ನವದೆಹಲಿ: ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ಈಗಿರುವ 18ರಿಂದ 21ಕ್ಕೇರಿಸುವ ಪ್ರಸ್ತಾಪವನ್ನು ಸಂಸದರ ಸಮಿತಿಯಿಂದ ಮರುಪರಿಶೀಲನೆಗೆ ಒಳಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಿವಾಹದ ವಯೋಮಿತಿಯನ್ನು ಏರಿಸುವ ಕೇಂದ್ರ ಸಂಪುಟದ ನಿರ್ಧಾರಕ್ಕೆ ರಾಜಕೀಯ ಪಕ್ಷಗಳು, ಹೋರಾಟಗಾರರು ಮತ್ತು ಇತರರಿಂದ ವಿರೋಧ ಹಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಒಂದು ಹೆಜ್ಜೆ ಹಿಂದಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಸಂಬಂಧಿಸಿದ ವಿಧೇಯಕವನ್ನು ಸಂಸತ್‌ನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಿಸುವುದಕ್ಕೂ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿಲ್ಲ. ವಿಧೇಯಕದ ನಿಬಂಧನೆಗಳನ್ನು ಸ್ಥಾಯಿ ಸಮಿತಿ ಪರಿಶೀಲಿಸಲಿ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಅಲ್ಲದೇ, ಸಂಸತ್‌ನಲ್ಲಿ ಪ್ರತಿಪಕ್ಷಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದು ಕೂಡ ಸರ್ಕಾರದ ಮುಂದಿನ ನಡೆಯನ್ನು ಅವಲಂಬಿಸಿದೆ.
ಇದನ್ನೂ ಓದಿ:ಮುಂದಿನ ಏಪ್ರಿಲ್‌ನಿಂದ ವಾರಕ್ಕೆ 4 ದಿನ ಮಾತ್ರ ಕೆಲಸ!
ಈಗಾಗಲೇ, ಕಾಂಗ್ರೆಸ್, ಸಿಪಿಎಂ ಹಾಗೂ ಇತರೆ ಕೆಲವು ಪಕ್ಷಗಳು ವಿಧೇಯಕವನ್ನು ವಿರೋಧಿಸಲು ನಿರ್ಧರಿಸಿವೆ. ಸಮಾಜವಾದಿ ಪಕ್ಷ ಮತ್ತು ಎಐಎಂಐಎಂ ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿವೆ. ಅಲ್ಲದೇ, ಅಧಿವೇಶನ ಅವಧಿ ಮುಗಿಯಲು ಇನ್ನು ಕೇವಲ 3 ದಿನಗಳು ಬಾಕಿಯಿರುವ ಕಾರಣ, ವಿಧೇಯಕಕ್ಕೆ ಅಂಗೀಕಾರ ಪಡೆಯುವುದು ಅನುಮಾನ ಎಂದೂ ಹೇಳಲಾಗಿದೆ.