ಉತ್ತರ ಕಾಶಿ: ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಟನಲ್ ಕುಸಿದು ಸಿಲುಕಿಕೊಂಡಿರುವ 40 ಕಾರ್ಮಿಕರ ರಕ್ಷಣೆಗಾಗಿ ಅಮೆರಿಕದ ಆಗರ್ ಯಂತ್ರ ಕೆಲಸ ಮಾಡಲು ಆರಂಭಿಸಿದೆ. 12 ಮೀಟರ್‌ಗಿಂತಲೂ ಅಧಿಕ ರಂಧ್ರವನ್ನು ಅದು ಕೊರೆದಿದೆ. ಹೀಗಾಗಿ, ಕಾರ್ಮಿಕರ ರಕ್ಷಣೆಯ ಕಾರ್ಯದಲ್ಲಿ ಹೊಸ ಆಶೆಯೊಂದು ಚಿಗುರೊಡೆದಿದೆ.
ಐಎಎಫ್ನ ಮೂರು ಸರಕು ಸಾಗಣೆ ವಿಮಾನಗಳ ಸಹಾಯದಿಂದ ಅಮೆರಿಕದ ಆಗರ್ ಯಂತ್ರವನ್ನು ಹೊಸದಿಲ್ಲಿಯಿಂದ ಚಿನ್ಯಾಲಿಸೌರ್ ಹೆಲಿಪ್ಯಾಡ್‌ಗೆ ಸಾಗಿಸಲಾಯಿತು. ಅಲ್ಲಿಂದ 35 ಕಿ.ಮೀ. ದೂರದ ಟನಲ್ ಇರುವ ಸ್ಥಳಕ್ಕೆ ಯಂತ್ರವನ್ನು ತರಲಾಯಿತು.
ಕಾರ್ಮಿಕರಿಂದ ಪೂಜೆ: ಸ್ಥಳದಲ್ಲಿದ್ದ ಕಾರ್ಮಿಕರು, ಎಂಜಿನಿಯರ್‌ಗಳು ಯಂತ್ರಕ್ಕೆ ಪೂಜೆ ಸಲ್ಲಿಸಿದರು. ಆಗರ್ ಯಂತ್ರವು ಶೀಘ್ರವಾಗಿ ಕಡಿಮೆ ಸಮಯದಲ್ಲಿ ಭೂಮಿಯನ್ನು ಕೊರೆದು, ದೊಡ್ಡ ಪೈಪ್‌ಗ್ಳನ್ನು ಅಳವಡಿಸಲಿದೆ. ಇದರ ಮೂಲಕ ಕಾರ್ಮಿಕರನ್ನು ಹೊರಕ್ಕೆ ತರಬಹುದಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲು ಇನ್ನೂ 2ರಿಂದ 3 ದಿನಗಳು ಬೇಕಾಗಲಿದೆ. ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕ ಸೇರಿದಂತೆ ನೀರು ಮತ್ತು ಆಹಾರವನ್ನು ಪೂರೈಸುವ ಕಾರ್ಯ ಮುಂದುವರಿದಿದೆ.
ಸಚಿವ ಸಿಂಗ್ ಪರಿಶೀಲನೆ: ಟನೆಲ್ ಕುಸಿದ ಸ್ಥಳಕ್ಕೆ ಗುರುವಾರ ಕೇಂದ್ರ ಸಚಿವ ವಿ.ಕೆ.ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, “ಕಾರ್ಮಿಕರನ್ನು ಸುರಕ್ಷಿತ ವಾಗಿ ಹೊರಕ್ಕೆ ತರುವುದು ಮೊದಲ ಆದ್ಯತೆಯಾಗಿದೆ ಎಂದರು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಾತನಾಡಿ “ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಟನಲ್‌ಗಳನ್ನು ಪರಿಶೀಲಿಸಲಾಗುವುದು ಎಂದರು.