Advertisement
ಧಾರವಾಡ: ಭತ್ತದ ಗದ್ದೆಗಳಲ್ಲಿ ಕಂಗೊಳಿಸುತ್ತಿರುವ ಹಚ್ಚ ಹಸಿರಿನ ಪೈರು. ಲಾಕ್‌ಡೌನ್ ಮಧ್ಯೆ ದೇಶಿಯವಾಗಿ ಸಂಸ್ಕರಿಸಿದ ಬೀಜಗಳನ್ನೇ ಬಿತ್ತುತ್ತಿರುವ ರೈತರು, ಕೈ ಹಿಡಿದ ಮೃಗಶಿರ, ಎಲ್ಲೆಡೆ ಮುಂಗಾರು ಹಂಗಾಮು ಜೋರು.
Related Articles
Advertisement
ಜಿಲ್ಲೆಯಲ್ಲಿ ಎಂದಿನಂತೆ ಗೂಂಡಾ ಬೆಳೆ ಕಬ್ಬು ತನ್ನ ಅಸ್ತಿತ್ವವನ್ನು ವರ್ಷದಿಂದ ವರ್ಷಕ್ಕೆ ಅಧಿಕಗೊಳಿಸುತ್ತಲೇ ಆಗಿದೆ. ಭತ್ತ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದರೆ, 70 ರಿಂದ 80 ಸಾವಿರ ಹೆಕ್ಟೇರ್ ಪ್ರದೇಶವನ್ನು ಕಬ್ಬು ವ್ಯಾಪಿಸಿದೆ. ಹತ್ತಿಗೆ ಒತ್ತು ನೀಡುತ್ತಿದ್ದ ಅಣ್ಣಿಗೇರಿಯಲ್ಲಿ ಈ ಬಾರಿ ಮುಂಗಾರು ಬೇಗ ಚುರುಕಾಗಿ ಮಳೆ ಸುರಿದಿದ್ದು, ಹೆಸರು ಬೀಜ ಬಿತ್ತನೆ ಟ್ರೆಂಡ್ ಆರಂಭಗೊಂಡಿದೆ.
ಕೈ ಹಿಡಿದ ಮಿರಗಾ: ಮೃಗಶಿರ ಮಳೆಗೆ ಧಾರವಾಡದ ಹಳ್ಳಿಗರು ಮಿರಗಾ ಎಂದೆಯೇ ಕರೆಯುವುದು. ಜೂ.6ಕ್ಕೆ ಜಿಲ್ಲೆಗೆ ಪ್ರವೇಶ ಪಡೆದಿರುವ ಮಿರಗನ ಮಳೆ ಆರಂಭದಲ್ಲಿ ಚೆನ್ನಾಗಿಯೇ ಸುರಿದಿದ್ದು, ಒಳ್ಳೆಯ ಹದ ಮತ್ತು ಮುಂಗಾರು ಹಂಗಾಮು ಚುರುಕು ಪಡೆದಿದೆ. ಮಳೆನಾಡಿನಲ್ಲಿ ಬಿತ್ತಿದ ದೇಶಿ ಭತ್ತ ಈಗಾಗಲೇ ನೆಲ ಬಿಟ್ಟು ಹಚ್ಚ ಹಸಿರಾಗಿ ಎದ್ದು ನಿಂತಿದ್ದು, 15ದಿನಗಳ ಹಿಂದೆಯೇ ಬಿತ್ತನೆಯಾಗಿದ್ದ ಭತ್ತದಲ್ಲಿ ಈಗಾಗಲೇ ಬರಾವು (ಎಡೆಕುಂಟೆ ಹಂಗಾಮು) ಜೋರಾಗಿ ನಡೆಯುತ್ತಿದೆ. ಅಷ್ಟೇಯಲ್ಲ ದೇಶಿ ಬಿತ್ತನೆ ಬೀಜಗಳನ್ನು ರೈತರು ತಮ್ಮ ಮನೆಗಳಲ್ಲಿಯೇ ಸಂಗ್ರಹಿಸಿಟ್ಟುಕೊಂಡು ಬಿತ್ತನೆ ಮಾಡುವುದರಿಂದ ಇದಕ್ಕೆ ಸರ್ಕಾರದ ಅವಲಂಬನೆ ಇಲ್ಲವೇ ಇಲ್ಲ. ಹೀಗಾಗಿ ಹದಕ್ಕೆ ತಕ್ಕಂತೆ ಬಿತ್ತನೆ ಕಾರ್ಯ ನಡೆದಿದೆ. ವರ್ಷದಿಂದ ವರ್ಷಕ್ಕೆ ಕಬ್ಬು ಬೆಳೆ ಆವರಿಸಿಕೊಳ್ಳುತ್ತಿರುವುದರಿಂದ ದೇಶಿ ಭತ್ತದ ಬಿತ್ತನೆ ಕ್ಷೇತ್ರ ಕಡಿಮೆಯಾಗುತ್ತಲೇ ಸಾಗುತ್ತಿದ್ದು, ಈ ವರ್ಷ ಬರೀ 12 ಸಾವಿರ ಎಕರೆಗೆ ಕುಸಿದಿದೆ.
2017ರಲ್ಲಿ ಅಂದರೆ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 23 ಸಾವಿರ ಎಕರೆಯಲ್ಲಿ ದೇಶಿ ಭತ್ತ ಬಿತ್ತನೆಯಾಗುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದ್ದು, ಸಾಂಪ್ರದಾಯಿಕ ಬೆಳೆಯಿಂದ ರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ ಮತ್ತು ಸೋಯಾ ಅವರೆ ಬೆನ್ನು ಬಿದ್ದಿದ್ದಾರೆ. ಬೀಜ ಗೊಬ್ಬರ ಅಗತ್ಯ ದಾಸ್ತಾನು: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಶೇ.99ಹೆಚ್ಚುವರಿ ಮಳೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 2.35 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಇದ್ದು, ಈಗಾಗಲೇ 1.75 ಹೆಕ್ಟೇರ್ ಭೂಮಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 15,428 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಈಗಾಗಲೇ 20,268 ಕ್ವಿಂಟಲ್ ಬೀಜಗಳ ಲಭ್ಯತೆ ಇದೆ. ಈಗಾಗಲೇ 16781 ಕ್ವಿಂಟಲ್ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಯೂರಿಯಾ 12714 ಟನ್ ದಾಸ್ತಾನು ಇದ್ದು, 7704 ಟನ್ ಈಗಾಲೇ ಮಾರಾಟವಾಗಿ, 5010 ಟನ್ ಉಳಿಕೆ ದಾಸ್ತಾನು ಇದೆ. ಡಿಎಪಿ 12286 ಟನ್ ದಾಸ್ತಾನು ಇದ್ದು, 7954 ಟನ್ ಈಗಾಗಲೇ ಮಾರಾಟವಾಗಿ, 4332 ಟನ್ ಉಳಿಕೆ ದಾಸ್ತಾನು ಇದೆ. ಪೊಟಾಷ್ 3878 ಟನ್ ದಾಸ್ತಾನು ಇದ್ದು, 886 ಟನ್ ಈಗಾಗಲೇ ಮಾರಾಟವಾಗಿ, 2992 ಟನ್ ಉಳಿಕೆ ದಾಸ್ತಾನು ಇದೆ. ಕಾಂಪ್ಲೆಕ್ಸ್ 14258 ಟನ್ ದಾಸ್ತಾನು ಇದ್ದು, 5879 ಟನ್ ಈಗಾಗಲೇ ಮಾರಾಟವಾಗಿ, 8379 ಟನ್ ಉಳಿಕೆ ದಾಸ್ತಾನು ಇದೆ. ಒಟ್ಟು ವಿವಿಧ ರಸಗೊಬ್ಬರಗಳು ಇಲ್ಲಿಯವರೆಗೆ 22423 ಟನ್ ಮಾರಾಟವಾಗಿದ್ದು, 2713 ಟನ್ ಉಳಿಕೆ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದೆ.
ಅಕ್ರಮ ಬೀಜ-ಗೊಬ್ಬರಕ್ಕೆ ದಂಡಂ ದಶಗುಣಂ: ಜಿಲ್ಲೆಯ 72 ಬೀಜ ಮಳಿಗೆ, 54 ರಸಗೊಬ್ಬರ ಮಳಿಗೆ ಮತ್ತ 41 ಪೀಡನಾಶಕ ಮಳಿಗೆಗಳನ್ನು ಅ ಧಿಕಾರಿಗಳು ತಪಾಸಣೆ ಮಾಡಿ, ಒಂದು ಬೀಜ ಮಳಿಗೆ, ಆರು ರಸಗೊಬ್ಬರ ಮಳಿಗೆಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಒಂದು ಬೀಜ ಮಳಿಗೆ ಮತ್ತು ಒಂದು ರಸಗೊಬ್ಬರ ಮಳಿಗೆಯನ್ನು ಜಪ್ತಿ ಮಾಡಿದ್ದಾರೆ. ಇದಲ್ಲದೇ ಕಲಘಟಗಿ ತಾಲೂಕಿನಲ್ಲಿ ಮಣ್ಣು ಸುಧಾರಕವನ್ನು ಸಾವಯವ ಡಿಎಪಿ ಹಾಗೂ ಗೊಬ್ಬರವೆಂದು ಹೇಳಿ ಮಿನಿ ಟ್ರಕ್‌ನಲ್ಲಿ ಮಾರುತ್ತಿರುವವರನ್ನು ತಡೆದು 56 ಚೀಲ ಅಂದಾಜು 75,000 ರೂ. ಮೌಲ್ಯದ ಗೊಬ್ಬರ ಜಪ್ತಿ ಮಾಡಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ 10 ದಿನಗಳ ಕಾಲ(ಸಿಆರ್‌ಪಿಸಿ 420 ರಡಿ) ಕಾರಾಗೃಹದಲ್ಲಿ ಇಡಲಾಗಿತ್ತು. ಧಾರವಾಡ ಶಹರದ ಸಾಧನಕೇರಿಯಲ್ಲಿ ಎ.ಎಸ್ ಗ್ರೂಪ್ ಸಂಸ್ಥೆಯಿಂದ ಮಣ್ಣು ಸುಧಾರಕವನ್ನು ಜೈವಿಕ ಡಿಎಪಿ, ಯೂರಿಯಾ ಗೊಬ್ಬರ ಎಂದು ಮಾರಾಟ ಮಾಡುತ್ತಿದ್ದ ದಾಖಲಾತಿಗಳನ್ನು ಪರಿಶೀಲಿಸಿ ಸಂಸ್ಥೆ ಮೇಲೆ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗಿದೆ.