Advertisement
ತೆಂಕಿನ ಹೆಸರಾಂತ ಭಾಗವತರು ಮತ್ತು ಪ್ರಸಂಗಕರ್ತರಲ್ಲಿ ಒಬ್ಬರಾಗಿದ್ದ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಪುತ್ರನಾಗಿ ತಮ್ಮ ತಂದೆಯವರು ಹುಟ್ಟುಹಾಕಿದ್ದ ‘ಅಗರಿ ಶೈಲಿ’ಯನ್ನು ಸಮರ್ಥವಾಗಿ ತಮ್ಮ ಭಾಗವತಿಕೆಯಲ್ಲಿ ಅಳವಡಿಸಿಕೊಂಡು ಆ ಪರಂಪರೆಯನ್ನು ಮುಂದುವರಿಸುವಲ್ಲಿ ರಘುರಾಮ ಭಾಗವತರ ಪಾತ್ರ ಮಹತ್ವದ್ದಾಗಿತ್ತು. ತೆಂಕು ಯಕ್ಷಪರಂಪರೆಯಲ್ಲಿ ಬಲಿಪ ಶೈಲಿ, ಕುರಿಯ ಶೈಲಿ, ಮಂಡೆಚ್ಚ ಶೈಲಿ ಎಂಬಿತ್ಯಾದಿ ಶೈಲಿಗಳಿರುವಂತೆ ಶುದ್ಧ ಅಗರಿ ಶೈಲಿಯನ್ನು ಅಳವಡಿಸಿಕೊಂಡು ಅದನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬಂದಿದ್ದರು.
40 ವರ್ಷಗಳ ಕಾಲ ಅಂದಿನ ಸುರತ್ಕಲ್ ಮೇಳದಲ್ಲಿ ಪ್ರಧಾನ ಭಾಗವತರಾಗಿ ಆ ಮೇಳದ ಯಶಸ್ಸಿನ ಸೂತ್ರಧಾರರಲ್ಲಿ ರಘುರಾಮ ಭಾಗವತರು ಒಬ್ಬರಾಗಿದ್ದರು. ಆ ಕಾಲದಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿ ಶಿಕ್ಷಣ ಇಲಾಖೆಯಲ್ಲಿ ಗೌರವಾನ್ವಿತ ಹುದ್ದೆಯಲ್ಲಿದ್ದ ರಘುರಾಮ ಭಾಗವತರು ಅನಿರೀಕ್ಷಿತವಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸುವಂತಾಯಿತು.ಆ ಬಳಿಕ ತಮ್ಮ ತಂದೆಯವರು ಹಾಕಿಕೊಟ್ಟಿದ್ದ ಪರಂಪರೆಗೆ ಚ್ಯುತಿ ಬರದ ರೀತಿಯಲ್ಲಿ ಹಿಮ್ಮೇಳದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದ ರಘುರಾಮ ಭಾಗವತರನ್ನು ಹಲವಾರು ಪ್ರಶಸ್ತಿ, ಸಮ್ಮಾನಗಳು ಅರಸಿ ಬಂದಿವೆ. ಅವುಗಳಲ್ಲಿ, ಪದ್ಯಾಣ ಪ್ರಶಸ್ತಿ, ಯಕ್ಷಲಹರಿ ಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಕರಣ ವೇದಿಕೆ ಪ್ರಶಸ್ತಿ, ಮುಂಬಯಿ ಜಗದಂಬಾ ಯಕ್ಷಗಾನ ಮಂಡಳಿ ಪ್ರಶಸ್ತಿ, ಕರಾವಳಿ ಯಕ್ಷಗಾನ ಸಮ್ಮೇಳನ ಪ್ರಶಸ್ತಿ, ಪೊಳ್ಯ ದೇಜಪ್ಪ ಶೆಟ್ಟಿ ಯಕ್ಷಗಾನ ಸಾಹಿತ್ಯ ಪ್ರಶಸ್ತಿ, ಯಕ್ಷ ಸಂಗಮ ಪ್ರಶಸ್ತಿಗಳು ಮುಖ್ಯವಾದವುಗಳಾಗಿವೆ.