ಕಾರಟಗಿ: ಕಳೆದ ಬಾರಿ ಮುಂಗಾರು ಹಂಗಾಮಿನಲ್ಲಿ ಪ್ರಪ್ರಥಮ ಬಾರಿಗೆ ಕಾಣಿಸಿಕೊಂಡ ಕಣೆ ಹುಳು ಬಯಲುಸೀಮೆಯ ಭತ್ತದ ಬೆಳೆಗೂ ಬಾಧಿಸುತ್ತಿದ್ದು, ಬೇಸಿಗೆ ಹಂಗಾಮಿನ ನಾಟಿ ಹಂತದಲ್ಲಿಯೇ ಕಾಣಿಸಿ ಕೊಳ್ಳುತ್ತಿರುವುದರಿಂದ ಈಗಾಗಲೇ ಭತ್ತ ನಾಟಿ ಮಾಡಿದ ರೈತರು ಆತಂಕದಲ್ಲಿದ್ದರೆ ಇನ್ನು ನಾಟಿ ಮಾಡದ ಕೆಲ ರೈತರು ಕಣೆ ಹುಳು ಕಾಟಕ್ಕೆ ನಾಟಿ ಮಾಡದೇ ಕೈಬಿಡುವ
ನಿರ್ಧಾರಕ್ಕೆ ಬಂದಿದ್ದಾರೆ.
ಬೇಸಿಗೆ ಹಂಗಾಮು ಆರಂಭವಾಗಿ ಕೆಲವೇ ದಿನಗಳು ಕಳೆದಿದ್ದು, ಕಾಲುವೆ ಮೇಲ್ಭಾಗದ ಹಾಗೂ ನದಿ ಪಾತ್ರದ ಮುಸ್ಟೂರು ಸೇರಿದಂತೆ ಹುಳ್ಕಿಹಾಳ, ಚಳ್ಳೂರು, ಹಣವಾಳ ಹಗೇದಾಳ, ತೊಂಡಿಹಾಳ ಭಾಗಗಳ ಬಿತ್ತನೆಯಾದ ಪ್ರದೇಶದ ಶೇ. 20ರಷ್ಟು ಪ್ರದೇಶದಲ್ಲಿ ಈಗಾಗಲೇ ಕಣೆಹುಳು ರೋಗ ವ್ಯಾಪಿಸಿದೆ. ಆ ಭಾಗದಲ್ಲಿ ನಾಟಿ ಮಾಡಿದ ಭತ್ತದ ಪೈರು ಕಣೆಹುಳು ರೋಗಬಾಧೆಗೆ ತುತ್ತಾಗಿ ಬಡ್ಡೆ ಹೊಡೆಯದೇ ಉದ್ದಗೆ ಬೆಳೆದು ಹಳದಿ ಬಣ್ಣಕ್ಕೆ ತಿರುಗಿದೆ.
ಕಳೆದ ಬಾರಿ ರಾಜ್ಯದೆಲ್ಲೆಡೆ ವಿಪರೀತವಾಗಿ ಸುರಿದ ಮಳೆಯ ಕಾರಣಕ್ಕೆ ಕಣೆಹುಳು ರೋಗ ತಗುಲಿ ಇಳುವರಿ ಕಡಿಮೆ ಆಗಿದ್ದಲ್ಲದೇ ಕಣೆಹುಳು ರೋಗಕ್ಕೆ ಔಷಧಿ ಸಿಂಪಡಿಸಿ, ಮಾಮೂಲಿ ಖರ್ಚಿಗಿಂತ ಜಾಸ್ತಿ ಮಾಡಿದ್ದರೂ ಇಳುವರಿ ಕಡಿಮೆಯಾಗಿ ರೈತರಿಗೆ ಸಂಕಷ್ಟಕ್ಕೆ ದೂಡಿದೆ.
ಇದನ್ನೂ ಓದಿ:ಬಿಜೆಪಿ ಬೆಳೆಯಲು ದಳ ಕಾರಣ: ಜನತಾ ದಳ ಇದ್ದಿದ್ದರೆ ಬಿಜೆಪಿ ಇರುತ್ತಿರಲಿಲ್ಲ : ರಾಯರಡ್ಡಿ
ಬೆಲೆ ಕುಸಿತದಿಂದ ಪಾರಾಗಿ ಉತ್ತಮ ಬೆಲೆ ಸಿಗುತ್ತಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ರೈತರಿಗೆ ಈಗ ಕಣೆಹುಳು ಬಾಧೆ ಕಾಡಲಾರಂಭಿಸಿದ್ದು, ಇಲ್ಲಿಯವರೆಗೂ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಭತ್ತ ಬೆಳೆಯುವ ರೈತರಿಗೆ ಕಾಡುತ್ತಿದ್ದ ಹುಳ ಇದೀಗ ಬಯಲು ಸೀಮೆಯ ರೈತರ ನಿದ್ದೆಗೆಡಿಸಿದೆ. ಕಣೆಹುಳು ಬಾಧೆ ಹತೋಟಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ದೇವೇಂದ್ರಪ್ಪ ಸಲಹೆ ನೀಡಿದ್ದಾರೆ. ಪಿಪ್ರೋನಿಲ್ 0.3ಜಿ ಅಥವಾ ಕಾಬೋಪಿರಾನ್ 3ಜಿ ಒಂದು ಎಕರೆಗೆ ಒಂದು ಎಕರೆಗೆ ಹತ್ತು ಕೆಜಿ ಗುಳಿಗೆಯನ್ನು ಮೊದಲ ಅಥವಾ ಎರಡನೇ ರಸಗೊಬ್ಬರ ಡೋಸ್‌ನಲ್ಲಿ ಮಿಶ್ರಣ ಮಾಡಿ ಚೆಲ್ಲಬೇಕು. ಇನ್ನೂ ನಾಟಿ ಮಾಡದ
ರೈತರು ಸಸಿ ಕಿತ್ತ ನಂತರ ಔಷೋಧೋಪಾಚಾರ ಮಾಡಿ ನಾಟಿ ಮಾಡಬೇಕು. ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ಹರಡುವ ರೋಗ ಇದಾಗಿದ್ದು, ರೈತರು ಸಾಧ್ಯವಾದರೆ ಒಂದು ಬೆಳೆ ರಜೆ (ಕ್ರಾಪ್ ಹಾಲಿಡೇ) ಮಾಡಬೇಕು. ಇಲ್ಲವೇ ಭತ್ತದ ಬದಲು
ಪರ್ಯಾಯ ಬೆಳೆ ಬೆಳೆಯುವ ಮೂಲಕ ರೋಗ ನಿರ್ಮೂಲನೆ ಮಾಡಲು ಸಾಧ್ಯ ಎಂದು ರೈತರಿಗೆ ಔಷಧೋಪಚಾರಗಳ ಬಗ್ಗೆಯೂ ಮಾಹಿತಿ ನೀಡಿದರು.