Advertisement

ವಯಸ್ಸು ಮತ್ತು ಮನಸ್ಸು

03:45 AM Feb 10, 2017 | Team Udayavani |

ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ಸಹೋದ್ಯೋಗಿಯನ್ನು ಸೂಕ್ಷ್ಮವಾಗಿ ಗಮನಿಸಿದೆ.  ವಯಸ್ಸು ಸುಮಾರು 24-25. ಕಾಲೇಜು ಮುಗಿಸಿ ಹೊಸತಾಗಿ ಕೆಲಸಕ್ಕೆ ಸೇರಿದ್ದಾಳೆ. ಒಂದಿಷ್ಟೂ ಸುಕ್ಕಾಗದಂತಹ ಬಟ್ಟೆ, ಸುಂದರವಾಗಿ ಬಣ್ಣ ಹಚ್ಚಿದ ಉಗುರುಗಳು, ನಾಜೂಕಾದ ಕೈಗಳು, ಕಿವಿಗೆ ಹೊಸ ಫ್ಯಾಶನ್ನಿನ ಓಲೆ, ಸ್ವತ್ಛಂದವಾಗಿ ಹಾರಾಡಲು ಬಿಟ್ಟ ಕೂದಲು ನೋಡಿದವರಿಗೆಲ್ಲ ಮತ್ತೂಮ್ಮೆ ನೋಡಬೇಕೆನಿಸುವಂತಿತ್ತು. ಹಾಗೇ ನನ್ನನ್ನು ನಾನು ಒಮ್ಮೆ ಅವಲೋಕಿಸಿಕೊಂಡೆ. ಭಾನುವಾರ ನೆಂಟರು ಬಂದದ್ದರಿಂದ ಉಗುರು ಕತ್ತರಿಸಲು ಕೂಡ ಸಮಯವಿಲ್ಲವಾಗಿ ಅಡ್ಡಾದಿಡ್ಡಿಯಾಗಿ ಬೆಳೆದ ಉಗುರು, ಸುಕ್ಕುಗಟ್ಟಲು ಪ್ರಾರಂಭಿಸಿದ ಕೈಗಳು, ತಲೆಯಲ್ಲಿ ಹರಡಲು ಪ್ರಾರಂಭಿಸಿರುವ ಬೆಳ್ಳಿ ಕೂದಲು, ಕಣ್ಣ ಸುತ್ತ ಕಪ್ಪುವರ್ತುಲ ಎಲ್ಲವೂ ನಿನಗೆ ವಯಸ್ಸಾಗುತ್ತಿದೆ ಎಂದು ಸಾರಿ ಹೇಳುತ್ತಿದ್ದವು.

Advertisement

ಹರೆಯದಿಂದ ಮುಪ್ಪಿನೆಡೆಗೆ ಕಾಲಿಡುತ್ತಿರುವ ಘಟ್ಟ , ಸ್ವೀಕರಿಸಲು ಸಿದ್ಧವಿಲ್ಲದ ಮನಸ್ಸು. ಇದು ಎಲ್ಲಾ 50ರ ಆಸುಪಾಸಿನ ಮಹಿಳೆಯರನ್ನು ಕಾಡುವ ದೊಡ್ಡ ಭೂತ. ತಮಗಿನ್ನೂ ಹೇಳಿಕೊಳ್ಳುವಂಥ ವಯಸ್ಸಾಗಿಲ್ಲ ಎಂದು ತೋರಿಸಿಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ವಯಸ್ಸಿಗನುಗುಣವಾಗಿ ಬದಲಾಗುತ್ತಿರುವ ದೇಹವನ್ನು ಮೊದಲಿನಂತೆಯೇ ಇಟ್ಟುಕೊಳ್ಳಲು ಯೋಗ ತರಗತಿಗಳು, ಜಿಮ್‌ಗಳಿಗೆ ಭೇಟಿ, ಬ್ಯೂಟಿಪಾರ್ಲರ್‌ಗಳಿಗೆ ಅಲೆದಾಟ ಎಲ್ಲವೂ ಪ್ರಾರಂಭವಾಗುತ್ತದೆ. ಇದನ್ನು ನೋಡಿ ಅನೇಕ ಬಾರಿ ಮನೆಯವರಿಂದ ವಯಸ್ಸಿಗನುಗುಣವಾಗಿ ವರ್ತಿಸುವಂತೆ ಉಪದೇಶಗಳು ಸಹ ಪುಕ್ಕಟೆಯಾಗಿ ಸಿಗುತ್ತವೆ.

ಇದೇ ಸಮಯಕ್ಕೆ ಸರಿಯಾಗಿ ಮಹಿಳೆ ಮೆನೋಪಾಸ್‌ ಘಟ್ಟವನ್ನು ಕೂಡ ತಲುಪುವುದರಿಂದ ದೇಹದಲ್ಲಿ ಹಾರ್ಮೋನುಗಳ ಏರುಪೇರಿನಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸತೊಡಗುತ್ತಾಳೆ. ಇಂತಹ ವಿಷಯಗಳನ್ನು ಯಾರೊಡನೆಯೂ ಚರ್ಚಿಸಲು ಇಚ್ಛಿಸದ ಅವಳು ತೊಂದರೆಯನ್ನು ತನ್ನೊಳಗೇ ಮುಚ್ಚಿಟ್ಟುಕೊಳ್ಳಲು ಆರಂಭಿಸುತ್ತಾಳೆ.  ಈ ಹಿಂಜರಿಕೆ ಎಷ್ಟರಮಟ್ಟಿಗೆ ಎಂದರೆ ಡಾಕ್ಟರರ ಬಳಿಯೂ ಅವಳು ಹೋಗಲಿಚ್ಛಿಸುವುದಿಲ್ಲ.

ಕೆಲಸ ಮಾಡಲು ಮನಸ್ಸು ಉತ್ಸಾಹದಿಂದಿದ್ದರೂ, ಅದಕ್ಕೆ ತಕ್ಕಂತೆ ಸಾಥ್‌ ಕೊಡದ ದೇಹ ಕೆಲಸವನ್ನು ನಿಧಾನವಾಗಿಸುತ್ತದೆ. ಇದರಿಂದಾಗಿ ಮತ್ತೂಬ್ಬರೆದುರಿಗೆ ನಾವು ನಿಷ್ಪ್ರಯೋಜಕರೇನೋ ಎಂಬ ಭಾವನೆ. ಇನ್ನು ಉದ್ಯೋಗದಲ್ಲಿರುವ ಮಹಿಳೆಯರಿಗಂತೂ ಆಫೀಸಿನಲ್ಲಿ ಹೊಸತಾಗಿ ಕೆಲಸಕ್ಕೆ ಸೇರಿರುವ ಹುಡುಗಿಯರು ಕಂಪ್ಯೂಟರ್‌ ಉಪಯೋಗಿಸುವ ರೀತಿ, ಮೊಬೈಲ್‌ ಬಳಸುವ ಪರಿಯನ್ನು ನೋಡಿದರೆ ಮನಸ್ಸು ತಮಗೇನೂ ತಿಳಿಯದೆಂದು ನಾಚಿಕೆಯಿಂದ ಮುದುಡುತ್ತದೆ. ಕೀಳರಿಮೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ಸಾಮಾನ್ಯವಾಗಿ 15 ವಯಸ್ಸು ದಾಟಿದ ಮಕ್ಕಳಿಗೆ ತಮ್ಮ ತಾಯಿಗೆ ಏನೂ ತಿಳಿಯುವುದಿಲ್ಲವೆಂಬ ಭ್ರಮೆ. ಗಂಡನಂತೂ ಮೊದಲಿನಿಂದಲೂ ನೀನು ಏನೂ ಸಾಮಾನ್ಯಜ್ಞಾನವಿಲ್ಲದ ಪ್ರಾಣಿ ಎಂಬಂತೆ ನೋಡುತ್ತಿರುವಾಗ ಮಹಿಳೆಗೆ ತನ್ನ ಹಾಗೂ ಕುಟುಂಬದವರ ನಡುವಿನ ಅಂತರ ಹೆಚ್ಚಾಗಿ ತಾನು ಏಕಾಂಗಿಯಾಗುತ್ತಿದ್ದೇನೇನೋ ಎಂಬ ಅನಿಸಿಕೆ ಸಹಜವಾಗಿ ಬರುತ್ತದೆ.  ಈ ವಾತಾವರಣವು ಎಷ್ಟೋ ಮಹಿಳೆಯರ ಮಾನಸಿಕ ಅಸ್ವಾಸ್ಥ್ಯಕ್ಕೂ ಕಾರಣವಾಗಬಹುದು. 
 
ಈ ಘಟ್ಟದಲ್ಲಿ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಮಹಿಳೆಯರ ಕೈಲೇ ಇದೆ. ಬದಲಾಗುತ್ತಿರುವ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಮನಸ್ಸನ್ನು ಸಿದ್ಧ ಮಾಡಿಕೊಳ್ಳಬೇಕು. ತನ್ನ ದೈಹಿಕ, ಮಾನಸಿಕ ಸ್ಥಿತಿಗೆ ತಕ್ಕಂತಹ ಕೆಲಸಗಳನ್ನು ಮಾಡುತ್ತಾ, ತನ್ನ ಅನುಭವಗಳನ್ನು ಚಿಕ್ಕವರಲ್ಲಿ ಹಂಚಿಕೊಳ್ಳುತ್ತ ಆತ್ಮಸ್ಥೆರ್ಯವನ್ನು ಹೆಚ್ಚಿಸಿಕೊಳ್ಳಬೇಕು.  ಯಾವುದೇ ಸಮಯದಲ್ಲಿ ಮನಸ್ಸನ್ನು ಖಾಲಿ ಇಟ್ಟುಕೊಳ್ಳದೆ ಯಾವುದಾದರೂ ಉಪಯುಕ್ತ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ಬರುವ ಅನಪೇಕ್ಷಿತ ಆಲೋಚನೆಗಳಿಂದ ಮುಕ್ತಿ ಸಿಗುತ್ತದೆ.  ತನ್ನದೇ ವಯಸ್ಸಿನವರೊಡನೆ ಅವಳು ಹೆಚ್ಚು ಹೆಚ್ಚು ಬೆರೆಯಲು ಪ್ರಯತ್ನಿಸಬೇಕು. 

ಇದರಿಂದ ಅವಳಿಗೆ ಈ ರೀತಿಯ ಮಾನಸಿಕ ತೊಳಲಾಟ ತನ್ನೊಬ್ಬಳದೇ ಅಲ್ಲ, ತನ್ನ ವಯಸ್ಸಿನ ಇತರರಿಗೂ ಇದೇ ಅನುಭವ, ಭಾವನೆಗಳು ಬರುತ್ತಿವೆ ಎಂದು ತಿಳಿದಾಗ ಮನಸ್ಸಿಗೆ ಸ್ವಲ್ಪವಾದರೂ ಸಮಾಧಾನ ಸಿಗುತ್ತದೆ.  ಅವರೊಡನೆ ಅನುಭವಗಳನ್ನು ಹಂಚಿಕೊಳ್ಳುತ್ತಾ ತನ್ನ ಅಂತರಂಗವನ್ನು ಬಿಚ್ಚಿಟ್ಟಾಗ ಮನಸ್ಸು ನಿರಾಳವಾಗುತ್ತದೆ.  ತನ್ನವರೊಡನೆ ಹೇಳಿಕೊಳ್ಳಲಾರದ ಭಾವನೆಗಳ ವಿನಿಮಯ ಮನಸ್ಸಿಗೆ ಶಾಂತಿಯನ್ನು ಕೊಡುತ್ತದೆ. ಸದಾ ಮನಸ್ಸನ್ನು ಪ್ರಫ‌ುಲ್ಲವಾಗಿರಿಸಿಕೊಳ್ಳುವುದರಿಂದ ಮನಸ್ಸು ಶಾಂತವಾಗಿದ್ದು ಆ ಭಾವನೆಗಳು ಅವಳ ಸುತ್ತಮುತ್ತಲಿನ ವಾತಾವರಣವನ್ನೂ ಬದಲಿಸುತ್ತದೆ.

Advertisement

ಇಂತಹ ಸಮಯದಲ್ಲಿ ಮಹಿಳೆಗೆ ತೊಳಲಾಟದಿಂದ ಹೊರಬರಲು ಮನೆಯವರ ಸಹಕಾರವೂ ಅತ್ಯಗತ್ಯ.  ತಮ್ಮದೇ ಆದ ರೀತಿಯಲ್ಲಿ ಅವಳನ್ನು ಸಂತೋಷವಾಗಿರಿಸಲು ಪ್ರಯತ್ನಿಸುವುದು ಬಹಳ ಮುಖ್ಯ. ಅವಳ ಉಪಸ್ಥಿತಿಯ ಆವಶ್ಯಕತೆ ತಮಗಿದೆ ಎಂದು ತೋರಿಸಿಕೊಳ್ಳುವುದರಿಂದ ಅವಳಿಗೆ ಮಾನಸಿಕ ಭದ್ರತೆ ಸಿಕ್ಕಂತಾಗುತ್ತದೆ.  ಯಾವುದೇ ಕೆಲಸಕ್ಕಾದರೂ ಅವಳ ಸಲಹೆಯನ್ನು ಕೇಳುವುದರಿಂದ, ಅವಳ ಭಾವನೆಗಳಿಗೆ ಬೆಲೆ ಕೊಡುವುದರಿಂದ ಅವಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿರಬೇಕು.  

ಭಾರತದಲ್ಲಿ ಅನಾದಿ ಕಾಲದಿಂದಲೂ ಹೆಣ್ಣಿಗೆ ಪೂಜ್ಯ ಸ್ಥಾನವನ್ನು ಕೊಟ್ಟಿದ್ದಾರೆ. ಹೆಣ್ಣು ಮನೆಯ ಕಣ್ಣು ಎಂಬ ಉಕ್ತಿ ಸರ್ವಕಾಲಕ್ಕೂ ವೇದ್ಯವಾಗಿದೆ.  ಹೆಣ್ಣನ್ನು ಮನೆಯ ಆಧಾರಸ್ತಂಭ ಎಂದು ಕರೆದರೂ ತಪ್ಪಾಗಲಾರದು. ಆದ್ದರಿಂದ ಮನೆಯಲ್ಲಿ, ಸಮಾಜದಲ್ಲಿ  ಪ್ರಮುಖ ಪಾತ್ರ ವಹಿಸುತ್ತಿರುವ ನಾವು ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು ಅತ್ಯವಶ್ಯ. ಎಂತಹ ಸ್ಥಿತಿಯಲ್ಲಿಯೂ ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾದರೆ ಅದಕ್ಕೆ ಕೈಜೋಡಿಸುವುದು ನಮ್ಮವರ ಕೆಲಸ. ಆಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.

– ಇಂದಿರಾ ವಿವೇಕ್‌

Advertisement

Udayavani is now on Telegram. Click here to join our channel and stay updated with the latest news.

Next