ಅಮೇಠಿ : ”ವಿಶ್ವ ಆರ್ಥಿಕತೆಯ ಮುಂಚೂಣಿಯಲ್ಲಿರುವ ಚೀನ ದಿನಕ್ಕೆ 50,000 ಉದ್ಯೋಗಗಳನ್ನು ಸೃಷ್ಟಿಸುತ್ತಿದೆಯಾದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ದಿನಕ್ಕೆ ಕೇವಲ 450 ಉದ್ಯೋಗಳನ್ನು ಸೃಷ್ಟಿಸುತ್ತಿದೆ” ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಟು ಟೀಕೆ ಮಾಡಿದ್ದಾರೆ.
‘ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಜನತೆಗೆ ಕೊಟ್ಟಿದ್ದ ಎಲ್ಲ ದೊಡ್ಡ ದೊಡ್ಡ ಭರವಸೆ, ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ರಾಹುಲ್ ಗಾಂಧಿ ತನ್ನ ಅಮೇಠಿ ಭೇಟಿಯ ಎರಡನೇ ದಿನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
‘ಕೇಂದ್ರದಲ್ಲಿನ ಬಿಜೆಪಿ ಸರಕಾರ ಹಿಂದಿನ ಯುಪಿಎ ಸರಕಾರ ಮಾಡಿದ್ದ ಒಳ್ಳೆಯ ಕೆಲಸಗಳನ್ನೆಲ್ಲ ತಾನೇ ಮಾಡಿದ್ದಾಗಿ ಹೇಳಿಕೊಂಡು ಅದರ ಲಾಭ ಪಡೆಯುತ್ತಿದೆ ‘ ಎಂದು ರಾಹುಲ್ ಆರೋಪಿಸಿದರು.
ರಾಹುಲ್ ಗಾಂಧಿ ಅವರು ಅಮೆಠಿಯಲ್ಲಿ ಯುಪಿಎ ಸರಕಾರ ಮಾಡಿದ್ದ ಸಾಧನೆಗಳ ಪಟ್ಟಿಯನ್ನೇ ಓದಿ ಹೇಳಿದರು. ಇದರಲ್ಲಿ ಆರು ರಾಷ್ಟ್ರೀಯ ಹೆದ್ದಾರಿಗಳು, ಒಂದು 200 ಹಾಸಿಗೆ ಆಸ್ಪತ್ರೆ, ಫುರಸತ್‌ಗಂಜ್‌ನಲ್ಲಿ ಸ್ಥಾಪಿಸಲಾಗಿರುವ ರಾಜೀವ್ ಗಾಂಧಿ ನ್ಯಾಶನಲ್ ಏವಿಯೇಶನ್ ಯುನಿವರ್ಸಿಟಿ, ಜಗದೀಶ್‌ಪುರದಲ್ಲಿ ಸ್ಥಾಪಿಸಲಾಗಿರುವ ಭಾರತೀಯ ಉಕ್ಕು ಪ್ರಾಧಿಕಾರದ ಘಟಕ ಇತ್ಯಾದಿಗಳು ಸೇರಿವೆ.
“ಬಿಜೆಪಿಯಲ್ಲಿನ ನಮ್ಮ ನಾಲ್ವರು ಮಿತ್ರರು ಈ ಯೋಜನೆಗಳ ಪುನರ್ ಉದ್ಘಾಟನೆಗೆ ಯತ್ನಿಸುತ್ತಿದ್ದಾರೆ ಎಂದು ತಿಳಿಸಲು ನಾನು ಸಂತಸ ಪಡುತ್ತೇನೆ; ಆದರೆ ಆ ಯೋಜನೆಗಳನ್ನು ಅಮೇಠಿಯಲ್ಲಿ ಮಾಡಿದ್ದು ನಾವೇ ಎನ್ನಲು ಸಂಭ್ರಮಿಸುತ್ತೇನೆ’ ಎಂದು ರಾಹುಲ್ ಹೇಳಿದರು.