Advertisement

ಸೀಶೆಲ್ಸ್‌ನಲ್ಲಿ ನೌಕಾನೆಲೆ ಯೋಜನೆಗೆ ಒಪ್ಪಂದ

06:00 AM Jun 26, 2018 | Team Udayavani |

ನವದೆಹಲಿ: ಸೀಶೆಲ್ಸ್‌ನಲ್ಲಿ ಭಾರತ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡಿದ್ದ ನೌಕಾ ನೆಲೆ ಯೋಜನೆ ರದ್ದಾಗುವ ಆತಂಕದಲ್ಲಿತ್ತಾದರೂ, ಇದೀಗ ಈ ಯೋಜನೆಯನ್ನು ಮುಂದುವರಿಸಲು ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಇದರ ಜೊತೆಗೆ 650 ಕೋಟಿ ರೂ. ಸಾಲ ಸೌಲಭ್ಯ ಹಾಗೂ 2 ಡಾರ್ನಿಯರ್‌ ಯುದ್ಧವಿಮಾನಗಳನ್ನು ಸೀಶೆಲ್ಸ್‌ ಒದಗಿಸಲಿದೆ.

Advertisement

ಸೀಶೆಲ್ಸ್‌ಅಧ್ಯಕ್ಷ ಡ್ಯಾನಿ ಫಾರೆ ಭಾರತ ಪ್ರವಾಸದಲ್ಲಿದ್ದು, ಅವರು ಸೋಮವಾರ ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಉಭಯ ದೇಶಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಬದ್ಧವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದ್ದಾರೆ.

ಇನ್ನೊಂದೆಡೆ ಹಲವು ಸರ್ಕಾರಿ ಯೋಜನೆಗಳಿಗೂ ಸೀಶೆಲ್ಸ್‌ಗೆ ಭಾರತ ನೆರವು ನೀಡಲಿದೆ. ಸರ್ಕಾರಿ ವಸತಿಗೃಹ, ಪೊಲೀಸ್‌ ಕೇಂದ್ರ ಕಚೇರಿ ಮತ್ತು ಅಟಾರ್ನಿ ಜನರಲ್‌ ಕಚೇರಿ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಅಲ್ಲದೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾ ರಕ್ಕಾಗಿ ಸೀಶೆಲ್ಸ್‌ ಜೊತೆಗೆ ಆರು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಅಸಂಪ್ಷನ್‌ ದ್ವೀಪದಲ್ಲಿ ಭಾರತ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದ ನೌಕಾ ನೆಲೆ ಯೋಜನೆಗೆ ಸೀಶೆಲ್ಸ್‌ನ ವಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಜೊತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದಿಲ್ಲ ಎಂ ದು ಭಾರತ ಪ್ರವಾಸಕ್ಕೂ ಮುನ್ನ ಫಾರೆ ಹೇಳಿದ್ದರು. ಅಲ್ಲದೆ 3000 ಕೋಟಿ ರೂ. ಯೋಜನೆಯ ಈ ಒಪ್ಪಂದವನ್ನು ಅನುಮೋದಿಸಲು ಸಂಸತ್ತಿನಲ್ಲಿ ಮಂಡಿಸದಿರಲೂ ಫಾರೆ ನಿರ್ಧರಿಸಿದ್ದರು.

ಆರು ದಿನಗಳ ಭೇಟಿ: ಫಾರೆ ಭಾರತಕ್ಕೆ ಆರು ದಿನಗಳ ಭೇಟಿಗಾಗಿ ಶುಕ್ರವಾರ ಗುಜರಾತ್‌ಗೆ ಬಂದಿಳಿದಿದ್ದರು. ಶನಿವಾರ ಸಾಬರಮತಿ ಆಶ್ರಮ ಹಾಗೂ ಅಹಮದಾಬಾದ್‌ ಐಐಎಂಗೆ ಅವರು ಭೇಟಿ ನೀಡಿದ್ದಾರೆ. ನಂತರ ಗೋವಾಗೆ ತೆರಳಿ ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ಸೋಮವಾರ ಪ್ರಧಾನಿ ಮೋದಿ ಜತೆಗೆ ಮಾತುಕತೆ ನಡೆಸಿದ್ದಾರೆ.

Advertisement

ಬೃಹತ್‌ ಆಮೆಗಳ ಗಿಫ್ಟ್
ಸೀಶೆಲ್ಸ್‌ ಅಧ್ಯಕ್ಷ ಫಾರೆ ಅವರು 2 ಬೃಹತ್‌ ಅಲ್ಡಾಬ್ರಾ ಆಮೆಗಳನ್ನು ಭಾರತಕ್ಕೆ ಉಡು ಗೊರೆಯಾಗಿ ನೀಡಿದ್ದಾರೆ. ಸೀಶೆಲ್ಸ್‌ನಿಂದ ತಂದಿದ್ದ ಆಮೆಗಳನ್ನು ಸೋಮವಾರ ಹೈದರಾಬಾದ್‌ನ ನೆಹರೂ ಝುವಾಲಾ ಜಿಕಲ್‌ ಪಾರ್ಕ್‌ಗೆ ಹಸ್ತಾಂತರಿಸಲಾಗಿದೆ.

ಫಾರೆ ಗಾಯನ
ಮಾತುಕತೆ ಬಳಿಕ ಪ್ರಧಾನಿ ಮೋದಿ ಅವರು ದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡ ಫಾರೆ ಅವರು, ಕೈಯ್ಯಲ್ಲಿ ಸಿತಾರ್‌ ಹಿಡಿದುಕೊಂಡು ಹಾಡೊಂದನ್ನು ಹಾಡಿ ಎಲ್ಲರ ಮನತಣಿಸಿದರು. ಇವರ “ಓ ಮೊನ್‌ ಪೆ ಸೀಶೆಲ್ಸ್‌’ ಹಾಡು ಕೇಳಿ ಪ್ರಧಾನಿ ಮೋದಿ ಸೇರಿದಂತೆ ನೆರೆದವರೆಲ್ಲರೂ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಬಸವಳಿದು ಬಿದ್ದ ಯೋಧ
ಸೀಶೆಲ್ಸ್‌ ಅಧ್ಯಕ್ಷ ಡ್ಯಾನಿ ಫಾರೆಯವರಿಗೆ ಗೌರವ ನಮನ ಸಲ್ಲಿಸುವ ವೇಳೆ ನೌಕಾಪಡೆಯ ಯೋಧರೊಬ್ಬರು ಬಿಸಿಲಿನಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆದ ಈ ಕಾರ್ಯಕ್ರಮ ಮುಕ್ತಾಯಗೊಂಡು ಅತಿಥಿಗಳೆಲ್ಲರೂ ವೇದಿಕೆಯಿಂದ ತೆರಳಿದ ಮೇಲೆ ಯೋಧರ ಬಳಿಗೆ ಆಗಮಿಸಿದ ಮೋದಿ, ಅವರ ಆರೋಗ್ಯ ವನ್ನು ವಿಚಾರಿಸಿದರು. ಅಷ್ಟೇ ಅಲ್ಲ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆಯೂ ಸಲಹೆ ನೀಡಿದರು ಎಂದು ಹೇಳಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next