ಮೈಸೂರು: ನಮ್ಮ ಸಂಪತ್ತು ನಮ್ಮ ಮಕ್ಕಳು, ಮಕ್ಕಳಿದ್ದರೆ ಶಾಲೆ, ಮಕ್ಕಳಿದ್ದರೆ ಮನೆ, ಚಿಗುರು ಕವಿಗೋಷ್ಠಿ ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಖ್ಯಾತ ಮಕ್ಕಳ ಸಾಹಿತಿ ಪ.ಗು ಸಿದ್ದಪ್ಪ ಅವರು ತಿಳಿಸಿದರು.
ಅವರು ಮೈಸೂರು ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯಲ್ಲಿನ ಶ್ರೀಮತಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಾಹಿತ್ಯವು ಪರಿಪೂರ್ಣವಾದುದು ಮಕ್ಕಳ ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳಿವೆ. ಸಾಹಿತ್ಯದ ಸಂಸ್ಕಾರವು ಮನೆಯಿಂದಲೇ ಶುರುವಾಗುತ್ತದೆ. ಶಿಶು ಪ್ರಾಸವನ್ನು ಕೇಳಿ ಮಕ್ಕಳು ದೊಡ್ಡವರಾಗುತ್ತಾರೆ. ಮಕ್ಕಳ ಸಾಹಿತ್ಯವನ್ನು ಬರೆಯಲು ವಯಸ್ಸು ಮುಖ್ಯವಲ್ಲ ಅದನ್ನು ಬರೆಯುವಾಗ ಪರಕಾಯ ಪ್ರವೇಶ ಮಾಡಿ ನಾವು ನಮ್ಮ ಬಾಲ್ಯ ನೆನಪಿಸಿಕೊಂಡು ಭಾವನಾತ್ಮಕವಾಗಿ ಮಕ್ಕಳ ಸಾಹಿತ್ಯವನ್ನು ಬರೆಯುತ್ತೇವೆ ಎಂದರು.
ಪ್ರೌಢ ಸಾಹಿತ್ಯಕ್ಕಿಂತ ದೊಡ್ಡದು ಈ ಮಕ್ಕಳ ಸಾಹಿತ್ಯ, ಮಕ್ಕಳಿಗೂ ಸಾಹಿತ್ಯ ಬೇಕು ನಾಳೆ ಮಕ್ಕಳು ಒಳ್ಳೆಯ ಪ್ರಜೆಗಳಾಗಬೇಕೆಂದರೆ ಮಕ್ಕಳ ಸಾಹಿತ್ಯವನ್ನು ಓದಬೇಕು ಎಂದು ಅವರು ತಿಳಿಸಿದರು.
ಮಕ್ಕಳ ಸಾಹಿತ್ಯವನ್ನು ಓದುವುದರಿಂದ ಮನಸ್ಸು ಹಗುರವಾಗುತ್ತದೆ. ಪ್ರೌಢ ಸಾಹಿತ್ಯ ಕೆಲವೊಮ್ಮೆ ಕೋಲಾಹಲವನ್ನು ಎಬ್ಬಿಸುತ್ತದೆ. ಅದಕ್ಕಿಂತ ಮಿಗಿಲಾದದು ಈ ಮಕ್ಕಳ ಸಾಹಿತ್ಯ ಮಕ್ಕಳ ಸಾಹಿತ್ಯದ ವಾಚನವನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಗುರು ಕವಿಗೋಷ್ಠಿಯ ಕಾರ್ಯಾಧ್ಯಕ್ಷರು ಡಾ.ಎಸ್.ವಿಜಯ್ ಕುಮಾರಿ ಕರಿಕಲ್, ಕವಯತ್ರಿ ಡಾ.ಏನ್.ಕೆ ಲೋಲಾಕ್ಷಿ, ಚಿಗುರು ಕವಿಗೋಷ್ಠಿ ಉಪಸಮಿತಿಯ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮತ್ತು ಉಪಸಮಿತಿಯ ಅಧ್ಯಕ್ಷರ ಮಹೇಶ್ ಅಂಬಲಾರೆ ಹಾಗೂ ಉಪಾಧ್ಯಕ್ಷರುಗಳಾದ ದಂಡಿನ ಕೆರೆ ನಾಗರಾಜು, ರವಿಚಂದ್ರನ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Mysore Dasara: ದಸರಾ ವಸ್ತು ಪ್ರದರ್ಶನದಲ್ಲಿ ಪಂಚ ಗ್ಯಾರಂಟಿಗಳ ದರ್ಬಾರ್: ಸಿಎಂ ಮೆಚ್ಚುಗೆ