ಸಿಕಂದರಾಬಾದ್: ಸೇನೆಗೆ ನಾಲ್ಕು ವರ್ಷಗಳ ಅವಧಿಗೆ ಯುವಜನರನ್ನು ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆ ವಿರುದ್ಧ ಬಿಹಾರ, ಉತ್ತರಪ್ರದೇಶದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ತೆಲಂಗಾಣದ ಸಿಕಂದರಬಾದ್ ನಲ್ಲಿ ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹಿಂಸಾರೂಪ ಪಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ (ಜೂನ್ 17) ನಡೆದಿದೆ.
ಇದನ್ನೂ ಓದಿ:ಎಸಿಬಿ ದಾಳಿ: ಉಡುಪಿಯ ಸಣ್ಣ ನೀರಾವರಿ ಅಧಿಕಾರಿ ಹರೀಶ್ ಮನೆಯಲ್ಲಿ ಚಿನ್ನದ ಖಜಾನೆ
ಅಗ್ನಿಪಥ್ ಯೋಜನೆ ವಿರುದ್ಧ ಬಿಹಾರ, ಉತ್ತರಪ್ರದೇಶ, ಹರ್ಯಾಣದಲ್ಲಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮಬಂಗಾಳ, ಮಧ್ಯಪ್ರದೇಶದಲ್ಲಿಯೂ ಪ್ರತಿಭಟನೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ತೆಲಂಗಾಣ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ರೈಲ್ವೆ ಹಳಿಯ ಮೇಲೆ ಪ್ರತಿಭಟನೆ ನಡೆಸಿದ್ದ ಪ್ರತಿಭಟನಾಕಾರರು ಸುಮಾರು 3ಗಂಟೆಗಳ ಕಾಲ ಎಲ್ಲಾ ರೈಲು ಸಂಚಾರವನ್ನು ತಡೆದಿರುವುದಾಗಿ ವರದಿ ಹೇಳಿದೆ.
ರೈಲ್ವೆ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಭದ್ರತಾ ಪಡೆಯನ್ನು ನಿಯೋಜಿಸಲಾಗಿದ್ದರು ಕೂಡಾ ಆಕ್ರೋಶಗೊಂಡ ಪ್ರತಿಭಟನಾಕಾರರು ಮೂರು ರೈಲುಗಳಿಗೆ ಬೆಂಕಿ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಕಂದರಾಬಾದ್ ರೈಲ್ವೆ ನಿಲ್ದಾಣಕ್ಕೆ ತೆರಳುವ ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಸುಮಾರು 350ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.