ಬೆಳಗಾವಿ: ನಗರದ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಗಾಗಿ ನೆಲ ಅಗೆಯುವಾಗ ಮಂಗಳವಾರ ಪುರಾತನ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.
ಈ ಶಾಸನ ಸುಮಾರು ನಾಲ್ಕು ಅಡಿ ಉದ್ದ ಇದ್ದು ಶೈವ ಸಂಪ್ರದಾಯದ ಕುರುಹುಗಳು ಈ ಶಿಲಾ ಶಾಸನದಲ್ಲಿ ಕೆತ್ತಲ್ಪಟ್ಟಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಜೆಸಿಬಿ ಮೂಲಕ ಕಾರ್ಮಿಕರು ನೆಲ ಅಗೆಯುತ್ತಿದ್ದಾಗ ಈ ಶಾಸನ ಕಂಡು ಬಂದಿದೆ. ಕೂಡಲೇ ಕಾರ್ಮಿಕರಿಗೆ ಈ ಬಗ್ಗೆ ಸಂಶಯ ಬಂದಾಗ ನಿಧಾನವಾಗಿ ಅಗೆದು ಶಾಸನಕ್ಕೆ ಧಕ್ಕೆಯಾಗದಂತೆ ಹೊರಗೆ ತೆಗೆದಿದ್ದಾರೆ ಬಳಿಕ ಅದನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ.
ಈ ಶಾಸನ ಪುರಾತನ ಕಾಲದ್ದಾಗಿದ್ದು, ಅದರ ಮೇಲೆ ಬಲಭಾಗಕ್ಕೆ ಶಿವಲಿಂಗ ಹಾಗೂ ಎಡ ಭಾಗದಲ್ಲಿ ಬಸವಣ್ಣನ ಚಿತ್ರವಿದೆ. ಇದರ ಮೆಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರನ ಚಿತ್ರವನ್ನು ಕೆತ್ತಲಾಗಿದೆ. ಕೆಳಭಾಗದಲ್ಲಿ ಸುಮಾರು 10 ರಿಂದ 12 ಸಾಲುಗಳಲ್ಲಿ ಹಳಗನ್ನಡದ ಪದಗಳು ಕಂಡು ಬಂದಿವೆ.
ನಗರದ ಮಧ್ಯ ಭಾಗದಲ್ಲಿಯೇ ಇದ್ದ ಸಿಬಿಟಿ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಸುಮಾರು 25 ಅಡಿ ಆಳದಲ್ಲಿ ಈ ಅಪರೂಪದ ಶಿಲಾ ಶಾಸಮ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.