ಹೊಸಬರೇ ಸೇರಿ ನಿರ್ಮಿಸಿರುವ “ಅಗ್ರಸೇನಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮುರುಗೇಶ್ ಕಣ್ಣಪ್ಪ ನಿರ್ದೇಶನವಿದ್ದು, ಮಮತಾ ಜಯರಾಮ ರೆಡ್ಡಿ ಈ ಚಿತ್ರದ ನಿರ್ಮಾಪಕರು. ಅಮರ್ ವಿರಾಜ್, ರಚನಾ ದಶರಥ್ ಈ ಚಿತ್ರದ ನಾಯಕ- ನಾಯಕಿ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಜಯರಾಮ ರೆಡ್ಡಿ, ಹೆಂಡತಿಯ ಸಿನಿಮಾ ಪ್ರೀತಿಗೆ ಮಣಿದು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ನಿರ್ದೇಶಕ ಮುರುಗೇಶ್ ಮಾತನಾಡಿ, “ಇದೊಂದು ಫ್ಯಾಮಿಲಿ ಡ್ರಾಮಾ. ಇಂಟ್ರೊಡಕ್ಷನ್ ಹಾಡನ್ನು ಶಿವಣ್ಣ ರಿಲೀಸ್ ಮಾಡಿದ್ದರು. ಈಗ ಆ್ಯಕ್ಷನ್ ಟೀಸರ್ ರಿಲೀಸಾಗಿದೆ. ಡಬಲ್ ಟ್ರಾಕ್‌ನಲ್ಲಿ ಕಥೆ ನಡೆಯುತ್ತದೆ. ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೂಂದು ಟ್ರಾಕ್‌ನಲ್ಲಿ ಸಾಗುತ್ತದೆ. ರಾಮಕೃಷ್ಣ ಅವರ ಪಾತ್ರಕ್ಕೂ ಎರಡು ಶೇಡ್ ಇದೆ. ಬೆಳಗಾವಿಯ ನಾಗರಾಜ ದೇಸಾಯಿ ಅವರ ಚಚ್ಚಡಿ ವಾಡೆಯಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ಎಂದು ಹೇಳಿದರು.
ನಾಯಕ ಅರ್ಮ ವಿರಾಜ್ ಮಾತನಾಡಿ, “ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ನಮ್ಮ ಚಿತ್ರದ ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ನಾನು ಸಿಟಿಯ ಭಾಗದಲ್ಲಿ ಬರುತ್ತೇನೆ’ ಎಂದರು. ಮತ್ತೂಬ್ಬ ನಾಯಕ ಅಗಸ್ತ್ಯ ಮಾತನಾಡಿ, “ಚಿತ್ರದಲ್ಲಿ ನಾನು ಆದಿಶೇಷನಾಗಿ ಕಾಣಿಸಿಕೊಂಡಿದ್ದು, ರಾಮಕೃಷ್ಣ ಅವರು ನನ್ನ ತಂದೆಯಾಗಿ ನಟಿಸಿದ್ದಾರೆ. ಹಳ್ಳಿಯ ಜನ ಯಾವುದೇ ಕಾರಣಕ್ಕೂ ಹಳ್ಳಿಬಿಟ್ಟು ಪಟ್ಟಣಕ್ಕೆ ಹೋಗಬಾರದು ಎಂಬುದು ನನ್ನ ಇಚ್ಚೆ. ಪಟ್ಟಣದ ಜನ ಮೋಸಗಾರರು ಎಂದು ನಾನು ಯಾರನ್ನೂ ಹಳ್ಳಿಬಿಟ್ಟು ಹೋಗಲು ಬಿಡುವುದಿಲ್ಲ, ಆದರೆ ಒಮ್ಮೆ ನಾನೇ ಸಿಟಿಗೆ ಬರುವಂಥ ಸಂದರ್ಭ ಬರುತ್ತದೆ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.
ಇನ್ನು, ಈ ಚಿತ್ರದ ಹಾಡೊಂದಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯಕ್ ಅವರು ದನಿಯಾಗಿದ್ದಾರೆ. ಎಕ್ಸ್‌ಕ್ಯೂಸ್‌ಮೀ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಆರ್ಪಿ ಪಟ್ನಾಯಕ್ ಉತ್ತಮ ಗಾಯಕನಾಗಿಯೂ ಹೆಸರು ಮಾಡಿದವರು. ಬಹಳ ದಿನಗಳ ನಂತರ ಇದೀಗ ಅವರು ಕನ್ನಡ ಚಿತ್ರವೊಂದಕ್ಕೆ ಹಾಡಿರುವುದು ವಿಶೇಷ. ಈ ಚಿತ್ರದಲ್ಲಿ ತಂದೆಯ ಪ್ರಾಮುಖ್ಯತೆಯನ್ನು ಹೇಳುವಂಥ ಸೂರ್ಯನಂತೆ ಊರಿಗೆ, ಚಂದ್ರನಂತೆ ಸೂರಿಗೆ ಬೆಳಗುತ್ತಿದ್ದ ನಿನ್ನ ಅಪ್ಪಯ್ಯ ಎನ್ನುವ ಮನಮಿಡಿಯುವ ಹಾಡನ್ನು ಹಾಡಿದ್ದಾರೆ.
ಎಂ.ಎಸ್.ತ್ಯಾಗರಾಜ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿನ ಸಾಹಿತ್ಯವನ್ನು ವಿಜಯ್ ಚಿತ್ರದುರ್ಗ ರಚಿಸಿದ್ದಾರೆ. ಚಿತ್ರಕ್ಕೆ ಆರ್.ಪಿ.ರೆಡ್ಡಿ ಅವರ ಛಾಯಾಗ್ರಹಣ, ವಿಜಯ್ ಎಂ.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದ್ದು, ರಾಮಕೃಷ್ಣ, ರಚನಾ ದಶರಥ್, ಅಮರ್, ಹತ್ವಿಕ್ ಕೃಷ್ಣರಾಜ್, ಉಗ್ರಂ ಮಂಜು, ಮೋಹನ್ ಜುನೇಜಾ ಹಾಗೂ ಬೇಬಿ ತನುಷ್ಕಾ ಈ ಚಿತ್ರದ ಪ್ರಮಖ ತಾರಾಬಳಗದಲ್ಲಿದ್ದಾರೆ