ಆಗ್ರಾ: ಕೇವಲ 12 ದಿನಗಳ ಹಿಂದೆ ಜನಿಸಿದ್ದ ಮಗುವನ್ನು ಕೋತಿಯೊಂದು ಅದರ ತಾಯಿಯ ಮಡಿಲಿನಿಂದ ಕಸಿದುಕೊಂಡು ಕಚ್ಚಿ ಕೊಂದಿರುವ ಅತ್ಯಂತ ಹೃದಯ ವಿದ್ರಾವಕ ಘಟನೆ ಆಗ್ರಾ ಹೊರವಲಯದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಗ್ರಾದ ಕಚ್ಚಾರಾ ಪ್ರದೇಶದಲ್ಲಿ ತಾಯಿ ನೇಹಾ ತನ್ನ ಮಗು ಸನ್ನಿ ಗೆ ನಿನ್ನೆ ಸೋಮವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಮೊಲೆಯೂಡಿಸುತ್ತಿದ್ದಾಗ ಅದೆಲ್ಲಿಂದಲೋ ಛಂಗನೆ ಹಾರಿ ಬಂದ ಕೋತಿಯೊಂದು ಮಗುವನ್ನು ಸೆಳೆದುಕೊಂಡು ಓಡಿಹೋಯಿತು. ಮಗುವಿಗೆ ಏನಾಯಿತೆಂದು ತಾಯಿಗೆ ಗೊತ್ತಾಗುವ ಮೊದಲೇ ಕೋತಿಯು ಮಗುವನ್ನು ಎಳೆದಾಡಿಕೊಂಡು ಗೋಡೆ ಹತ್ತಿ ಮನೆಯ ಸೂರನ್ನು ಏರಿ ಅದೃಶ್ಯವಾಯಿತು.
ಆಘಾತಗೊಂಡ ಮನೆಯವರು ಕೋತಿಗೆ ತಿಂಡಿ ತಿನಸುಗಳ ಆಮಿಷ ಒಡ್ಡಿ ಮಗುವನ್ನು ಉಳಿಸಲು ನಡೆಸಿದ ಯತ್ನಗಳು ಫಲ ನೀಡಲಿಲ್ಲ. ಅವರೆಲ್ಲ ಕೋತಿಯ ಬಳಿ ಸಾರಲು ಯತ್ನಿಸುವಷ್ಟರೊಳಗಾಗಿ ಕೋತಿಯು ಮಗವಿನ ಕುತ್ತಿಗೆಯನ್ನು ಕಚ್ಚಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಗುವಿನ ದೇಹವನ್ನು ಮನೆಯವರು ಕೊನೆಗೂ ಪತ್ತೆ ಹಚ್ಚಿ ಸಿಕಂದ್ರಾ ಆಸ್ಪತ್ರೆಗೆ ಒಯ್ದರು. ಆದರೆ ಅಲ್ಲಿನ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಮಗು ಸನ್ನಿ, ಯೋಗೇಶ್ ಎಂಬ ಸ್ಥಳೀಯ ಆಟೋ ಡ್ರೈವರ್‌ಗೆ ಜನಿಸಿರುವ ಮೊದಲ ಮಗು. ಯೋಗೇಶ್ ಗೆ ನೇಹಾ ಜತೆಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು.
ಕೆಲವೇ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕೋತಿಯೊಂದು ಇನ್ನೊಂದು ಮಗುವಿನ ಮೇಲೆ ಮಾರಣಾಂತಿಕ ದಾಳಿ ನಡೆಸಿತ್ತು. ಆ ಮಗ ಇನ್ನೂ ಐಸಿಯು ನಲ್ಲಿ ಇದೆ. ಹಾಗೆಯೇ ಕೆಲ ದಿನಗಳ ಹಿಂದೆ ಮೋಟಾರ್ ಬೈಕ್ ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕೋತಿಗಳು ದಾಳಿ ನಡೆಸಿದ ಪರಿಣಾಮವಾಗಿ ಅವರು ಆಯ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಮೃತಪಟ್ಟಿದ್ದರು.
ಆಗ್ರಾದಲ್ಲಿ ಸುಮಾರು 50,000 ಕೋತಿಗಳಿದ್ದು ಇವುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚತ್ತಲೇ ಇದೆ. ಇಲ್ಲಿನ ಜನರು ಕೋತಿಗಳ ದಾಳಿಗೆ ನಿರಂತರವಾಗಿ ಗುರಿಯಾಗುತ್ತಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಇಲ್ಲವಾಗಿದೆ.