ವಿದ್ಯಾನಗರ: ಆಲಪ್ಪುಳದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಪ್ರೌಢ ಶಾಲಾ ಯಕ್ಷಗಾನ ತಂಡವು ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿ ಮತ್ತೂಮ್ಮೆ ಗಡಿನಾಡಿನ ಜನತೆ ಹೆಮ್ಮೆ ಪಡುವಂತೆ ಮಾಡಿದೆ. ಐವತ್ತೂಂಬತ್ತನೇ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಅಗಲ್ಪಾಡಿ ಶಾಲೆಯ ಯಕ್ಷಪ್ರತಿಭೆಗಳು ಮುರಾಸುರ ವಧೆ ಎಂಬ ಯಕ್ಷಗಾನವನ್ನು ಪ್ರದರ್ಶಿಸಿ ಅಪಾರವಾದ ಮೆಚ್ಚುಗೆ ಹಾಗೂ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಹತ್ತು ಜಿಲ್ಲೆಗಳಿಂದ ಬಂದ ಯಕ್ಷಗಾನ ತಂಡಗಳೊಂದಿಗೆ ಪೈಪೋಟಿ ನೀಡಿ ಈ ಸಾಧನೆಯನ್ನು ಮಾಡಿದ್ದಾರೆ. ಹೆಸರಾಂತ ನಾಟ್ಯಗುರು, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತ ಜಯರಾಮ ಪಾಟಾಳಿ ಎಡಮಲೆ ನಿರ್ದೇಶನದಲ್ಲಿ ನಡೆದ ಯಕ್ಷಗಾನವು ಮಲಯಾಳ ಮಣ್ಣಿನಲ್ಲಿ ಯಕ್ಷಲೋಕ ಸೃಷ್ಟಿ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು. ಕಿಕ್ಕಿರಿದು ನೆರೆದ ಪ್ರೇಕ್ಷಕರನ್ನು ಯಕ್ಷಗಾನದ ಅದ್ಬುತ ಲೋಕದೊಳಗೆ ಹರಿಸುವಂತೆ ಮಾಡಿತು.
ಯಕ್ಷಗಾನದ ಮೂಲ ಪರಂಪರೆಗೆ ಧಕ್ಕೆಯಾಗದಂತೆ ಪ್ರದರ್ಶಿಸಲ್ಪಟ್ಟ ಯಕ್ಷಗಾನ ಪ್ರೇಕ್ಷಕರ ಹಾಗೂ ತೀರ್ಪುಗಾರರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಮುರಾಸುರನ ಪಾತ್ರ ದಲ್ಲಿ ದೀಕ್ಷಿತ್ ಕುಮಾರ್, ದೇವೇಂದ್ರನಾಗಿ ಶ್ರೀರಾಮ ಗಮನ ಸೆಳೆದರು. ದೇವಬಲವಾಗಿ ನಂದಕಿಶೋರ ಡಿ. ಹಾಗೂ ರಾಕ್ಷಸಬಲವಾಗಿ ಕೆ.ಆರ್.ದೀಕ್ಷಾ ತಮ್ಮ ನಾಟ್ಯದ, ಧಿಂಗಿಣದ ಸೊಬಗಿನಿಂದ ಪ್ರೇಕ್ಷಕರನ್ನು ಸೆಳೆದರು.
ದೂತನಾಗಿ ಪ್ರಜ್ವಲ್ ಶೆಟ್ಟಿ ನೋಡುಗರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿದರು. ಸುಪ್ರೀತಾ ಸುಧೀರ್ ರೈ ಕೃಷ್ಣನ ಪಾತ್ರಕ್ಕೆ ಜೀವ ತುಂಬಿದರೆ ಭಾವನಾಕೃಷ್ಣ ಜಗನ್ಮಾತೆಯಾಗಿ ಮಂಗಳವನ್ನುಂಟು ಮಾಡಿದರು. ಮುಮ್ಮೇಳದಲ್ಲಿ ಪುಟ್ಟ ಮಕ್ಕಳ ಉತ್ಸಾಹ ಜನಸಾಗರವನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮನೋಹರ್ ಬಲ್ಲಾಳ್, ಚೆಂಡೆ ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಚಕ್ರತಾಳದಲ್ಲಿ ಉದಯ ಸಹಕರಿಸಿದರು. ನೇಪಥ್ಯದಲ್ಲಿ ವಸ್ತ್ರಾಲಂಕಾರ ಹಾಗೂ ಮುಖವರ್ಣಿಕೆಯಲ್ಲಿ ಮೋಹನ್ ಹಾಗೂ ಸಂಗಡಿಗರು ಸಹಕರಿಸಿದರು.
ಪ್ರದರ್ಶಿಸಿ ಗೆದ್ದಿರುವುದು ಸಂತೋಷ
ವಿದ್ಯಾರ್ಥಿಗಳ ಶಿಸ್ತು, ಪರಿಶ್ರಮ ಈ ಗೆಲುಗೆ ಕಾರಣ. ಸತತವಾಗಿ ಉತ್ಸಾಹದಿಂದ ಅಭ್ಯಾಸ ಮಾಡಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಶಿಕ್ಷಕವೃಂದದವರ ಮತ್ತು ಹೆತ್ತವರ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನಮ್ಮೊಂದಿಗಿತ್ತು. ಕಾಸರಗೋಡಿನ ಯಕ್ಷಗಾನದ ಮಹತ್ವವನ್ನು, ಆಕರ್ಷಣೆಯನ್ನು ಮತ್ತೂಮ್ಮೆ ಕಲೋತ್ಸವದ ವೇದಿಕೆಯಲ್ಲಿ ಪ್ರದರ್ಶಿಸಿ ಗೆದ್ದು ಬಂದಿರುವುದು ಸಂತೋಷ.
– ಜಯರಾಮ ಪಾಟಾಳಿ ಪಡುಮಲೆ, ನಾಟ್ಯಗುರು