Advertisement

ಶ್ರೀರಂಗ ಪರಿಷ್ಕೃತ ಯೋಜನೆಗೆ ಒಪ್ಪಿಗೆ

12:53 PM Sep 04, 2020 | Suhan S |

ರಾಮನಗರ: ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕು ಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಹರಿಸುವ 450 ಕೋಟಿ ರೂ. ವೆಚ್ಚದ ಪರಿಷ್ಕೃತ ಶ್ರೀರಂಗ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ ಎಂದು ಡಿಸಿಎಂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಬೆಂಗಳೂರಿ ನಿದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈಗಾಗಲೇ ಯೋಜನೆಗೆ 277 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಯೋಜನೆಗೆ ಮತ್ತಷ್ಟು ಸಂಪನ್ಮೂಲದ ಅಗತ್ಯವಿತ್ತು. ಹೀಗಾಗಿ ಅಗತ್ಯವಿದ್ದ 173 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿಒಪ್ಪಿಗೆ ನೀಡಲಾಯಿತು ಎಂದಿದ್ದಾರೆ. ಯೋಜನೆಯ ಕಾಮಗಾರಿಯನ್ನು ವೇಗಗತಿಯಲ್ಲಿ ನಡೆಸಲಾಗುತ್ತಿದ್ದು, ಅಗತ್ಯವಿದ್ದ ಮತ್ತಷ್ಟು ನಿರ್ವಹಣಾ ವ್ಯವಸ್ಥೆ ಹಾಗೂ ಮತ್ತಿತರೆ ಪೂರಕ ವ್ಯವಸ್ಥೆಗಳನ್ನು ಮಾಡುವ ಉದ್ದೇಶದಿಂದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಪಂಪ್‌ ಹೌಸ್‌ ಮತ್ತು ವಿದ್ಯುತ್‌ ಸಬ್‌ ಸ್ಟೇಷನ್‌: ಹೇಮಾ ವತಿ ನೀರು 195 ಕಿ.ಮೀ ದೂರದಿಂದ ನೀರು ಪೂರೈಕೆಯಾಗಬೇಕಿದ್ದು, ಅದಕ್ಕಾಗಿ ಪ್ರತ್ಯೇಕ ಪಂಪ್‌ ಹೌಸ್‌ ಮತ್ತು ವಿದ್ಯುತ್‌ ಸಬ್‌ಸ್ಟೇಷನ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ನೀರನ್ನು ಸರಬರಾಜುಮಾಡುವ ಪಿಎಸ್ಸಿ ಪೈಪುಗಳು ವಿರಳವಾಗಿದ್ದು,  ಅವುಗಳನ್ನು ಕಾಲಮಿತಿಯೊಳಗೆ ಖರೀದಿಸಿ ಯೋಜನೆ ಕಾರ್ಯಗತ ಮಾಡಬೇಕಾಗಿದೆ. ಒಟ್ಟಾರೆಯಾಗಿ ಕಾವೇರಿ ನೀರಾವರಿ ನಿಗಮ ಸಲ್ಲಿಸಿರುವ ಪರಿಷ್ಕೃತ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಎರಡೂ ತಾಲೂಕುಗಳ ಕೆರೆಗಳಿಗೆ ನೀರು ಹರಿಯಲಿದೆ. ಈ ಯೋಜನೆಯಿಂದ ಎರಡೂ ತಾಲೂಕುಗಳ ಜಲಕ್ಷಾಮ ಶಾಶ್ವತವಾಗಿ ನಿವಾರಣೆಯಾಗಲಿದೆ ಎಂದಿದ್ದಾರೆ.

172.19 ಕ್ಯೂಸೆಕ್‌ ನೀರು: ಉದ್ದೇಶಿತ ಪ್ರದೇಶಗಳಿಗೆ ಒಟ್ಟು 172.19 ಕ್ಯೂಸೆಕ್‌ ನೀರು ಹರಿಸಲಾಗುವುದು. ಮಾಗಡಿ ತಾ. 68 ಕೆರೆಗಳು, ಕುಣಿಗಲ್‌ ತಾ. ಹುತ್ತರಿದುರ್ಗ ಹೋಬಳಿಯ 15 ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಸುಮಾರು ಈ ಭಾಗ ದ 289 ಗ್ರಾಮಗಳಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಅಭಾವ ನೀಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next