Advertisement
ಈ ಮಾತಿಗೆ ಪ್ರತಿವಾದ ಹೂಡಬಹುದು. ನಮ್ಮನ್ನು ನಾವು ಧನಿಕರನ್ನಾಗಿ ನೋಡಬಯಸುವೆವು; ಹಾಗೆಯೇ ಆಗುವುದು ಸಾಧ್ಯವೇ ಎಂದು. ಆದರೆ, ವಿಷಯ ಅದಲ್ಲ. ಯಾವುದರದ್ದೇ ಬಯಕೆ ಎಂದರೂ ನಮ್ಮಲ್ಲಿರುವುದು ಆ ಕುರಿತಾದ ಅತೃಪ್ತಿ. ಈ ಅತೃಪ್ತಿಯ ಮೂಲಕವೇ ಲೋಕವನ್ನು ನೋಡುವೆವು. ನಮಗೆ ಅತೃಪ್ತಿಯೇ ಗೋಚರಿಸುವುದು. ನಾವು ಸಜ್ಜುಗೊಂಡ ರೀತಿ ಹೇಗೆ ನಮಗೆ ಒದಗಿಬರುವ ನೋಟ ಅಥವಾ ಅನುಭವ- ಹಾಗೆ. ಲೋಕವನ್ನು ನೋಡಿ ಅದರಂತಾಗಬೇಕೆಂಬ ಹಂಬಲ ಹುಟ್ಟಿ ಅದನ್ನು ಅನುಕರಿಸತೊಡಗಿದೆವು- ಇದು ನಮ್ಮ ಬಾಳಿನ ಮೂಲ ತಥ್ಯ. ಈ ತಥ್ಯದ ಇನ್ನೊಂದು ಮುಖವಿದು- ನಾವು ಹೇಗೆ ನೋಡುತ್ತೇವೆಯೋ ಹಾಗೆ ನಮಗೆ ಗೋಚರಿಸುತ್ತದೆ ಎಂಬುದು. ಈ ಒಳ ಅರಿವನ್ನು ಮೊದಲಾಗಿ ನಮ್ಮಲ್ಲಿ ಉಂಟುಮಾಡುವುದೇ ಎಲ್ಲ ತಾತ್ವಿಕ ವಾಗ್ಮಯಗಳ ಉದ್ದೇಶವಾಗಿರುವುದು. ಈ ಅರಿವು ಉಂಟಾಗುವಾಗ ದೊಡ್ಡದೊಂದು ಆಶ್ಚರ್ಯದ ಜೊತೆಗೆ ಒಂದು ಜಿಜ್ಞಾಸೆಯೂ ಹುಟ್ಟಿಕೊಳ್ಳುವುದು. ಅದೇನೆಂದರೆ, ನಾವು ಹೇಗೆ ನೋಡುತ್ತೇವೋ ಹಾಗೆ ಲೋಕ ನಮ್ಮೆದುರು ಕಾಣಿಸಿಕೊಳ್ಳುತ್ತದೆ ಎಂದಾದರೆ ನಿಜವೆಂದು ನೆಚ್ಚುವುದು ಯಾವುದನ್ನು? ನಾವು ನೋಡಿದ್ದನ್ನು ನಿಜ ಎನ್ನುವುದೋ? ನಾವು ನೋಡಲಾಗದೇ ಇದ್ದುದನ್ನು ನಿಜ ಎನ್ನುವುದೋ? ಹೀಗೆ ನೋಡಬಯಸಿದ್ದರಿಂದ ಹೀಗೆ ಕಂಡಿತಾಗಿ ಹೀಗಲ್ಲದೆ ಬೇರೆ ರೀತಿ ನೋಡಬಯಸಿದ್ದರೆ ಹಾಗೆಯೇ ಕಾಣಿಸುತ್ತಿತ್ತಲ್ಲವೆ? ಈ ಸಾಧ್ಯತೆಯನ್ನು ಒಪ್ಪಲೇಬೇಕಾಯಿತು. ಅಂದಾಗ ನಮ್ಮ ಬದುಕು ಅನೇಕ ಸಾಧ್ಯತೆಗಳಿಗೆ ತೆರೆದುಕೊಂಡ ಒಂದು ವ್ಯವಹಾರವಾಯಿತು. ನಾವು ಬದುಕಿನಲ್ಲಿ ಏನೂ ಆಗಬಹುದಿತ್ತು, ಈಗ ಹೀಗಾಗಿದ್ದೇವೆ ಎಂದು ಎಲ್ಲರಿಗೂ ಒಂದಲ್ಲ ಒಂದು ಕ್ಷಣ ತೀವ್ರವಾಗಿ ಅನ್ನಿಸುವುದು ಈ ಸಾಧ್ಯತೆಯ ಕಾರಣದಿಂದಲೇ. ಹೀಗಿರುವಲ್ಲಿ ನೆಚ್ಚುವುದು ಯಾವುದನ್ನು? ಯಾವುದು ನಿಜ?- ಎಂಬ ಜಿಜ್ಞಾಸೆ. ನಮ್ಮದೇ ಮಿತಿಯಿಂದಾಗಿ ನಮಗೆ ದಕ್ಕಿದಷ್ಟು ಮಾತ್ರವನ್ನೇ ಬದುಕಿನ ಸತ್ಯವೆನ್ನೋಣವೆ? ಇದು ನಮ್ಮ ಮಿತಿ ಎಂದು ಅರಿವಿಗೆ ಬಂದಮೇಲೆ ಇದನ್ನು ಮಟ್ಟಿಗೆ ಸತ್ಯವೆನ್ನೋದು ಹೇಗೆ? ನಮ್ಮ ಮಿತಿಯ ಆಚೆಗೆ ಇರುವ ಅಗಾಧ ಸಾಧ್ಯತೆಯ ಸತ್ಯವನ್ನು ನಿರಾಕರಿಸುವುದಾದರೂ ಹೇಗೆ?
Related Articles
Advertisement
ಈಚೆಗೆ ಭೂ-ವಿಜ್ಞಾನ ಕ್ಷೇತ್ರದಲ್ಲಿ ಪರಿಣತರಾದ ಮಿತ್ರರೊಬ್ಬರು- ಅತ್ಯಂತ ಕಠಿಣವಾದ ಶಿಲಾಖಂಡಗಳನ್ನು- ಭೂಮಿಯಲ್ಲಿ ಅವು ಎಲ್ಲೆಲ್ಲಿ ಇವೆ ಎಂದು ಹುಡುಕುತ್ತಿದ್ದೇವೆ ಎಂದರು. ಮನುಷ್ಯನೇ ಇದ್ದಾನಲ್ಲ ಎಂಬ ಮಾತಿಗೆ ತುಸು ನಕ್ಕು- “ಈ ಶಿಲಾಖಂಡಗಳೇಕೆ ಗೊತ್ತೋ? ಅಣುಸ್ಥಾವರಗಳಲ್ಲಿ ಅಣುಶಕ್ತಿಯನ್ನು ಉತ್ಪಾದಿಸಿದ ಮೇಲೆ ಉಳಿಯುವ ಜೀವಸಂಕುಲಕ್ಕೆ ಅತ್ಯಂತ ಮಾರಕವಾದ ಬೆಂಕಿಯಂಥ ಅಣುತ್ಯಾಜ್ಯವನ್ನು , ಈ ಶಿಲಾಖಂಡಗಳನ್ನು ಕೊರೆದು ಅದರೊಳಗೆ ತುಂಬಿಸಿ ಭದ್ರವಾಗಿ ಮುಚ್ಚಿ ಭೂಗರ್ಭದಲ್ಲಿ ಹೂಳಬೇಕಾಗಿದೆ- ಅದಕ್ಕಾಗಿ ಎಂದರು! “ಶಿಲೆಯೊಳಗಣ ಪಾವಕನಂತೆ’ ಎಂಬ ಅಲ್ಲಮನ ನುಡಿಗಟ್ಟು ನೆನಪಾಯಿತು! “ಪಾವಕ’ ಎಂಬ ನುಡಿ ಮತ್ತೆ ಮತ್ತೆ ಕೆಣಕುತ್ತಿತ್ತು. ಅದಿರಲಿ. ಬಹಿರ್ಮುಖತೆಯ ಅವಸ್ಥೆ ಹೀಗಿದೆ; ಅಂತರ್ಮುಖತೆಯ ಅವಸ್ಥೆ ಹಾಗಿದೆ- ಅಷ್ಟೆ !
ಅರಿವೆನ್ನುವುದು ಅಗ್ನಿಯಂತೆ ಎಂಬ ಕಾಣ್ಕೆ ಒಮ್ಮೆ ಹೊಳೆದ ಮೇಲೆ- “ಅಗ್ನಿ’ಗೆ ಅರಿವಿಗೆ ಸಂಬಂಧಿಸಿದ ಯಾವೆಲ್ಲ ರೂಪಗಳು ಒದಗಬಹುದು ನೋಡಿ. ಅಗ್ನಿ ಎಂದರೆ “ವಾಕ್’ ಎನ್ನುವುದು ವೈದಿಕ ಕಾಣ್ಕೆಯೇ ಆಗಿದೆ. ಅರಿವಿಗೂ-ಭಾಷೆಗೂ ನಿಕಟಸಂಬಂಧವಲ್ಲವೆ? ವೈದಿಕವೆಂದೇನು? ಎಲ್ಲ ಅನುಭಾವಿಗಳ ಕಾಣ್ಕೆಯೂ ಹಾಗೆಯೇ ಇದೆ. ಮಾತೆಂಬುದು ಜ್ಯೋತಿರ್ಲಿಂಗ- ಎಂದರೇನು? ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು- ಎಂದರೇನು? ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು- ಎಂದರೇನು? ಈ ಎಲ್ಲವೂ ನುಡಿಗೂ-ಹೊಳೆಯುವ ಬೆಳಕಿಗೂ ಇರುವ ಸಂಬಂಧವನ್ನು ಹೇಳುತ್ತವೆ. ಅಗ್ನಿಯನ್ನು “ವಾಕ್’ ಎನ್ನುವಾಗಲೂ- ಅಗ್ನಿಯೂ ಮಾತೂ ಎರಡೂ ಬೆಳಕಾದುದರಿಂದಲೇ ಈ ಸಮೀಕರಣ.
ಮಾತು ಎಲ್ಲವನ್ನೂ ಬೆಸೆಯುತ್ತದೆ. ಸ್ವರ್ಗ-ಮರ್ತ್ಯಗಳನ್ನೂ ಬೆಸೆಯುತ್ತದೆ. ಬೆಸೆಯುವುದು ಪ್ರೀತಿಯ ಗುಣ ಎಂದು ಬೇರೆ ಹೇಳಬೇಕಿಲ್ಲ. ಪ್ರೀತಿಯ ಗುಣ ಎಂದಾಗ “ಬೆಂಕಿ’ಯ ನೆನಪಾದವರಿದ್ದಾರೆಯೆ? ಇಲ್ಲಿದೆ ನೋಡಿ ಒಂದು ಉಲ್ಲೇಖ: Someday, after we have mastered the winds, the waves, the tide and gravity, we shall harness for God the energies of love. Then for the second time in the history of the world, man will have discovered fire. ಎಂದೋ ಒಂದು ದಿನ ಈ ಬೀಸುವ ಗಾಳಿ, ಈ ಅಲೆಗಳ ಉಬ್ಬರದ ವೇಗ, ಎಲ್ಲವನ್ನೂ ತನ್ನ ಕೇಂದ್ರದತ್ತ ಸೆಳೆವ ಈ ನೆಲದ ಗುರುಣ್ತೀ ಬಲ- ಇವನ್ನೆಲ್ಲ ತಮ್ಮ ವಶಮಾಡಿಕೊಂಡ ಮೇಲೆ, ಮನುಷ್ಯ, “ಪ್ರೀತಿ’ಯ ಧಾರಣಶಕ್ತಿಯನ್ನು , ದೇವರನ್ನೇ ಹೊರಬಲ್ಲ ಧಾರಣಶಕ್ತಿಯನ್ನು ಮನಗಾಣುವನು. ಆ ಸಂಭವವಾದರೋ ಮನುಷ್ಯ ಬೆಂಕಿಯನ್ನು ಇನ್ನೊಮ್ಮೆ ಕಂಡುಹಿಡಿದಂತೆ ಇರುವುದು. ಈ ಮಾತುಗಳನ್ನಾಡಿದವನು ಸ್ವಯಂ ವಿಜ್ಞಾನಿಯೂ ಆಧ್ಯಾತ್ಮಿಕ ಸಾಧಕನೂ ಆದ Pierre Teilhard De Chardin.
ಮನುಷ್ಯ ಬೆಂಕಿಯನ್ನು ಕಂಡುಕೊಂಡದ್ದೆಂದರೆ ತನ್ನ ಅಂತರಂಗ ಬಹಿರಂಗ ಜಗತ್ತನ್ನೇ ಕಂಡುಕೊಂಡಂತೆ! ಬೆಂಕಿಯನ್ನು ಕಂಡುಕೊಂಡ ಕ್ಷಣದಲ್ಲಿಯೇ “ಭಾಷೆ’ಯ ಮೂಲ ಪರಿಕಲ್ಪನೆಯೂ ಅವನ ಮನದಾಳದಲ್ಲಿ ಹೊಳೆದಿರಬೇಕು! ಏಕೆಂದರೆ “ಭಾಷೆ’ ಎಂದರೆ ಬೆಳಕು ಎಂದೇ ಅರ್ಥ.ನಚಿಕೇತ- ಅಗ್ನಿಯ ರಹಸ್ಯವನ್ನು ನೀನು ಬಲ್ಲೆ- ನನಗದನ್ನು ತಿಳಿಸುವ ಕೃಪೆ ಮಾಡು ಎನ್ನುತ್ತಾನೆ; ಯಮನೊಡನೆ. ಅಗ್ನಿ ಎಂದರೆ ಮಾತೂ ಹೌದಾಗಿ- ಸಾವಿನ ದೊರೆ, ಮಾತೇನು; ಮಾತಿಗಿಂತ ಹೆಚ್ಚಾಗಿ ಮೌನದ ರಹಸ್ಯವನ್ನೇ ಬಲ್ಲವನಲ್ಲವೆ ಎನಿಸುತ್ತದೆ. ಲಕ್ಷ್ಮೀಶ ತೋಳ್ಪಾಡಿ