Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಏಜೆಂಟರ ಹಾವಳಿ

03:23 PM Mar 20, 2018 | |

ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್‌ ಕಚೇರಿಯಲ್ಲಿ ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಎಷ್ಟೇ ದಿನ ಸಾಲಾಗಿ ಸರದಿ ನಿಂತರೂ ಸರದಿ ಮಾತ್ರ ಬರದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅದು ತಹಶೀಲ್ದಾರ್‌ ಕಚೇರಿಯೋ ಅಥವಾ ದನದ ಕೊಟ್ಟಿಗೆಯೋ ತಿಳಿಯದಂತಾಗಿದೆ. ಸಿಬ್ಬಂದಿಗಳು ಮಾತ್ರ ಇರಬೇಕಾದ ಸ್ಥಳಗಳಲ್ಲಿ ಸಿಬ್ಬಂದಿಗಳಿಗಿಂತಲೂ ಹೆಚ್ಚಾಗಿ ಏಜೆಂಟರೇ ತುಂಬಿಕೊಂಡಿದ್ದಾರೆ. ಕಚೇರಿಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರ ಪ್ರಮಾಣಪತ್ರಗಳಿಗೆ ಅರ್ಜಿ ಹಾಕಲು ಸರದಿ ನಿಂತರೆ ಏಜೆಂಟರು ನೇರವಾಗಿ ಅಧಿಕಾರಿಗಳ ಬಳಿ ಹೋಗಿ ಅಧಿಕಾರಿಗಳನ್ನು ಹೆದರಿಸಿಯಾದರೂ ಸರಿ ತಮ್ಮ ಪ್ರಮಾಣ ಪತ್ರಗಳನ್ನು ಬೇಗನೆ ಪಡೆದುಕೊಳ್ಳುತ್ತಿದ್ದಾರೆ.

ಸರದಿ ನಿಂತ ಸಾರ್ವಜನಿಕರು ಅಧಿಕಾರಿಗಳಿಗೆ ವಿಷಯ ತಿಳಿಸಿದರೆ ಏಜೆಂಟರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿ‌ದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸಾರ್ವಜನಿಕರು ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿ 21 ದಿನ ಕಾಯಬೇಕು. ಆದರೆ
ಏಜೆಂಟರಿಗೆ 500 ರೂ. ನೀಡಿದರೆ ಎರಡೇ ದಿನದಲ್ಲಿಯೇ ಪ್ರಮಾಣ ಪತ್ರ ನೀಡುತ್ತಾರೆ. ಕೆಲವೊಮ್ಮೆ ಒಂದು ದಿನದಲ್ಲಿಯೂ ಪ್ರಮಾಣ ಪತ್ರ ಪಡೆದ ಉದಾಹರಣೆಗಳಿವೆ.

ಅಲ್ಲಿ ಸಿಬ್ಬಂದಿಗಳಿಗೆ ವಿಚಾರಿಸಲಾಗಿ ಕೆಲವರು ನೇರವಾಗಿಯೇ ಒಳಗೆ ಬರುತ್ತಾರೆ. ಹೊರಗೆ ಹೋಗಿ ಎಂದರೆ ನಮಗೆ ಹೆದರಿಕೆ ಹಾಕುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ವಿನಂತಿಸಿದರೂ ಕೇಳುವುದಿಲ್ಲ. ಸಾರ್ವಜನಿಕರ ಕಾರ್ಯ ಮಾಡಲು ಬಿಡುವುದಿಲ್ಲ. ಅವರ ಅರ್ಜಿ ಮುಗಿದ ಮೇಲೆಯೇ ಸಾರ್ವಜನಿಕರ ಅರ್ಜಿ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
 
ಅರ್ಜಿಗಳನ್ನು ಪರಿಶೀಲಿಸದೆ ಸರ್ಕಾರಿ ನೌಕರರ ಆದಾಯ ಮತ್ತು ಶ್ರೀಮಂತರ ಕೃಷಿ ಜಮೀನಿನ ಆದಾಯವೂ ಕೇವಲ 11 ಸಾವಿರ ಎಂದು ನಮೂದಿಸಿ ಆದಾಯ ಪ್ರಮಾಣ ಪತ್ರ ನೀಡಿದ ಉದಾಹರಣೆಗಳಿವೆ. ಇಂತಹ ಪ್ರಮಾಣ ಪತ್ರ ನೀಡಿದ ಸಿಬ್ಬಂದಿಗಳ ಮೇಲೆ ಸೂಕ್ತ ಇಲಾಖೆ ಕ್ರಮ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದರಿಂದ ನಿಜವಾದ ಬಡವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇವೆಲ್ಲ ಇಲಾಖಾ ಅಧಿಕಾರಿಗಳ ನೇರದಲ್ಲೇ ನಡೆದರೂ ಅಧಿಕಾರಿಗಳು ಕಣ್ಮುಚ್ಚಿ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. 

ಚುನಾವಣಾ ತರಬೇತಿಗಾಗಿ ನಾನು ಮಂಡ್ಯಕ್ಕೆ ತೆರಳಿದ್ದೇನೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ನನ್ನ ಗಮನಕ್ಕಿಲ್ಲ. ಶನಿವಾರ ನಾನು ಮರಳಿ ಕರ್ತವ್ಯಕ್ಕೆ ಹಾಜರಾಗಿ ಅಲ್ಲಿ ಏನಾಗಿದೆ ಎಂಬುವುದರ ಬಗ್ಗೆ ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ಏಜೆಂಟರ ಹಾವಳಿ ಹೆಚ್ಚಾಗಿದ್ದರೆ ಪೊಲೀಸರಿಗೂ ದೂರು ನೀಡಿ ಕ್ರಮ ಜರುಗಿಸುತ್ತೇನೆ.
 ಸಂತೋಷ ಮ್ಯಾಗೇರಿ, ತಹಶೀಲ್ದಾರ್‌

Advertisement

ಕಳೆದ ಮೂರು ದಿನಗಳಿಂದ ನಾನು ಸರದಿ ನಿಂತಿದ್ದೇನೆ. ಆದರೆ ನನ್ನ ಸರದಿಯೇ ಬಂದಿಲ್ಲ. ಏಜೆಂಟರು ನೇರವಾಗಿ ಒಳಗೆ ನುಗ್ಗಿ ತಮ್ಮ ಕಾರ್ಯ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬಡ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಇಲ್ಲಿನ ಏಜೆಂಟರ ಹಾವಳಿ ತಪ್ಪಿಸಿ ಬಡವರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
 ವಿಜಯಕುಮಾರ ಪಾಯಗೊಂಡ, ಸ್ಥಳೀಯ ನಿವಾಸಿ

„ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next