Advertisement
ಕಳಸಾ-ಬಂಡೂರಿ ನಾಲಾಗಳ ನೀರನ್ನು ತೆರೆದ ಕಾಲುವೆ, ಸುರಂಗ ಮಾರ್ಗ ಮೂಲಕ ನೀರು ತರುವುದು ಸೂಕ್ತವೋ, ಏತನೀರಾವರಿ ಮೂಲಕ ತರುವುದು ಸೂಕ್ತವೋ ಎಂಬ ಜಿಜ್ಞಾಸೆ ನಿಟ್ಟಿನಲ್ಲಿ ಇಲ್ಲಿನ ಕೆಸಿಸಿಐ ಸಭಾಂಗಣದಲ್ಲಿ ಸಮಾಗಮಗೊಂಡಿದ್ದ ಅನೇಕ ನಿವೃತ್ತ ಎಂಜಿಯರ್‌ಗಳಲ್ಲಿ ಬಹುತೇಕರು ಸದ್ಯದ ಸ್ಥಿತಿಯಲ್ಲಿ ಏತನೀರಾವರಿ ಮೂಲಕವೇ ನೀರು ಪಡೆಯುವುದು ಸೂಕ್ತ ಎಂಬ ಅನಿಸಿಕೆ ವ್ಯಕ್ತಪಡಿಸಿದರು.
Related Articles
Advertisement
ನ್ಯಾಯಾಧಿಕರಣದ ತೀರ್ಪುಗೆ ಪೂರಕವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಕಳಸಾ ನಾಲಾದಿಂದ ನೀರು ಪಡೆಯಲು ಕಾಮಗಾರಿ ಕೈಗೊಂಡಿದ್ದರೂ ಕೇಂದ್ರದ ಅರಣ್ಯ, ಪರಿಸರ ಸೇರಿದಂತೆ ವಿವಿಧ ಇಲಾಖೆಗಳ ಪರವಾನಗಿ ಅಗತ್ಯವಾಗಿದ್ದು, ಮುಖ್ಯವಾಗಿ ಅರಣ್ಯಭೂಮಿ ಬಳಕೆಯದ್ದೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆದು ಪರ್ಯಾಯ ಮಾರ್ಗವಾಗಿ ರಾಜ್ಯ ಸರ್ಕಾರ ಏತನೀರಾವರಿ ಯೋಜನೆ ಯತ್ನಕ್ಕೆ ಮುಂದಾಗಿದೆ.
ಮಹದಾಯಿ ನ್ಯಾಯಾಧೀಕರಣದ ಮುಂದೆ ರಾಜ್ಯ ಕಳಸಾ ನಾಲಾದಡಿ 3.56 ಟಿಎಂಸಿ ಅಡಿ, ಬಂಡೂರಿಯಿಂದ 4 ಟಿಎಂಸಿ ಅಡಿ ಸೇರಿದಂತೆ ಸೇರಿದಂತೆ 7.56 ಟಿಎಂಸಿ ಅಡಿ ನೀರಿನ ಬೇಡಿಕೆ ಇರಿಸಿತ್ತು. ಆದರೆ, ನ್ಯಾಯಾಧಿಕರಣ ಕಳಸಾದಿಂದ 1.72 ಟಿಎಂಸಿ ಅಡಿ, ಬಂಡೂರಿಯಿಂದ 1.82 ಟಿಎಂಸಿ ಅಡಿ ಸೇರಿದಂತೆ ಒಟ್ಟು 3.90 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಏತನೀರಾವರಿ ಮೂಲಕ ಕಳಸಾದಿಂದ 1.2 ಟಿಎಂಸಿ ಅಡಿ ನೀರು ಪಡೆದುಕೊಳ್ಳಲು ಮಹತ್ವದ ಹೆಜ್ಜೆ ಇರಿಸಲು ಮುಂದಾಗಿದೆ.
ಹಂಚಿಕೆಯಾದ ನೀರನ್ನು ಕಾಲುವೆ ಮೂಲಕ, ನೈಸರ್ಗಿಕ ಹರಿವು ಮೂಲಕ ಬರಬೇಕೋ , ಏತನೀರಾವರಿ ಮೂಲಕ ಪಡೆಯಬೇಕೋ ಎಂಬ ಜಿಜ್ಞಾಸೆ ಮೂಡಿದೆಯಾದರೂ ಅನೇಕ ನಿವೃತ್ತ ಎಂಜಿನಿಯರ್‌ಗಳು ಸದ್ಯದ ಸ್ಥಿತಿಯಲ್ಲಿ ಕಾಲುವೆ-ಸುರಂಗ ಮೂಲಕ ನೀರು ಎಂದಾದರೆ ಇನ್ನಷ್ಟು ವರ್ಷಗಳು ಬೇಕಾಗುತ್ತದೆ. ಕಳಸಾ ನಾಲಾದಿಂದ ನೀರು ಮಲಪ್ರಭಾಕ್ಕೆ ಸೇರಿಸಲು 329 ಹೆಕ್ಟೇರ್ ಭೂಮಿ ಅಗತ್ಯವಾಗಿದ್ದು, ಇದರಲ್ಲಿ 257 ಹೆಕ್ಟೇರ್ ಅರಣ್ಯ ಪ್ರದೇಶ ಒಳಗೊಂಡಿದೆ.
ಬಂಡೂರಿಯಿಂದ ಮಲಪ್ರಭಾಕ್ಕೆ ನೀರು ಸೇರಿಸಲು 402.50 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಇದರಲ್ಲಿ 121 ಹೆಕ್ಟೇರ್ ಖಾಸಗಿ ಭೂಮಿಯಾದರೆ, 39 ಹೆಕ್ಟೇರ್ ಸರ್ಕಾರಿ ಭೂಮಿ, 242.5 ಹೆಕ್ಟೇರ್ ಅರಣ್ಯಭೂಮಿಯಾಗಿದೆ. ಎರಡು ನಾಲಾಗಳ ಯೋಜನೆ ಅನುಷ್ಠಾನಕ್ಕೆ 1,677.30 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದೆ. ಅರಣ್ಯಭೂಮಿ ಬಳಕೆಗೆ ಪರವಾನಗಿ ಕಷ್ಟವಾಗಿದ್ದು, ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿದ್ದರೂ ಅದನ್ನು ಬಳಸಿಕೊಳ್ಳಲು ವರ್ಷಗಳು ದೂಡಬೇಕಾಗುತ್ತದೆ.
ಅದರ ಬದಲು ಕೇವಲ 50 ಹೆಕ್ಟೇರ್ ಅರಣ್ಯ ಭೂಮಿಯಷ್ಟೆ ಬಳಕೆ ಮಾಡಿಕೊಂಡು, ಯೋಜನಾ ಅಂದಾಜು ವೆಚ್ಚದಲ್ಲಿ 500-600 ಕೋಟಿ ಕಡಿಮೆ ಮಾಡಿ, ಏತ ನೀರಾವರಿ ಮೂಲಕ ಯೋಜನೆ ಅನುಷ್ಠಾನ ಸೂಕ್ತವೆಂಬ ಅಭಿಪ್ರಾಯ ಬಹುತೇಕ ನಿವೃತ್ತ ಎಂಜಿನಿಯರ್ ಗಳದ್ದಾಗಿತ್ತು. ಸದ್ಯಕ್ಕೆ ಸಿಕ್ಕ ನೀರು ಬಳಸಿಕೊಳ್ಳೋಣ ಬಳಕೆ ಮಾಡಿಕೊಂಡ ನೀರನ್ನು ಹಿಂದಕ್ಕೆ ಪಡೆಯಲು ಆಗುವುದಿಲ್ಲ. ಮುಂದೆ ಬರುವುದನ್ನು ಮತ್ತೆ ನೋಡೊಣ ಎಂಬ ಅನಿಸಿಕೆ ಬಹುತೇಕರಿಂದ ಮೂಡಿ ಬಂದಿತು.
ಕಾಳೇಶ್ವರಂ ಏತನೀರಾವರಿ ಯೋಜನೆ ಪ್ರೇರಣೆತೆಲಂಗಾಣದಲ್ಲಿ ಗೋದಾವರಿ ನೀರನ್ನು ನೀರಾವರಿ-ಕುಡಿಯಲು ಬಳಸಿಕೊಳ್ಳಲು ವಿಶ್ವದಲ್ಲಿಯೇ ಅತಿದೊಡ್ಡ ಏತನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಏತನೀರಾವರಿ ಯೋಜನೆಗಳು ವಿಫಲವಾಗಲಿವೆ ಎಂಬುದಕ್ಕೆ ಅಪವಾದ-ಪ್ರೇರಣೆಯಂತೆ ಆ ಯೋಜನೆ ಇದೆ. ಇಲ್ಲಿಯೂ ಅತ್ಯುತ್ತಮ ತಂತ್ರಜ್ಞಾನದ ಏತನೀರಾವರಿ ಯೋಜನೆ ಅಳವಡಿಸಿಕೊಳ್ಳೋಣ ಎಂಬ ಅನಿಸಿಕೆ ವ್ಯಕ್ತವಾಯಿತು. ಈ ಹಿಂದೆ ಏತನೀರಾವರಿ ಯೋಜನೆಗಳು ವಿಫಲವಾಗಿರುವುದಕ್ಕೆ ಸಮರ್ಪಕ ವಿದ್ಯುತ್, ನಿರ್ವಹಣೆ ಕೊರತೆ, ಉತ್ತಮ ಯಂತ್ರೋಪಕರಣಗಳು ಕಾರಣ ಇರಬಹುದು. ಈಗ ಅಂತಹ ಸಮಸ್ಯೆ ಇಲ್ಲ. ತಂತ್ರಜ್ಞಾನ ಬೆಳೆದಿದ್ದು, ಏತನೀರಾವರಿ ಬಗ್ಗೆ ಅನುಮಾನ ಬೇಡ ಎಂಬುದು ನಿವೃತ್ತ ಎಂಜಿನಿಯರ್‌ಗಳಾದ ವಿ.ಎಂ.ಕುಲಕರ್ಣಿ, ಎಂ.ಎಂ.ಹಿರೇಮಠ, ಎನ್.ಎಸ್.ಕುಂಚೊಳ, ಎನ್.ಎಂ.ಸಂಶಿಮಠ, ಎಸ್.ಎಸ್.ಖಣಗಾವಿ, ಮಹೇಶ ಹಿರೇಮಠ, ಜಿ.ಟಿ.ಚಂದ್ರಶೇಖರ, ಕೃಷ್ಣ ಚವ್ಹಾಣ ಅನೇಕರದ್ದಾಗಿತ್ತು. ಇನ್ನಷ್ಟು ಸ್ಪಷ್ಟತೆ ಮೂಡಬೇಕಾಗಿತ್ತು
ಕಳಸಾ ನಾಲಾದಿಂದ 1.2 ಟಿಎಂಸಿ ಅಡಿ ನೀರನ್ನು ಏತನೀರಾವರಿ ಮೂಲಕ ತರಲು ಸರಕಾರ ಗಂಭೀರ ಚಿಂತನೆ ನಡೆಸಿದ್ದರ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಎಲ್ಲಿ ನೀರನ್ನು ಮೇಲೆತ್ತಲಾಗುತ್ತದೆ. ಅದನ್ನು ಹೇಗೆ ತಂದು ಎಲ್ಲಿ ಸೇರಿಸಲಾಗುತ್ತದೆ ಎಂಬುದರ ಬಗ್ಗೆ ನಿವೃತ್ತ ಎಂಜಿನಿಯರ್‌ಗಳು ಸ್ಪಷ್ಟತೆ, ಹೆಚ್ಚಿನ ಮಾಹಿತಿ ಹಾಗೂ ತಮ್ಮ ಅನುಭವದ ಮಾತು-ಅನಿಸಿಕೆಗಳನ್ನು ಹೇಳಬೇಕಾಗಿತ್ತು ಎಂಬ ಅನಿಸಿಕೆ ಅನೇಕರದ್ದಾಗಿತ್ತು. ಏತನೀರಾವರಿ ಮೂಲಕ ನೀರು ತರುತ್ತೇವೆ ಎಂಬ ಸುದ್ದಿ ಸರ್ಕಾರದ ಮಟ್ಟದಲ್ಲಿ ಸುಳಿದಾಡುತ್ತಿದೆ. ಕನಿಷ್ಟ ಅದರ ಸ್ವರೂಪ ಏನಾಗಿದೆ, ಕಾಮಗಾರಿ ಕಾಲಮಿತಿ ಬಗ್ಗೆ ಸರ್ಕಾರದಿಂದ ಇದುವರೆಗೂ ಸ್ಪಷ್ಟತೆ ಇಲ್ಲವೇ ಅನಿಸಿಕೆ ಇಲ್ಲವಾಗಿದೆ. ಕನಿಷ್ಟ ಬಹಿರಂಗವಾಗಿಲ್ಲವಾದರೂ ರೈತ ಪ್ರತಿನಿಧಿಗಳು, ತಜ್ಞರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಂಡು ರಹಸ್ಯ ಸಭೆ ನಡೆಸುವ ಮೂಲಕವಾದರೂ ಸರ್ಕಾರ ತನ್ನ ನಿಲುವು, ಯೋಜನೆ ಅನುಷ್ಠಾನಕ್ಕೆ ಕೈಗೊಳ್ಳುವ ಕ್ರಮವನ್ನಾದರೂ ಸ್ಪಷ್ಟಪಡಿಸಲಿ ಎಂಬುದು ಹಲವರ ಅಭಿಪ್ರಾಯವಾಗಿದೆ.