Advertisement

ಜಿಡಗಾ ಮಠದ ಕೆರೆ ನಿರ್ಮಾಣಕ್ಕೆ ಒಪ್ಪಿಗೆ

11:53 AM Jan 17, 2022 | Team Udayavani |

ಆಳಂದ: ತಾಲೂಕಿನ ಜಿಡಗಾ ನವಕಲ್ಯಾಣ ಮಠದ 30 ಎಕರೆ ಪ್ರದೇಶದಲ್ಲಿ ಶ್ರೀ ಮಠದ ಪ್ರಸ್ತಾಪಿತ ಪ್ರವಾಸಿ ತಾಣ ಮಾದರಿ ಕೆರೆ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಸಹಮತ ಸೂಚಿಸಿದರು.

Advertisement

ಶನಿವಾರ ಜಿಡಗಾ ನವಕಲ್ಯಾಣ ಮಠಕ್ಕೆ ನಿಗಮದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿಯಿಂದ ದರ್ಶನಾಶೀರ್ವಾದ ಪಡೆದು ಚರ್ಚಿಸಿ, ಕೆರೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಳ್ಳುವ ಕುರಿತು ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿ ಸಿದ್ಧಪಡಿಸಿ ಕಾರ್ಯಗತ ಮಾಡಲಾಗುವುದು ಎಂದರು.

ಇದೇ ವೇಳೆ ಶ್ರೀಗಳು ಮಾತನಾಡಿ, ಶ್ರೀ ಮಠದಿಂದ ಕೆರೆ ನಿರ್ಮಾಣದ ಸಂಕಲ್ಪವಿದೆ. ಇದರಿಂದ ನೆರೆಹೊರೆ ರೈತರ ಹೊಲದಲ್ಲಿ ಅಂತರ್ಜಲ ವೃದ್ಧಿಯಾಗುವುದು. ಭವಿಷ್ಯದಲ್ಲಿ ಶ್ರೀಮಠ ಉದ್ದೇಶಿತ 2001 ಗೋವು ರಕ್ಷಣೆ, ಸಾವಿರ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣದಂತ ಲೋಕಪಯೋಗಿ ಕಾರ್ಯಕ್ಕೆ ನೀರಿನ ಅಗತ್ಯವಾಗಲಿದೆ. ಜತೆಗೆ ಹಸಿರು ಪರಿಸರ ಅರಣ್ಯೀಕರಣಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪ್ರವಾಸಿತಾಣ ಉದ್ಯಾನವನ ಮಾದರಿ ಹಾಗೂ ಕೆರೆಯಲ್ಲಿ ಲಿಂ| ಷಡಕ್ಷರಿ ಶಿವಯೋಗಿ ಸಿದ್ಧರಾಮರ 76 ಅಡಿ ಎತ್ತರದ ಬೃಹತ್‌ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಉದ್ದೇಶಿತ ಈ ಕೆರೆಗೆ ನೀರಿನ ಮೂಲವಾಗಿ ಭೀಮಾನದಿಯಿಂದ ಅಮರ್ಜಾಕ್ಕೆ ನೀರು ತರುವ ಯೋಜನೆ ಜಾಲ್ತಿಯಲಿದೆ. ಇದೇ ಮಾರ್ಗದಲ್ಲಿ ಕೆರೆಯ ಜಾಗ ಇರುವುದರಿಂದ ಆ ನೀರು ತುಂಬಿಸಿಕೊಳ್ಳಲು ಅನುಕೂಲವಾಗುತ್ತದೆ. ಆರಂಭಿಕವಾಗಿ ಕೆರೆ ನಿರ್ಮಾಣಕ್ಕಾಗಿ 12 ಎಕರೆ ಜಾಗ ಬಿಟ್ಟುಕೊಡಲಾಗಿತ್ತು. ಆದರೆ ಇನ್ನಷ್ಟು ಜಾಗದ ಅವಶ್ಯಕತೆ ಮನಗಂಡು ಇನ್ನೂ 18 ಎಕರೆ ಸೇರಿ ಒಟ್ಟು 30 ಎಕರೆ ಪ್ರದೇಶ ಒದಗಿಸಲು ಬದ್ಧವಾಗಿದ್ದೇವೆ ಎಂದು ವಿವರಿಸಿದರು.

ಈ ಕುರಿತು 30 ಎಕರೆ ಪ್ರದೇಶದಲ್ಲಿ ವಿಸ್ತೃತವಾಗಿ ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿ ಸಿದ್ಧಪಡಿಸಿ ಮುಂದಿನ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನಿರ್ದೇಶಕ ಮಲ್ಲಿಕಾರ್ಜುನ ಒಪ್ಪಿಗೆ ಸೂಚಿಸಿದರು.

Advertisement

ನಿಗಮದ ಅಧೀಕ್ಷಕ ಅಭಿಯಂತರ ವಿಲಾಸಕುಮಾರ ಮಹಾಶೆಟ್ಟಿ, ಕಲಬುರಗಿ ಐಪಿಸಿ ವಿಭಾಗ-1 ನಿಗಮದ ಕಾರ್ಯಪಾಲಕ ಅಭಿಯಂತರ ಸೂರ್ಯಕಾಂತ ಮಾಲೆ, ಶಾಖಾಧಿಕಾರಿ ಸತೀಶ ಉಪ್ಪಿನ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲಕ್ಷ್ಮೀಕಾಂತ ಬಿರಾದಾರ, ಮುಖಂಡ ಅಭಿಷೇಕ ಅಲಂಪ್ರಭು ಪಾಟೀಲ, ಗುತ್ತಿಗೆದಾರ ಎಂ.ಎಸ್‌. ಪಾಟೀಲ, ಸಿದ್ಧಶ್ರೀ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಬಸವರಾಜ ಹಿರೇಮಠ, ಸಿದ್ಧರಾಮ ಪಾಟೀಲ, ಶ್ರೀ ಮಠದ ಆಪ್ತ ಕಾರ್ಯದರ್ಶಿ ಬಸವರಾಜ ಚೌಪಾಟೆ, ಯಲ್ಲಾಲಿಂಗ ಸಲಗರ, ಶಿಕ್ಷಕ ಸಿದ್ಧರಾಮ ಯಾದವಾಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next