Advertisement

ದನದ ಸಂತೆಗೂ ತಟ್ಟಿದ ಬರದ ಬಿಸಿ

10:10 AM Feb 06, 2019 | |

ಗಜೇಂದ್ರಗಡ: ತಾಲೂಕಿನಲ್ಲಿ ಭೀಕರ ಬರಗಾಲದ ಬಿಸಿ ಜಾರುವಾರುಗಳ ಸಂತೆಗೂ ತಟ್ಟಿದೆ. ದನ ಕರುಗಳನ್ನು ಖರೀದಿಸುವವರಿಲ್ಲದೇ ಬಿಕೋ ಎನ್ನುತ್ತಿವೆ. ಮಾರಲು ಸಂತೆಗೆ ಬರುವ ರೈತರು ದನಗಳನ್ನು ಹಿಡಿದು ಮರಳಿ ಮನೆಗೆ ವಾಪಸ್ಸಾಗುವುದು ಎಲ್ಲೆಡೆ ಸಾಮಾನ್ಯವಾಗಿದೆ.

Advertisement

ಗಜೇಂದ್ರಗಡದ ಜಾನುವಾರುಗಳ ಸಂತೆ ದಿನವಾದ ಮಂಗಳವಾರ ಪಟ್ಟಣ ಸೇರಿದಂತೆ ಸುತ್ತಲಿನ ನೂರಾರು ಗ್ರಾಮಗಳ ರೈತರು ಜಾನುವಾರುಗಳನ್ನು ಕೊಂಡುಕೊಳ್ಳಲು ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಈ ವಾರ ದನಗಳನ್ನು ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಇದಕ್ಕೆ ಕಾರಣ ಭೀಕರ ಬರದ ಛಾಯೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ರೈತರು ಬೇಸಾಯ ಮಾಡದೇ ಸಂಕಷ್ಟದ ದಿನಗಳನ್ನು ಎದರಿಸುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಬರ ಆವರಿಸಿದೆ. ಒಂದೆಡೆ ಕುಡಿಯುವ ನೀರಿನ ಕೊರತೆ, ಇನ್ನೊಂದೆಡೆ ಮೇವಿನ ಅಭಾವದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅನ್ನದಾತನ ಸಂಗಾತಿಗಳಾದ ಎತ್ತು, ಎಮ್ಮೆಗಳಿಗೆ ಸಾಮಾನ್ಯವಾಗಿ ಹೊಲ, ಗದ್ದೆಗಳಲ್ಲಿ ಬೆಳೆಯುವ ಹುಲ್ಲನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಈ ಬಾರಿ ವರುಣನ ಮುನಿಸಿನಿಂದಾಗಿ ಹಸಿರು ಇಲ್ಲದಂತಾಗಿ ಜಾನುವಾರುಗಳಿಗೆ ಆಹಾರದ ಸಮಸ್ಯೆ ಬಿಗಡಾಯಿಸಿದೆ.

ಜಾನುವಾರುಗಳಿಗೆ ಸಜ್ಜೆ, ಮೆಕ್ಕೆಜೋಳ, ಭತ್ತದ ಹುಲ್ಲು, ಶೇಂಗಾ ಹೊಟ್ಟು, ಕಡಲೆ ಹೊಟ್ಟು ಹೀಗೆ ಇತರೆ ಧಾನ್ಯಗಳ ಹೊಟ್ಟು ಆಹಾರದ ವಸ್ತುಗಳಾಗಿದ್ದರೂ ಜೋಳದ ಮೇವು ಆಹಾರದ ಮುಖ್ಯ ವಸ್ತುವಾಗಿದೆ. ಆದರೆ ರೈತರು ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಳೆಗಳನ್ನು ಕೈ ಬಿಟ್ಟು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ಮೇವಿನ ಅಭಾವ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಹೈನುರಾಸುಗಳನ್ನು ಹೊರತುಪಡಿಸಿ ಉಳಿದ ಜಾನುವಾರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾರೆ.

ಪಟ್ಟಣದಲ್ಲಿ ಮಾರುಕಟ್ಟೆಯಲ್ಲಿ ಕಳೆದ ಎರಡ್ಮೂರು ವರ್ಷಗಳ ಹಿಂದೆ ಜಾನುವಾರುಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಲ್ಲದೇ ಗಜೇಂದ್ರಗಡದ ಜಾನುವಾರುಗಳ ಸಂತೆ ಖರೀದಿಸುವವರಿಂದ ಗಿಜುಗುಡುತ್ತಿತ್ತು. ಆದರೀಗ ಕೊಂಡುಕೊಳ್ಳುವವರು ಇಲ್ಲದಂತಾಗಿದೆ. 60ರಿಂದ 70 ಸಾವಿರ ರೂ. ಬೆಲೆ ಬಾಳುವ ಜೋಡೆತ್ತುಗಳನ್ನು 20ರಿಂದ 25 ಸಾವಿರಕ್ಕೆ ಕೊಟ್ಟರೂ ಖರೀದಿಸುವವರು ಇಲ್ಲದಂತಾಗಿದೆ.

Advertisement

ಮೇವು ಬ್ಯಾಂಕ್‌ ಸ್ಥಾಪನೆಗೆ ಆಗ್ರಹ
ತಾಲೂಕಿನಲ್ಲಿ ಬರ ಆವರಿಸಿದ್ದು, ರೈತರು ತೀವ್ರ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಜಾನುವಾರುಗಳಿಗೆ ಹೊಟ್ಟು, ಮೇವು ಇಲ್ಲದೆ ಪರದಾಡುವಂತಾಗಿದೆ. ಇಷ್ಟೆಲ್ಲ ಸಮಸ್ಯೆಯಿಂದ ಬಳಲುತ್ತಿರುವ ರೈತ ಸಮೂಹದ ನೆರವಿಗೆ ಸರ್ಕಾರ ಧಾವಿಸಿ ತಾಲೂಕಿನಲ್ಲಿ ಆದ್ಯತೆಕ್ಕಿಂತ ಹೆಚ್ಚು ಸುಸಜ್ಜಿತ ಮೇವು ಬ್ಯಾಂಕ್‌ ಸ್ಥಾಪನೆಗೆ ಮುಂದಾಗಬೇಕೆನ್ನುವುದು ಅನ್ನದಾತರ ಆಗ್ರಹವಾಗಿದೆ.

ಮಳೆಯ ಅವಕೃಪೆಯಿಂದಾಗಿ ಬಿತ್ತಿದ ಬೆಳೆ ಬಾರದೇ ಸಾಲದ ಸುಳಿಗೆ ಸಿಲುಕಿ ಊರು ಬಿಡೋ ಪರಿಸ್ಥಿತಿ ಬಂದೈತ್ರಿ. ಇದರ ಮಧ್ಯೆ ದನಕರುಗಳಿಗೆ ಹೊಟ್ಟು ಮೇವು ಇಲ್ಲದಂಗಾಗಿ ಬಾಳ ಕಷ್ಟಾಗೈತ್ರಿ. ಹೀಗಾಗಿ ಕೊಟ್ಟಷ್ಟ ಕೊಡ್ಲಿ ಅಂತ ಸಂತ್ಯಾಗ ದನಕರುಗಳನ್ನು ಮಾರಾಕ ಬಂದರೂ ಕೊಂಡಕೊಳ್ಳೋರಿಲ್ರಿ.
•ಹನಮಪ್ಪ ಕೊಡಕೇರಿ, ರೈತ

ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಮೇವು ಬ್ಯಾಂಕ್‌ ತೆರೆಯಲು ಪಿಡಿಒ ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಥಳ ಗುರುತಿಸಲು ಸೂಚಿಸಲಾಗಿದೆ. ಹೋಬಳಿಗೆ ಒಂದರಂತೆ ಬ್ಯಾಂಕ್‌ ತೆರೆಯಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ಯತೆ ಮೇರೆಗೆ ಇನ್ನೆರಡು ದಿನಗಳಲ್ಲಿ ಮೇವು ಬ್ಯಾಂಕ್‌ ಆರಂಭಕ್ಕೆ ಕ್ರಮ ಜರುಗಿಸಲಾಗುವುದು. 
•ಗುರುಸಿದ್ದಯ್ಯ ಹಿರೇಮಠ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next