ಮಾರಾಟವಾಗಿದ್ದರೆ, 14,86,067 ಟನ್‌ ರಸಗೊಬ್ಬರ ದಾಸ್ತಾನಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ.

ಅಭಾವವಾಗದಂತೆ ನೋಡಿಕೊಳ್ಳಿ
ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳುವುದು ಮೊದಲ ಆದ್ಯತೆ. ನಿತ್ಯವೂ ಕುಡಿಯುವ ನೀರಿನ ಪರೀಕ್ಷೆ ನಡೆಸಿ ಶುದ್ಧ ಕುಡಿಯುವ ಪೂರೈಕೆ ಖಾತರಿಪಡಿಸಿಕೊಳ್ಳಿ. ಆಯಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಲಭ್ಯವಿರುವ ಹಣವನ್ನು ಕುಡಿಯುವ ನೀರು ಪೂರೈಕೆಗೆ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ನೀತಿ ಸಂಹಿತೆ ಕಾರಣದಿಂದ ಆಡಳಿತ ಲಕ್ವ ಹೊಡೆದ ಸ್ಥಿತಿಯಲ್ಲಿದ್ದು, ಅಭಿವೃದ್ಧಿ ಕೆಲಸಗಳೆಲ್ಲ ಸ್ಥಗಿತವಾಗಿದ್ದವು. ಚುನಾವಣೆ ಮುಗಿದ ಬಳಿಕ ಆಯೋಗಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ನೀತಿ ವಿನಾಯಿತಿ ಪಡೆದುಕೊಳ್ಳಲಾಗಿದೆ. ಈಗ ಆಡಳಿತ ಯಂತ್ರ ಚುರುಕುಗೊಳ್ಳಬೇಕು. ಎಲ್ಲ ಹಂತದ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ, ಕಾರ್ಯಾದೇಶ ತ್ವರಿತವಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next