Advertisement

Arecanut: ವಿಶಿಷ್ಟ ಸ್ವಾದದೊಂದಿಗೆ ಜನರ ಮನ ಗೆದ್ದ ಮಲೆನಾಡ ತೀರ್ಥಹಳ್ಳಿ ಅಡಕೆ!

05:12 PM May 11, 2024 | Nagendra Trasi |

ಉದಯವಾಣಿ ಸಮಾಚಾರ
ಶಿವಮೊಗ್ಗ: ಒಂದೊಂದು ತಿನಿಸು, ತಿಂಡಿಗಳಿಗೆ ಒಂದೊಂದು ಜಿಲ್ಲೆ, ಊರು ಫೇಮಸ್‌ ಇರುತ್ತದೆ. ಅದೇ ರೀತಿ ಈಗ ಅಡಕೆ ಕೂಡ ಯಾವ ಊರಿನದ್ದು ಫೇಮಸ್‌ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ತೀರ್ಥಹಳ್ಳಿ ಅಡಕೆ ರಾಜ್ಯದ ಇತರೆ ಭಾಗದ ಅಡಕೆಗಳನ್ನು ಪಕ್ಕಕ್ಕೆ ತಳ್ಳಿ ರುಚಿ, ಸ್ವಾದದಿಂದ ಜನರ ಮನಗೆದ್ದಿದೆ.

Advertisement

ಮಲೆನಾಡು, ಅರೆ ಮಲೆನಾಡು ಭಾಗದ ಜಿಲ್ಲೆಗಳಿಗೆ ಸೀಮಿತವಾಗಿದ್ದ ಅಡಕೆ ಈಗ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಹೊಸ
ಪ್ರದೇಶದ ಅಡಕೆಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಗುಟ್ಕಾ ಕಂಪನಿಗಳ ಆದಿಯಾಗಿ ಎಲೆ ಅಡಕೆ (ಕವಳ) ತಿನ್ನುವವರಿಗೆ
ತೀರ್ಥಹಳ್ಳಿ ಅಡಕೆ ಎಂದರೆ ಬಲು ಇಷ್ಟ. ಇದನ್ನು ಸಮೀಕ್ಷೆ ಕೂಡ ಸಾಬೀತುಪಡಿಸಿದೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಅಡಕೆ ಸಂಶೋಧನಾ ಕೇಂದ್ರ ಈಚೆಗೆ ನಡೆಸಿದ ಸಮೀಕ್ಷೆಯಲ್ಲಿ ಯಾವ ಪ್ರದೇಶದ ಅಡಕೆ ರುಚಿ, ಸ್ವಾದಿಷ್ಟ ಹೊಂದಿದೆ ಎಂಬ ಅಂಶ ಬಹಿರಂಗಗೊಳಿಸಿದೆ.

ಸಮೀಕ್ಷೆ ನಡೆದಿದ್ದು ಹೇಗೆ?: ಈಚೆಗೆ ಅಡಕೆ ವ್ಯಾಪಾರಿಗಳು, ಎಲೆ ಅಡಕೆ ತಿನ್ನುವವರು, ವಿಜ್ಞಾನಿಗಳು, ರೈತರು ಸೇರಿ ವಿವಿಧ ವರ್ಗಕ್ಕೆ ಸೇರಿದ 60 ಜನರಿಗೆ ಎಲೆ ಅಡಕೆ ತಿನ್ನಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ತೀರ್ಥಹಳ್ಳಿ ಸೇರಿ ಅಡಕೆ ಬೆಳೆಯುವ ಬೇರೆ ತಾಲೂಕು, ಮಲೆನಾಡು, ಕರಾವಳಿ, ಬಯಲುಸೀಮೆಯ ಬೇರೆ ಜಿಲ್ಲೆಗಳ ಅಡಕೆಯನ್ನು ಇಡಲಾಗಿತ್ತು. ತೀರ್ಥಹಳ್ಳಿ,
ಶೃಂಗೇರಿ, ತರೀಕೆರೆ, ಹೊಸನಗರ, ಸಾಗರ, ಶಿವಮೊಗ್ಗ, ಚನ್ನಗಿರಿ ಸೇರಿದಂತೆ ಬೇರೆ ಜಿಲ್ಲೆಯ ರೈತರು ಸೇರಿದ್ದರು. ಅಲ್ಲದೆ ಕೃಷಿ
ವಿವಿಗೆ ಸಂಬಂಧಿಸಿದ ವಿವಿಧ ಜಿಲ್ಲೆಗಳ ವಿಜ್ಞಾನಿಗಳು ಸಹ ಇದ್ದರು. ಅವರೆಲ್ಲರೂ ಎಲೆ-ಅಡಕೆ ಸವಿದು ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಪ್ರಶ್ನೋತ್ತರ ಸಹ ಇಡಲಾಗಿತ್ತು. ಅದರಲ್ಲಿ ಅಡಕೆ ನೋಡಲು ಹೇಗಿದೆ, ಕಡಿಯುವಾಗ ಯಾವ ಸಂವೇದನೆ ನೀಡುತ್ತದೆ, ತಿನ್ನುವಾಗ ಯಾವ ರೀತಿ ಸಂವೇದನೆ ಸಿಗುತ್ತದೆ ಎಂಬ ಪ್ರಶ್ನೆಗಳನ್ನು ನೀಡಲಾಗಿತ್ತು. ಇದರಲ್ಲಿ ತೀರ್ಥಹಳ್ಳಿ ಅಡಕೆಯೇ ಬೆಸ್ಟ್‌ ಎಂಬ ಅಭಿಪ್ರಾಯ ಎಲ್ಲರಿಂದಲೂ ಬಂದಿದೆ.

Advertisement

ಬೇಡಿಕೆಗೆ ಕಾರಣ ಏನು?: ತೀರ್ಥಹಳ್ಳಿ ಭಾಗದ ರೈತರು ಯಾವ ರೀತಿ ಗ್ರೇಡಿಂಗ್‌ ಮಾಡುತ್ತಾರೆ ಎಂಬುದನ್ನು ಸಮೀಕ್ಷೆಯಲ್ಲಿ
ಪಾಲ್ಗೊಂಡಿದ್ದ ರೈತರು ಮಾಹಿತಿ ಪಡೆದಿದ್ದಾರೆ. ಗ್ರೇಡಿಂಗ್‌ ಮಾಡುವಾಗ ರಾಶಿ, ಇಡಿ, ಹಸ, ಗೊರಬಲು, ನುಲಿ ಎಂದು
ವರ್ಗೀಕರಿಸಲಾಗುತ್ತದೆ. ಕೆಂಪಡಕೆಗೆ ಈ ಅಡಕೆ ತುಂಬಾ ಸೂಕ್ತವಾಗಿರುತ್ತದೆ. ವ್ಯಾಪಾರಸ್ಥರು ಹೆಚ್ಚು ಧಾರಣೆ ಕೊಡುತ್ತಾರೆ
ಎಂಬುದು ತೀರ್ಥಹಳ್ಳಿ ರೈತರ ಅಭಿಪ್ರಾಯ.

ಕೆಂಪಡಕೆ ಮಾಡಲು ವಿಶಿಷ್ಟ ತಳಿ 
ವಿಶಿಷ್ಟವಾದ ಕೆಂಪಡಕೆ ಮಾಡಲು ತೀರ್ಥಹಳ್ಳಿ ಭಾಗದ ಅಡಕೆ ಹೇಳಿ ಮಾಡಿಸಿದಂತಿದೆ. ತೀರ್ಥಹಳ್ಳಿ ರೈತರು ಸಾಂಪ್ರದಾಯಿಕ
ಮಾದರಿಯಲ್ಲೇ ಅಡಕೆಗೆ ಬಣ್ಣ ಕಟ್ಟುತ್ತಾರೆ. ಇದು ಕೂಡ ಇಲ್ಲಿನ ವೈಶಿಷ್ಟ್ಯ

ಬೇರೆಲ್ಲೂ ಸಿಗುವುದಿಲ್ಲ
ತೀರ್ಥಹಳ್ಳಿ ಭಾಗದ ಅಡಕೆ ಸಸಿಯನ್ನು ಬೇರೆ ಜಿಲ್ಲೆಯಲ್ಲಿ ಬೆಳೆದರೆ ಆ ರುಚಿ, ಗುಣಮಟ್ಟ ಸಿಗುವುದಿಲ್ಲ ಎಂಬುದು ಬಹುತೇಕ ರೈತರ ಅಭಿಪ್ರಾಯ. ಪರಿಸರ, ತಳಿ, ಮಣ್ಣು, ವಾತಾವರಣದಿಂದ ತೀರ್ಥಹಳ್ಳಿಯಲ್ಲೇ ಬೆಳೆದ ಅಡಕೆಗೆ ವಿಶಿಷ್ಟತೆ ಸಿಕ್ಕಿದೆ ಎನ್ನುತ್ತಾರೆ ರೈತರು.

ತೀರ್ಥಹಳ್ಳಿ ಅಡಕೆ ಗಾತ್ರದಲ್ಲಿ ಚಿಕ್ಕದು. ಅದರಲ್ಲಿ ಪಿಟನ್‌ ರುಚಿ ತುಂಬಾ ಚೆನ್ನಾಗಿರುತ್ತದೆ. ತೊಟ್ಟಿನ ಹಿಂಭಾಗದ ರುಚಿ ಯಾವಾಗಲೂ ಚೆನ್ನಾಗಿರುತ್ತದೆ. ಪುಡಿ ಬೆಸ್ಟ್‌ ಬರುತ್ತದೆ. ಬೇಯಿಸುವುದರಿಂದ ಅದಕ್ಕೆ ಆ ರುಚಿ ಬರುತ್ತದೆ. ಚನ್ನಗಿರಿ, ತರೀಕೆರೆ ಭಾಗದ ಅಡಕೆ ಗಾತ್ರದಲ್ಲಿ ಮಧ್ಯಮ ಇದ್ದರೂ ಪಾನ್‌ ಮಸಾಲಾಗೆ ಹೇಳಿ ಮಾಡಿಸಿದಂತಿದೆ.
●ಶಂಕರಪ್ಪ, ಅಧ್ಯಕ್ಷ, ಅಡಕೆ ವ್ಯಾಪಾರಿಗಳ ಸಂಘ

ವೀಳ್ಯೆದೆಲೆ ಎಲ್ಲ ಕಡೆ ಸಿಗುತ್ತದೆ. ಆದರೆ ಮೈಸೂರು ಎಲೆಗೆ ಹೆಚ್ಚು ಬೇಡಿಕೆ ಇದೆ. ಪೇಡಾ ಎಲ್ಲ ಕಡೆ ಸಿಗುತ್ತದೆ. ಆದರೆ ಧಾರವಾಡ ಪೇಡೆ ರುಚಿ ಬೇರೆಲ್ಲೂ ಸಿಗಲ್ಲ. ಅದೇ ರೀತಿ ತೀರ್ಥಹಳ್ಳಿ ಅಡಕೆ ವಿಶಿಷ್ಟವಾದದ್ದು ಎಂದು ಹೇಳುವ ಪ್ರಯತ್ನ ಇದಾಗಿದೆ. 60ಕ್ಕೂ ಅಧಿ ಕ ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ತೀರ್ಥಹಳ್ಳಿ ಅಡಕೆಯನ್ನೇ ಬೆಸ್ಟ್‌ ಅಂದಿದ್ದಾರೆ.
●ಡಾ|ನಾಗರಾಜ್‌ ಅಡಿವಪ್ಪರ್‌,
ಮುಖ್ಯಸ್ಥರು, ಅಡಕೆ ಸಂಶೋಧನಾ ಕೇಂದ್ರ

■ ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next