Advertisement

Agri: ನ.10 ರಂದು ಸರ್ಕಾರದ ವಿರುದ್ಧ ಹೋರಾಟ- ಈರಣ್ಣ ಕಡಾಡಿ ಎಚ್ಚರಿಕೆ

10:04 PM Nov 06, 2023 | Team Udayavani |

ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಅಗತ್ಯ ಕಂಬ, ತಂತಿ, ಟ್ರಾನ್ಸ್‌ಫಾರ್ಮರ್‌ ಖರ್ಚನ್ನು ರೈತರೇ ಭರಿಸಬೇಕು ಎನ್ನುವ ಆದೇಶ ಹಿಂಪಡೆಯದಿದ್ದರೆ ನ.10 ರಂದು ಹೋರಾಟ ಮಾಡುವುದಾಗಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಎಚ್ಚರಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬರಗಾಲ, ಅನಿಯಮಿತ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ನಿಂದ ಕಂಗಾಲಾದ ರೈತರ ಗಾಯದ ಮೇಲೆ ಈ ಸರ್ಕಾರ ಬರೆ ಎಳೆಯುತ್ತಿದೆ. ಇದು ಬಿಸಿ ಕಾವಲಿಯಲ್ಲಿದ್ದ ರೈತರನ್ನು ಬೆಂಕಿಗೆ ದೂಡಿದಂತಾಗಿದೆ. ಒಂದು ವೇಳೆ ಈ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯದ ಸುಮಾರು 35 ಲಕ್ಷ ಪಂಪ್‌ಸೆಟ್‌ಗಳ ರೈತ ಬಳಕೆದಾರರೊಂದಿಗೆ ಬಿಜೆಪಿ ರೈತ ಮೋರ್ಚಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 200 ಕ್ಕಿಂತಲೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇದು ದುರ್ದೈವದ ಮತ್ತು ಅತ್ಯಂತ ಕಳವಳಿಕಾರಿ ಸಂಗತಿಯಾಗಿದೆ. ರಾಜ್ಯದಲ್ಲಿ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕೆ ರೈತರು ತೆರೆದ ಬಾವಿ, ಕೊಳವೆ ಬಾವಿಗಳ ಮೊರೆ ಹೊಗಿದ್ದಾರೆ. ಆದರೆ, ಹಗಲು ಹೊತ್ತಿನಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ; ಜೊತೆಗೆ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಹೊಡೆತಕ್ಕೆ ರೈತರು ಬಸವಳಿದು ಹೋಗಿದ್ದಾರೆ. ರೈತನ ಬದುಕು ಅತ್ಯಂತ ಅಸಹನಿಯವಾಗಿದೆ. ಸರ್ಕಾರ ತನ್ನ ರದ್ದುಗೊಳಿಸಿ, ಈ ಹಿಂದಿನಂತೆಯೇ ವಿದ್ಯುತ್‌ ಸಂಪರ್ಕ ನೀಡಬೇಕಾಗಿ ಒತ್ತಾಯಿಸಿದ್ದು, ಹಿಂಪಡೆಯದಿದ್ದರೆ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಮಂಡಲಗಳಲ್ಲಿ ನ.10 ರಂದು ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಪ್ರತಿ ನೀರಾವರಿ ಪಂಪ್‌ಸೆಟ್‌ಗಳಿಗೆ ಕೇವಲ 24 ಸಾವಿರ ರೂಪಾಯಿ ಶುಲ್ಕ ನಿಗದಿಯಾಗಿತ್ತು. ಸರ್ಕಾರದ ಈಗಿನ ಆದೇಶದಿಂದ ಕನಿಷ್ಠ 2 ಲಕ್ಷ ರೂಪಾಯಿ ನೀಡಿ ವಿದ್ಯುತ್‌ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆಗೆ ರೈತರನ್ನು ನೂಕಲಾಗಿದೆ. ಬರಗಾಲದಿಂದ ಕಂಗೆಟ್ಟಿರುವ ರೈತರು ಬದಲಿ ಮಾರ್ಗಗಳಿಲ್ಲದೆ ಹಲವೆಡೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರೈತರ ಆತಂಕ ಹೆಚ್ಚಾಗಿದ್ದು, ಪರಿಣಾಮವಾಗಿ ರೈತರು ಮುಂದೇನು ಎಂದು ಯೋಚಿಸುವಂತಾಗಿದೆ ಎಂದು ವಿವರಿಸಿದ್ದಾರೆ.

ಮಳೆಯ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದು, ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಪ್ರಸ್ತುತ ಹಿಂಗಾರಿನಲ್ಲಿ ಕೂಡ ಮಳೆಯ ಅಭಾವದಿಂದಾಗಿ ರೈತನ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸರ್ಕಾರದ ವರದಿಯ ಪ್ರಕಾರ ರಾಜ್ಯದಲ್ಲಿ 223 ತಾಲೂಕುಗಳು ಸಂಪೂರ್ಣ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದು ಗಮನ ಸೆಳೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next