ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗದಿಂದ ನಾಲ್ವರು ಸತ್ಪುತ್ರರನ್ನು ಪಡೆದ ನಂತರ ಯಥಾವಿಧಿಯಾಗಿ ಯೋಗ್ಯರೀತಿಯಿಂದ ರಾಜ್ಯಭಾರ ಮಾಡುತ್ತಿದ್ದನು. ಕೆಲವು ವರ್ಷಗಳು ಕಳೆದ ನಂತರ ಒಮ್ಮೆ ದಶರಥನ ಸಭೆಗೆ ಋಷಿ ವಿಶ್ವಾಮಿತ್ರರು ಆಗಮಿಸಿದರು. ರಾಜನು ಋಷಿಗಳನ್ನು ಬಹಳ ಆದರದಿಂದ ಸ್ವಾಗತಿಸಿ ಅದರಾಥಿತ್ಯದಿಂದ ಅವರನ್ನು ಸಂತುಷ್ಟಗೊಳಿಸಿ ಬಂದ ಕಾರಣವನ್ನು ವಿಚಾರಿಸುತ್ತಾ “ತಮ್ಮ ಕೃಪೆಯಿಂದ ಅನುಗ್ರಹಿತರಾಗಿ, ನಿಮ್ಮ ಅಭೀಷ್ಟಮನೋರಥವನ್ನು ತಿಳಿದು, ನನ್ನ ಅಭ್ಯುದಯಕ್ಕಾಗಿ ಅದನ್ನು ಪೂರ್ಣಗೊಳಿಸಬೇಕೆಂದು ನಾನು ಬಯಸುತ್ತಿರುವೆನು. ಕಾರ್ಯಸಿದ್ಧವಾಗುವುದೋ ಇಲ್ಲವೋ ಇದರ ಕುರಿತು ಮನಸ್ಸಿನಲ್ಲಿ ಸಂಶಯ ಪಡಬೇಡಿರಿ. ತಾವು ಯಾವುದೇ ಅಪ್ಪಣೆ ಮಾಡಿದರೂ ನಾನು ಅದನ್ನು ಪೂರ್ಣವಾಗಿ ಪಾಲಿಸುವೆ” ಎಂದು ವಚನವಿತ್ತನು.
ದಶರಥನ ಉದಾರ ಮಾತನ್ನು ಕೇಳಿದ ಮಹಾತೇಜಸ್ವಿ ವಿಶ್ವಾಮಿತ್ರರು ಪುಳಕಿತರಾಗಿ ಮನಸ್ಸಿನಲ್ಲಿರುವ ಮಾತನ್ನು “ಪುರುಷಶ್ರೇಷ್ಟನೇ! ಸಿದ್ದಿಗಾಗಿ ನಾನು ಒಂದು ನಿಯಮವನ್ನು ಅನುಷ್ಠಾನ ಮಾಡುತ್ತಿದ್ದೇನೆ; ನನ್ನ ಈ ನಿಯಮ ಕಾರ್ಯವು ಬಹುತೇಕ ಪೂರ್ಣವಾಗಿದೆ. ಈಗ ಅದರ ಸಮಾಪ್ತಿಯ ಸಮಯದಲ್ಲಿ ಮಾರೀಚ ಮತ್ತು ಸುಬಾಹು ಎಂಬ ರಾಕ್ಷಸರು ಯಜ್ಞ ವೇದಿಕೆಯಲ್ಲಿ ರಕ್ತ- ಮಾಂಸದ ಮಳೆ ಸುರಿಸಿ ವಿಘ್ನ ಉಂಟುಮಾಡಿದ್ದಾರೆ. ಹಾಗಾಗಿ ಸತ್ಯ ಪರಾಕ್ರಮಿಯಾದ, ಶೂರ – ವೀರನಾದ ನಿನ್ನ ಜೇಷ್ಠಪುತ್ರನನ್ನು ನನಗೆ ಕೊಡು. ಶ್ರೀರಾಮನ ಮುಂದೆ ಆ ರಾಕ್ಷಸರು ಯಾವ ರೀತಿಯಿಂದಲೂ ಬಂದು ನಿಲ್ಲಲಾರರು” ಎಂದು ಹೇಳಿದರು.
ವಿಶ್ವಾಮಿತ್ರರ ಮಾತನ್ನು ಕೇಳಿದ ದಶರಥನು ಎರಡು ಗಳಿಗೆ ಮೂರ್ಛಿತನಾದನು. ಮತ್ತೆ ಎಚ್ಚರಗೊಂಡು “ಇನ್ನು ಹದಿನಾಲ್ಕು ವರ್ಷದ ಬಾಲಕನಾದ ನನ್ನ ರಾಮನು ರಾಕ್ಷಸರೊಡನೆ ಯುದ್ಧಮಾಡಲು ಅಸಮರ್ಥನು. ಅವನ ಬದಲಿಗೆ ನಾನೆ ಬರುತ್ತೇನೆ” ಎಂದು ಪರಿಪರಿಯಾಗಿ ವಿಜ್ಞಾಪಿಸಿಕೊಂಡರು. ವಿಶ್ವಾಮಿತ್ರರಿಗೆ ಕ್ರೋಧವುಂಟಾಗಿ ರೋಷದ ಮಾತುಗಳನ್ನಾಡಿದರು. ವಸಿಷ್ಠರು ದಶರಥನನ್ನು ಸಂತೈಸಿ ರಾಮನನ್ನು ವಿಶ್ವಾಮಿತ್ರರೊಂದಿಗೆ ಕಳುಹಿಸಲು ಆದೇಶಿಸಿದರು. ಮನಸ್ಸಿಲ್ಲದಿದ್ದರೂ ವಸಿಷ್ಠರ ಮಾತಿಗೆ ಗೌರವ ಕೊಟ್ಟು , ವಿಶ್ವಾಮಿತ್ರರ ಮೇಲೆ ನಂಬಿಕೆಯಿಂದ ರಾಮನನ್ನು ಕಳುಹಿಸಲು ಒಪ್ಪಿದನು. ರಾಮನೊಂದಿಗೆ ಲಕ್ಷ್ಮಣನೂ ವಿಶ್ವಾಮಿತ್ರ ಜೊತೆಯಲ್ಲಿ ಹೊರಟನು.
ಅಯೋಧ್ಯೆಯಿಂದ ಸ್ವಲ್ಪ ದೂರ ಬಂದು ಸರಯೂ ನದಿಯ ದಕ್ಷಿಣ ತೀರದಲ್ಲಿ ಶ್ರೀರಾಮನಿಗೆ ಬಲಾ ಮತ್ತು ಅತಿಬಲಾ ಎಂಬ ಮಂತ್ರಗಳನ್ನು ಉಪದೇಶಿಸಿದರು. ರಾಮ ! “ಈ ಮಂತ್ರದ ಪ್ರಭಾವದಿಂದ ನಿನಗೆ ಎಂದೂ ಶ್ರಮದ ಅನುಭವವಾಗದು, ಜ್ವರ ಬಾರದು, ಮಲಗಿದ್ದಾಗ ರಾಕ್ಷಸರು ನಿನ್ನ ಮೇಲೆ ಆಕ್ರಮಣ ಮಾಡಲಾರರು ಈ ಭೂತಳದಲ್ಲಿ ಬಾಹುಬಲದಲ್ಲಿ ನಿನಗೆ ಸಮಾನರಾದವರು ಯಾರೂ ಇರಲಾರರು , ಈ ಮಂತ್ರ ಪಠಣದಿಂದ ನಿನ್ನನ್ನು ಯಾರೂ ಎದುರಿಸಲಾರರು, ಇವೆರಡು ವಿದ್ಯೆಗಳು ಪ್ರಾಪ್ತವಾದ ಮೇಲೆ ಯಾರೂ ನಿನಗೆ ಸಮಾನರಾಗಲಾರರು, ಹಸಿವು ಬಾಯಾರಿಕೆಯ ತೊಂದರೆ ಆಗಲಾರದು” ಎಂದು ಮಂತ್ರದ ಮಹಿಮೆಯನ್ನು ವಿವರಿಸಿದರು.
ಅಲ್ಲಿಂದ ವಿಶ್ವಾಮಿತ್ರರನ್ನು ಮುಂದು ಮಾಡಿಕೊಂಡು ಪ್ರಯಾಣದಲ್ಲಿ ಮುಂದೆ ಸಾಗುತ್ತಾ ಗಂಗಾ ನದಿಯ ತೀರಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆದರು. ಸುಪ್ರಭಾತವಾದ ನಂತರ ಗಂಗೆಯಲ್ಲಿ ನಿತ್ಯಾಹ್ನಿಕಗಳನ್ನು ಮುಗಿಸಿ ಒಂದು ಸುಂದರ ನಾವೆಯಲ್ಲಿ ನಿರ್ವಿಘ್ನವಾಗಿ ಮಾರ್ಗಕ್ರಮಣಮಾಡಲು ಗಂಗೆಯನ್ನು ದಾಟಲನುವಾದರು. ನದಿಯ ನಡುಭಾಗಕ್ಕೆ ಬಂದಾಗ ಅಲೆಗಳ ಹೊಡೆತದಿಂದ ನದಿಯ ಭೋರ್ಗರೆಯುವ ಶಬ್ದವು ಕೇಳುತ್ತಿತ್ತು. ರಾಮಲಕ್ಷ್ಮಣರು ಋಷಿಗಳಲ್ಲಿ ಇದರ ಕಾರಣವನ್ನು ಕೇಳಲು, ವಿಶ್ವಾಮಿತ್ರರು ಆ ಶಬ್ದದ ನಿಶ್ಚಿತ ಕಾರಣವನ್ನು ತಿಳಿಸುತ್ತಾ. ರಾಮ! ಕೈಲಾಸಪರ್ವತದಲ್ಲಿ ಒಂದು ಸುಂದರ ಪರ್ವತವಿದೆ. ಬ್ರಹ್ಮದೇವರು ಅದನ್ನು ಮನೋಸಂಕಲ್ಪದಿಂದ ಪ್ರಕಟಪಡಿಸಿದ್ದರು. ಆದ್ದರಿಂದಲೇ ಅದನ್ನು ಮಾನಸಸರೋವರ ಎಂದು ಕರೆಯುತ್ತಾರೆ. ಆ ಸರೋವರದಿಂದ ಒಂದು ನದಿಯು ಹೊರಟು ಅಯೋಧ್ಯಾಪುರಿಯನ್ನು ಸುತ್ತುವರಿದು ಹರಿಯುತ್ತಿದೆ. ಬ್ರಹ್ಮ ಸರಸ್ಸಿನಿಂದ ಹೊರಟ ಕಾರಣ ಅದು ಪವಿತ್ರ ಸರಯೂನದಿ ಎಂದು ವಿಖ್ಯಾತವಾಗಿದೆ. ಅದರ ಜಲವು ಗಂಗೆಯಲ್ಲಿ ಸೇರುತ್ತದೆ. ಈ ಎರಡು ನದಿಗಳ ಸಂಘರ್ಷದಿಂದ ಈ ತುಮುಲ ಶಬ್ದವು ಕೇಳುತ್ತದೆ ಎಂದು ವಿವರಿಸಿದರು
ಇದನ್ನು ಕೇಳಿ ಅತ್ಯಂತ ಧರ್ಮಾತ್ಮರಾದ ಆ ಇಬ್ಬರು ಸಹೋದರರೂ ನದಿಗಳಿಗೆ ವಂದಿಸಿದರು. ಗಂಗೆಯ ದಕ್ಷಿಣ ತೀರದಲ್ಲಿ ಅವರು ಇಳಿದು ವಿಶ್ವಾಮಿತ್ರರೊಂದಿಗೆ ಶೀಘ್ರವಾಗಿ ನಡೆಯತೊಡಗಿದರು. ಆಗ ಅಲ್ಲಿ ನಿರ್ಜನವಾದ ಒಂದು ವನವನ್ನು ಕಂಡ ರಾಮಚಂದ್ರನು ಆ ವನದ ಬಗ್ಗೆ ವಿಶ್ವಾಮಿತ್ರರಲ್ಲಿ ವಿಚಾರಿಸಿದನು. ಆಗ ವಿಶ್ವಾಮಿತ್ರರು ಬಹಳ ಹಿಂದೆ ಇಲ್ಲಿ ಮಲದ ಮತ್ತು ಕರೂಷ ಎಂಬ ಎರಡು ಸಮೃದ್ಧವಾದ ದೇಶಗಳಿದ್ದವು. ಈ ಎರಡೂ ದೇಶಗಳು ದೇವತೆಗಳಿಂದ ನಿರ್ಮಾಣಗೊಂಡಿದ್ದವು. ಹಿಂದೊಮ್ಮೆ ವೃತ್ರಾಸುರನ ವಧೆ ಮಾಡಿದ ದೇವೇಂದ್ರನಿಗೆ ಬ್ರಹ್ಮಹತ್ಯಾ ದೋಷದಿಂದಾಗಿ ಬಂದ, ತನ್ನ ದೇಹದಲ್ಲಿರುವ ಮಲ ಹಾಗು ಹಸಿವು ಭಾದಿಸುತ್ತಿರಲು ಅದರ ಮಾರ್ಜನೆಗೊಸ್ಕರ ದೇವತೆಗಳು ಗಂಗಾ ಜಲವನ್ನು ಇಂದ್ರನಿಗೆ ಅಭಿಷೇಕವನ್ನು ಮಾಡಿದರು. ಆಗ ಇಂದ್ರನ ದೇಹದಲ್ಲಿರುವ ಮಲ ಹಾಗೂ ಹಸಿವು (ಕರೂಷ) ಹರಿದುಹೋಯಿತು. ಇಂದ್ರನ ದೇಹದಿಂದ ಹರಿದುಬಂದ ಮಲ ಹಾಗೂ ಹಸಿವು ಈ ಎರಡೂ ಭೂಪ್ರದೇಶದಲ್ಲಿ ಸೇರಿದ್ದರಿಂದ ಈ ಪ್ರದೇಶಗಳಿಗೆ ಮಲದ ಹಾಗೂ ಕರೂಷ ಎಂಬ ಹೆಸರಾಯಿತು.
ಕಾಲಾಂತರದಲ್ಲಿ ಸಂತಾನಾಪೇಕ್ಷಿಯಾದ ಯಕ್ಷರಾಜ ಸುಕೇತುವಿನ ತಪಸ್ಸಿಗೆ ಒಲಿದ ಬ್ರಹ್ಮದೇವರು ಹೆಣ್ಣುಮಗು ಒಂದನ್ನು ಅನುಗ್ರಹಿಸಿದರು. ತಾಟಕಿ ಎಂಬ ಆ ಬಾಲೆಗೆ ನೂರಾರು ಆನೆಗಳ ಬಲವಿತ್ತು. ಸಮವಯಸ್ಕಳಾದಾಗ ಸುಂದರಿಯಾದ ತಾಟಕಿಯನ್ನು ಯಕ್ಷರಾಜನು ಸುಂದನೆಂಬ ವರನಿಗೆ ಕೊಟ್ಟು ವಿವಾಹಮಾಡಿದನು.ಸುಂದ ಮತ್ತು ತಾಟಕಿಗೆ ಮಾರೀಚನೆಂಬ ಸಂತಾನವಾಯಿತು . ಒಮ್ಮೆ ಅಗಸ್ತ್ಯ ಮುನಿಯ ಶಾಪದಿಂದ ಸುಂದನು ಮರಣವನಪ್ಪಿದ್ದನು. ಇದರಿಂದ ಕೋಪಗೊಂಡ ತಾಟಕಿಯು ಮಗ ಮಾರೀಚನಿಂದ ಕೂಡಿಕೊಂಡು ಅಗಸ್ತ್ಯ ಮುನಿಯನ್ನೇ ಕೊಲ್ಲಲನುವಾದಳು. ಆಗ ಅಗಸ್ತ್ಯ ಮುನಿಗಳು ಮಾರೀಚನಿಗೆ ನಿಜರೂಪವನ್ನು ತ್ಯಜಿಸಿ ರಾಕ್ಷಸನಾಗು ಎಂದು ಶಪಿಸಿದರು. ಅಲ್ಲದೆ ಸುಂದರಲದ ತಾಟಕಿಗೆ ವಿಕಾರಮುಖವುಳ್ಳ ನರಭಕ್ಷಕಿ ರಾಕ್ಷಸಿಯಾಗು ಎಂದೂ ಶಾಪ ಕೊಟ್ಟರು. ಇದರಿಂದ ಕ್ರೋಧಗೊಂಡ ತಾಟಕಿಯು ಅಗಸ್ತ್ಯರು ವಾಸಿಸುತ್ತಿದ್ದ ಮಲದ ಹಾಗೂ ಕರೋಷವೆಂಬ ಸುಂದರ ಪ್ರದೇಶವನ್ನು ನಾಶಮಾಡಲು ತೊಡಗಿದಳು.
ರಘುನಂದನ ! ನೀನು ಗೋ ಮತ್ತು ಅಮಾಯಕ ಜನರ ಹಿತಕ್ಕಾಗಿ ದುಷ್ಟಪರಾಕ್ರಮವುಳ್ಳ ಈ ಪರಮ ಭಯಂಕರ ದುರಾಚಾರಿಣೀ ಯಕ್ಷಿಣಿಯನ್ನು ಸಂಹಾರಮಾಡು. ಈ ಶಾಪಗ್ರಸ್ತ ತಾಟಕೆಯನ್ನು ಕೊಳ್ಳಲು ನೀನಲ್ಲದೆ ಮೂರುಲೋಕಗಳಲ್ಲಿಯೂ ಸಮರ್ಥ ಪುರುಷನು ಯಾರು ಇಲ್ಲ. ಪ್ರಾಚೀನ ಕಾಲದಲ್ಲಿ ಶುಕ್ರಾಚಾರ್ಯರ ಮಾತೆ, ಭೃಗುವಿನ ಪತಿವ್ರತಾ ಪತ್ನಿಯು ತ್ರಿಭುವನವನ್ನು ಇಂದ್ರನನ್ನು ಶೂನ್ಯನಾಗಿಸಬೇಕೆಂದು ಬಯಸುತ್ತಿದ್ದಳು. ಇದನ್ನು ತಿಳಿದ ಭಗವಾನ್ ವಿಷ್ಣು ಆಕೆಯನ್ನು ಸಂಹರಿಸಿದನು. ಒಬ್ಬ ರಾಜಪುತ್ರನಿಗೆ ನಾಲ್ಕು ವರ್ಣಗಳ ಹಿತಕ್ಕಾಗಿ ಸ್ತ್ರೀಹತ್ಯೆಯನ್ನು ಮಾಡಲು ಬಂದರೆ ಅದರಿಂದ ಹಿಂದೆಗೆಯಬಾರದು. ಹಾಗಾಗಿ ನೀನು ಸ್ತ್ರೀಹತ್ಯೆ ದೋಷದ ಬಗ್ಗೆ ವಿಚಾರ ಮಾಡಬೇಡ.
ಪೂಜ್ಯರೇ ! ಅಯೋಧ್ಯೆಯಲ್ಲಿ ನನ್ನ ತಂದೆ ಮಹಾತ್ಮ ದಶರಥ ಮಹಾರಾಜರು ಇತರ ಗುರು ಜನರ ನಡುವೆ ನನಗೆ ಹೀಗೆ ” ರಾಮ ! ನಾನು ಹೇಳುವುದರಿಂದ, ಪಿತೃವಾಕ್ಯದಲ್ಲಿ ಗೌರವವನ್ನಿಡಲು ನೀನು ಕುಶಿಕಾನಂದನ ವಿಶ್ವಾಮಿತ್ರರ ಆಜ್ಞೆಯನ್ನು ಸಂಶಯಬಿಟ್ಟು ಪಾಲಿಸು. ಮಾತಿನ ಅವಜ್ಞತೆಯನ್ನು ಎಂದೂ ಮಾಡಬೇಡ ” ಉಪದೇಶವನ್ನು ನೀಡಿದ್ದರು. ಆದ್ದರಿಂದ ತಂದೆಯ ಉಪದೇಶದಂತೆ ಬ್ರಹ್ಮವಾದೀ ಮಹಾತ್ಮರಾದ ತಮ್ಮ ಆಜ್ಞೆಯಿಂದ ತಟಾಕವಧೆಯನ್ನು ಉತ್ತಮವೆಂದು ತಿಳಿದು ಮಾಡುವೆನು ಇದರಲ್ಲಿ ಸಂದೇಹವೇ ಇಲ್ಲ.
ಹೀಗೆ ಹೇಳಿದ ಶ್ರೀರಾಮನು ಧನುಸ್ಸನ್ನು ಭದ್ರವಾಗಿ ಹಿಡಿದುಕೊಂಡು ಜೋರಾಗಿ ಧನುಷ್ಷಾಂಕಾರ ಮಾಡಿದನು. ಆ ಶಬ್ದದಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸಿದವು. ಆ ಶಬ್ದದಿಂದ ತಟಾಕವನದಲ್ಲಿ ಇರುವ ಸಮಸ್ತ ಪ್ರಾಣಿಗಳೂ ನಡುಗಿಹೋದವು. ತಾಟಕೆಯೂ ಕೂಡ ಆ ಧನುಷ್ಟಂಕಾರದಿಂದ ಮೂರ್ಚಿತಳಾದಳು. ಮತ್ತೆ ಆಕೆಯು ಶಬ್ದ ಕೇಳಿ ಬಂಡ ದಿಕ್ಕನ್ನು ಹಿಡಿದು ರೋಶಪೂರ್ವಕವಾಗಿ ಓಡಿದಳು.
ಆಕೆಯ ಶರೀರ ಬಹಳ ಎತ್ತರವಾಗಿತ್ತು , ಮುಖಾಕೃತಿಯು ವಿಕೃತವಾಗಿ ಕಂಡುಬರುತ್ತಿತ್ತು. ಕ್ರೋಧತುಂಬಿದ ಆ ವಿಕರಾಳ ರಾಕ್ಷಸಿಯ ಕಡೆಗೆ ನೋಡಿ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳುತ್ತಾನೆ . ಲಕ್ಷ್ಮಣನೇ ! ನೋಡು ಈ ಯಕ್ಷಿಣಿಯ ಶರೀರ ಹೇಗೆ ದಾರುಣ ಹಾಗು ಭಯಂಕರವಾಗಿದೆ. ಈಕೆಯ ದರ್ಶನದಿಂದ ಸಾಮಾನ್ಯ ಮನುಷ್ಯನ ಹೃಧಯ ಒಡೆದುಹೋದೀತು. ಮಾಯಾಬಲವನ್ನು ಹೊಂದಿದ ಕಾರಣ ಈಕೆ ಅತ್ಯಂತ ದುರ್ಜಯಳಾಗಿದ್ದಾಳೆ. ಇವಳು ತನ್ನ ಸ್ತ್ರೀ ಸ್ವಭಾವದಿಂದಾಗಿ ರಕ್ಷಿತವಾಗಿದ್ದಾಳೆ; ಆದ್ದರಿಂದ ಈಕೆಯನ್ನು ಕೊಲ್ಲಲು ನನಗೆ ಉತ್ಸಾಹವೇ ಉಂಟಾಗುತ್ತಿಲ್ಲ.
ಶ್ರೀರಾಮನು ಹೀಗೆ ಹೇಳುತ್ತಿರುವಂತೆಯೇ ಕ್ರೋಧೋನ್ಮತ್ತ ತಾಟಕೆಯು ಅಲ್ಲಿಗೆ ಬಂದು ಆ ಇಬ್ಬರು ರಘುವಂಶಿ ವೀರರಮೇಲೆ ಭಯಂಕರ ಧೂಳನ್ನು ಹಾರಿಸಿದಳು ಹಾಗೂ ಕಲ್ಲಿನ ಮಳೆಗರೆದಳು. ಇದನ್ನು ನೋಡಿ ರಘುನಾಥನು ಆಕೆಯ ಮೇಲೆ ಕ್ರೋಧಗೊಂಡನು. ರಾಘವನು ಬಾಣಗಳಿಂದ ಕಲ್ಲಿನ ಮಳೆಯನ್ನೂ ನಿವಾರಿಸಿ , ತನ್ನತ್ತ ಧಾವಿಸಿಬರುವ ನಿಶಾಚರಿಯ ಎರಡು ಕೈಗಳನ್ನು ಹರಿತವಾದ ಬಾಣಗಳಿಂದ ಕತ್ತರಿಸಿ ಹಾಕಿದನು. ಎರಡು ಭುಜಗಳು ತುಂಡದ್ದರಿಂದ ಬಳಲಿದ ತಾಟಕೆಯು ಅವರ ಬಳಿ ನಿಂತು ಜೋರಾಗಿ ಗರ್ಜಿಸಿದಳು. ಇದನ್ನು ನೋಡಿ ಸುಮಿತ್ರಕುಮಾರ ಲಕ್ಷ್ಮಣನು ಕ್ರೋಧಗೊಂಡು ಆಕೆಯ ಕಿವಿ,ಮೂಗನ್ನು ಕತ್ತರಿಸಿ ಬಿಟ್ಟನು. ಆದರೆ ಆ ಯಕ್ಷಿಣಿಯು ಇಚ್ಛಾರೂಪಿಣಿಯಾಗ್ಗಿದ್ದಳು. ಆದ್ದರಿಂದ ಅನೇಕ ಪ್ರಕಾರದ ರೂಪಗಳನ್ನು ಧರಿಸಿ ತನ್ನ ಮಾಯೆಯಿಂದ ಶ್ರೀರಾಮ – ಲಕ್ಷ್ಮಣರನ್ನು ಮರಳುಗೊಳಿಸುತ್ತಾ ಅದೃಶ್ಯಳಾಗಿ ಶಿಲಾವೃಷ್ಟಿ ಮಾಡುತ್ತಿದ್ದಳು.
ಶ್ರೀರಾಮನು ಶಬ್ದವೇಧಿ ಬಣದ ಶಕ್ತಿಯನ್ನು ಪರಿಚಯಿಸುತ್ತ ಬಾಣವನ್ನು ಹೂಡಿ ಶಿಲಾವೃಷ್ಟಿ ಮಾಡುತ್ತಿದ್ದ ಆ ಯಕ್ಷಿಣಿಯನ್ನು ಎಲ್ಲ ಕಡೆಯಿಂದಲೂ ಬಂದಿಸಿಟ್ಟನು. ಅವನ ಬಾಣಸಮೂಹದಿಂದ ಸುತ್ತುವರಿದ ಮಾಯಾ ಬಲಯುಕ್ತ ಆ ಯಕ್ಷಿಣಿಯು ಜೋರಾಗಿ ಗರ್ಜಿಸುತ್ತ ಶ್ರೀರಾಮ ಲಕ್ಷ್ಮಣರ ಮೇಲೆ ಎರಗಿದಳು. ಇಂದರನು ಪ್ರಯೋಗಿಸಿದ ವಜ್ರದಂತೆ ವೇಗವಾಗಿ ಬರುತ್ತಿದ್ದ ಆಕೆಯನ್ನು ನೋಡಿ ಶ್ರೀರಾಮನು ಒಂದು ಬಾಣದಿಂದ ಆಕೆಯ ಎದೆಯನ್ನು ಸೀಳಿಬಿಟ್ಟನು. ಆಗ ತಾಟಕೆಯು ಸತ್ತು ಭೂಮಿಗೆ ಬಿದ್ದಳು. ಅದೇ ದಿನ ಆ ವನವು ಶಾಪಮುಕ್ತವಾಗಿ ರಮಣೀಯ ಶೋಭೆಯಿಂದ ಸಂಪನ್ನವಾಗಿ, ಚೈತ್ರರಥದ ವನದಂತೆ ಕಂಗೊಳಿಸುತ್ತಿತ್ತು.
ಯಕ್ಷಕನ್ಯೆ ತಾಟಕೆಯನ್ನು ವಧಿಸಿ ಶ್ರೀರಾಮಚಂದ್ರನು ದೇವತೆಗಳ ಹಾಗೂ ಸಿದ್ದ ಸಮೂಹದ ಪ್ರಶಂಸೆಗೆ ಪಾತ್ರನಾದನು.
ಪಲ್ಲವಿ