ಪಾಟ್ನಾ: ಕೇಂದ್ರ ಸರ್ಕಾರ ಘೋಷಿಸಿರುವ ನೂತನ ಅಗ್ನಿಪಥ್ ಯೋಜನೆಯ ವಿರುದ್ಧ ದೇಶದ ಹಲವೆಡೆ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಬಿಹಾರದಲ್ಲಿ ವಿದ್ಯಾರ್ಥಿ ಸಂಘಟನೆಗಳು ಶನಿವಾರ (ಜೂನ್ 18) ಬಿಹಾರ ಬಂದ್ ಗೆ ಕರೆ ನೀಡಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೋದಿ ತಾಯಿಗೆ ನೂರು ವರ್ಷದ ಸಂಭ್ರಮ: ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ಮೋದಿ
ವಿದ್ಯಾರ್ಥಿ ಸಂಘಟನೆಗಳು 24ಗಂಟೆಗಳ ಕಾಲ ಕರೆ ನೀಡಿರುವ ಬಂದ್ ಗೆ ಲಾಲುಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ, ಎಚ್ ಎಎಂ ಮತ್ತು ವಿಐಪಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.
ಕೇಂದ್ರ ಸರ್ಕಾರ ಘೋಷಿಸಿರುವ ನೂತನ ಅಗ್ನಿಪಥ್ ಯೋಜನೆಯನ್ನು ಕೂಡಲೇ ಹಿಂಪಡೆಯಬೇಕೆಂದು ಎಡಪಕ್ಷದ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಆಗ್ರಹಿಸಿದೆ.
ಶುಕ್ರವಾರ ಬಿಹಾರದಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಹಲವಾರು ರೈಲುಗಳಿಗೆ, ರೈಲ್ವೆ ನಿಲ್ದಾಣಕ್ಕೆ ಹಾಗೂ ಬಿಜೆಪಿ ಕಚೇರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ತೆಲಂಗಾಣದಲ್ಲಿ ನಿನ್ನೆ ಪ್ರತಿಭಟನಾನಿರತರ ಮೇಲೆ ಭದ್ರತಾ ಪಡೆ ಸಿಬಂದಿ ಗುಂಡು ಹಾರಿಸಿದ ಪರಿಣಾಮ 24 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಸಂತ್ರಸ್ತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಯೋಜನೆ ಬಗ್ಗೆ ಪುನರ್ ಪರಿಶೀಲಿಸಿ: ನಿತೀಶ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ. ನೂತನ ನೇಮಕಾತಿ ಯೋಜನೆಯು ಪ್ರತಿಭಟನಾನಿರತ ಯುವಕರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ನಿತೀಶ್ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ 250 ಪ್ರತಿಭಟನಾಕಾರರ ಬಂಧನ:
ಅಗ್ನಿಪಥ್ ಯೋಜನೆ ವಿರುದ್ಧ ಉತ್ತರಪ್ರದೇಶದಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದ್ದು, ಕನಿಷ್ಠ 250 ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕ್ರೋಶಿತ ಯುವಕರ ಗುಂಪು ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ರೈಲ್ವೆ ನಿಲ್ದಾಣದ ಆವರಣದಲ್ಲಿ ತಿರುಗಾಡುತ್ತಿರುವುದಾಗಿ ವರದಿ ವಿವರಿಸಿದೆ.