ನಟಿ ಮೈತ್ರಿಯಾ ಗೌಡ “ಆಗಂತುಕ’ ಸಿನಿಮಾ ಮೂಲಕ ಇದೇ ಮೊದಲ ಸಲ ಅವರು ಖಾಕಿ ಖದರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರ ಈಗಾಗಲೇ ಶೇ.50 ರಷ್ಟು ಚಿತ್ರೀಕರಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಹಾಡೊಂದರ ರೆಕಾರ್ಡಿಂಗ್ ಮುಗಿಸಿದೆ. ಗಾಯಕ ರಾಜೇಶ್ ಕೃಷ್ಣ ಹಾಡಿದ “ಎದೆಗೂಡಿನ ಮಡಿಲಲ್ಲಿ ಹೃದಯಗಳ ಮಾತು..’ ಎಂಬ ಹಾಡನ್ನು ಸಂಗೀತ ನಿರ್ದೇಶಕ ಜಾರ್ಜ್ ಥಾಮಸ್ ಅವರು ರೆಕಾರ್ಡ್ ಮಾಡಿದ್ದಾರೆ. ಈ ಚಿತ್ರವನ್ನು ರಜತ್ ರಘುನಾಥ್ ನಿರ್ದೇಶನ ಮಾಡಿದ್ದಾರೆ.
ನಿರ್ಮಾಣದ ಜವಾಬ್ದಾರಿಯೂ ಅವರದೇ. ಅಂದಹಾಗೆ, ಈ ಚಿತ್ರದಲ್ಲಿ ಮೈತ್ರಿಯಾ ಗೌಡ ಅರಣ್ಯಾಧಿಕಾರಿ ಪಾತ್ರ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿರಲಿವೆಯಂತೆ. ಅರಣ್ಯದಲ್ಲಿ ಸರಣಿ ಕೊಲೆಗಳು ನಡೆಯುತ್ತಲೇ ಇರುತ್ತವೆ. ಆ ಕೊಲೆಯ “ಆಗಂತುಕ’ ಯಾರು ಎಂಬುದನ್ನು ಪತ್ತೆ ಹಚ್ಚಲು ಹೊರಡುವ ಕಥೆ ಇಲ್ಲಿದೆ. ಇನ್ನುಳಿದಂತೆ ಚಿತ್ರದಲ್ಲಿ ಸಾಗರಿಕ ಗೌಡ ಹಾಗೂ ಗುರು ಬಿಂದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಂಗ್ರಿ ನಾಗರಾಜ್ ಅವರೂ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದ ವಿಶೇಷವೆಂದರೆ, ಬಹುತೇಕ ಕಾಡಲ್ಲೇ ಚಿತ್ರೀಕರಣ ನಡೆಯುವುದು. ಸಕಲೇಶಪುರ ಸುತ್ತಮುತ್ತ ಫಾರೆಸ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಐದು ಭರ್ಜರಿ ಫೈಟ್ಸ್‌ಗಳಿವೆ. ಮೈತ್ರಿಯಾ ಗೌಡ ಇಲ್ಲಿ ಮೊದಲ ಸಲ ಫೈಟ್ ಮಾಡುತ್ತಿದ್ದು, ಅದಕ್ಕಾಗಿ ಪೂರ್ವ ತಯಾರಿಯನ್ನೂ ಪಡೆದಿದ್ದಾರೆ. ಅವರದೇ ಇಲ್ಲಿ ಪ್ರಮುಖ ಪಾತ್ರ ಇರುವುದರಿಂದ ಈ ಚಿತ್ರ ನಾಯಕಿಯ ಪ್ರಧಾನ ಎನ್ನಬಹುದು. ನಿರ್ದೇಶಕ ರಜತ್ ರಘುನಾಥ್ ಅವರು ಈಗಾಗಲೇ ಚಿತ್ರೀಕರಣ ಮುಗಿಸುವ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ಉಳಿದ ಭಾಗ ಚಿತ್ರೀಕರಿಸಿ, ಮಾರ್ಚ್ ಹೊತ್ತಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಅವರ ನಿರ್ಮಾಣದ “ಓಜಸ್’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ‘ಆಗಂತುಕ’ ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ. ವೈಲೆಂಟ್ ವೇಲು ಮತ್ತು ಫಯಾಜ್ ಸ್ಟಂಟ್ಸ್ ಮಾಡಿಸಿದ್ದಾರೆ. ಚಿತ್ರದ ಮತ್ತೂಂದು ವಿಶೇಷವೆಂದರೆ ಬ್ಯಾಂಕಾಕ್‌ನಿಂದ ವಿಶೇಷ ಉಪಕರಣಗಳನ್ನು ತರಿಸಿ, ಸ್ಟೈಲಿಶ್ ಆಗಿಯೇ ಚಿತ್ರೀಕರಿಸುತ್ತಿರುವ ಖುಷಿ ಚಿತ್ರತಂಡದ್ದು.