ಬೆಂಗಳೂರು: ರಾಜ್ಯ ಮೀಸಲು ಅರಣ್ಯ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಟವರ್, ನೆಲದಡಿ(ಯುಜಿ)ಯಲ್ಲಿ ಕೇಬಲ್ ಅಳವಡಿಸುವಿಕೆ ಹಾಗೂ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ ಸಿ ) ಅಳವಡಿಸುವುದಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಅನುಮೋದನೆ ನೀಡಿದ್ದು, ಅದೇ ರೀತಿ ಬೆಂಗಳೂರಿಗೆ ಕುಡಿಯುವ ನೀರು ತರುವ ಸಲುವಾಗಿ ಮಾರ್ಗ ಬದಲಿಸಲೂ ಅನುಮತಿಸಲಾಗಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಬುಧವಾರ ವಿಕಾಸಸೌಧದಲ್ಲಿ ಜರಗಿದ ಸ್ಥಾಯಿ ಸಮಿತಿ ಸಭೆಯಲ್ಲಿ ಮೂರು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆದಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿರುವ ರಾಜ್ಯ ಮೀಸಲು ಅರಣ್ಯ ಪ್ರದೇಶಗಳಲ್ಲಿ ನೆಲದಡಿಯ ಕೇಬಲ್ ಅಳವಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಒಎಫ್ಸಿ ಅಳವಡಿಸುವುದಕ್ಕೂ ಅಂಗೀಕಾರ ದೊರೆತಿದ್ದು, ಪ್ರಸ್ತಾವನೆ ಸಲ್ಲಿಕೆಯಾಗಿರುವ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ಅಳವಡಿಸಲೂ ಸಮಿತಿ ಒಪ್ಪಿಗೆ ನೀಡಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ 0.02 ಹೆಕ್ಟೇರ್ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿ ನೀರಿನ ಕೊಳವೆ ಮಾರ್ಗ ಕೊಂಡೊ ಯ್ಯಬೇಕಿರುವುದರಿಂದ ಭೂಮಾರ್ಗ ಬದಲಾವಣೆಗೂ ಸಮ್ಮತಿ ದೊರೆತಿದೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿರುವ ರಾಜ್ಯ ವನ್ಯಜೀವಿ ಮಂಡಳಿ ಸಭೆಯ ಮುಂದೆ ಈ ಪ್ರಸ್ತಾವನೆಗಳು ಸಲ್ಲಿಕೆಯಾಗಿ ಅನುಮೋದನೆ ದೊರೆತರೆ ಅನುಷ್ಠಾನಕ್ಕೆ ಬರಲಿವೆ.