ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಿರಂತರವಾಗಿ ಅನ್ಯಾಯ, ಮಲತಾಯಿ ಧೋರಣೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ರಚನೆಗಾಗಿ ಹೋರಾಟ ರೂಪಿಸುವ ಚಿಂತನೆ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದ ಪ್ರತ್ಯೇಕ ಬಜೆಟ್ ಮಂಡನೆ ಕನಸಾಗಿಯೇ ಉಳಿದಿದೆ.
371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನ, ಈ ಭಾಗಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವ ಬಗ್ಗೆ ನಿರ್ಲಕ್ಷé ವಹಿಸಲಾಗಿದೆ. ಮೇಲಾಗಿ ಈ ಭಾಗಕ್ಕೆ ಮಂಜೂರಾದ ಯೋಜನೆಗಳು, ಮಂಜೂರಾಗಬೇಕಾದ ಯೋಜನೆಗಳು ನನೆಗುದಿಗೆ ಬಿದ್ದಿವೆ. ನಮ್ಮ ಭಾಗದಲ್ಲಿ ಸ್ಥಾಪನೆಯಾಗಿದ್ದ ಪ್ರಮುಖ ಸಂಸ್ಥೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಭವಿಷ್ಯ ಇಲ್ಲವೆಂಬುದು ಸ್ಪಷ್ಟವಾಗುತ್ತಿದೆ
ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಐಟಿಟಿ, ಏಮ್ಸ್, ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಕ್ಸ್ ಲೆನ್ಸ್‌ನಂತಹ ಸಂಸ್ಥೆಗಳು ಬೇರೆಗೆ ಸ್ಥಳಾಂತರ ಮಾಡಲಾಗಿದೆ. ರೈಲ್ವೆ ವಿಭಾಗ, ತೊಗರಿ ತಂತ್ರಜ್ಞಾನ ಪಾರ್ಕ್, ಜವಳಿ ಪಾರ್ಕ್, ಸಂಪೂರ್ಣ ರದ್ದು ಮಾಡಲಾಗುತ್ತಿದೆ. ನಿಮ್, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕಚೇರಿ, ಬೀದರ್‌ನ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಟೆಕ್ನಾಲಜಿ (ಸಿಪೆಟ್) ಕೇಂದ್ರ, ಹೆಲಿಕಾಪ್ಟರ್ ಬಿಡಿ ಭಾಗಗಳ ತಯಾರಿಕಾ ಘಟಕ, ಕೊಪ್ಪಳ ಏರ್‌ಪೋರ್ಟ್ ಕನಸಾಗಿಯೇ ಉಳಿದಿವೆ. ಪಶು ವಿಶ್ವವಿದ್ಯಾಲಯವನ್ನು ಒಡೆದು ಸ್ಥಳಾಂತರ ಮಾಡುವ ಹುನ್ನಾರ ನಡೆದಿದೆ. ಈ ಭಾಗದ ನೀಡಬೇಕಾದ ಅನುದಾನದಲ್ಲಿ ಕಡಿತ…ಹೀಗೆ ಪ್ರಾದೇಶಿಕ ಅಸಮತೋಲನ ನಿವಾರಣೆ ಬದಲು ಮತ್ತಷ್ಟು ಹೆಚ್ಚಿಸುವ ಕೆಲಸವಾಗುತ್ತಿದೆ. ಈಗಿನಿಂದಲೇ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಗಂಭೀರ ಚರ್ಚೆ ಮತ್ತು ತಮ್ಮ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಲು ಅನಿರ್ವಾಯವಾಗಿದೆ ಎಂದರು.
ಶೀಘ್ರ ಮಹಾ ಅಧಿವೇಶನ: ಕಲ್ಯಾಣ ಕರ್ನಾಟಕ ಭಾಗದ ಯೋಜನೆಗಳ ರದ್ದು ಮತ್ತು ಸ್ಥಳಾಂತರ ಖಂಡಿಸಿ ಮುಖ್ಯಮಂತ್ರಿಗಳಿಗೆ ಈ ಭಾಗದ ಸರ್ವಪಕ್ಷಗಳ ಮುಖಂಡರನ್ನು ಕರೆದುಕೊಂಡು ಹೋಗಲು ಯೋಜಿಸಲಾಗಿದೆ. ಎಲ್ಲ ಪಕ್ಷಗಳ ನಾಯಕರ ಸಂಘಟಿತ ಇಚ್ಛಾಶಕ್ತಿ ವ್ಯಕ್ತಪಡಿಸಲು ಒಕ್ಕೊರಲಿನಿಂದ ಒತ್ತಾಯ ಮಾಡಲಾಗಿದೆ. ಜತೆಗೆ ಧರ್ಮಾತೀತ ಮತ್ತು ವರ್ಗಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೂ ಈ ಭಾಗದ ಏಳು ಜಿಲ್ಲೆಗಳಲ್ಲಿ ಸಂಘಟಿತ
ಜನಾಂದೋಲನ ನಡೆಸುವುದು ಅತಿ ಅವಶ್ಯವಾಗಿದೆ ಎಂದು ದಸ್ತಿ ಹೇಳಿದರು.
ಜನಾಂದೋಲನ ಸ್ವರೂಪದ ಹೋರಾಟಕ್ಕಾಗಿ ಪ್ರತಿಯೊಬ್ಬರ ಅಭಿಪ್ರಾಯ ತೆಗೆದುಕೊಂಡು ಅವರ ಸಲಹೆ, ಸಹಕಾರ ಬೆಂಬಲ ಪಡೆಯಲಾಗುವುದು ಮತ್ತು ಧರ್ಮಗುರುಗಳು ಮತ್ತು ಮಠಾಧಿಧೀಶರೊಂದಿಗೆ, ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು ಸೇರಿ ಎಲ್ಲ ರಾಜಕೀಯ ಮುಖಂಡರು, ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು, ಹೋರಾಟಗಾರರು, ಕನ್ನಡಪರ, ಜನಪರ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತ, ಕಾರ್ಮಿಕ, ಯುವ ಮತ್ತು ವಿದ್ಯಾರ್ಥಿ ಪರ ಹೋರಾಟಗಾರು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ಸಭೆಗಳು ನಡೆಸಿ,
ಪ್ರಮುಖ 500 ಜನರೊಂದಿಗೆ ಶೀಘ್ರ “ಕಲ್ಯಾಣ ಕರ್ನಾಟಕ ಜನತಾ ಮಹಾ ಅಧಿವೇಶನ’ ನಡೆಸಲು ಸಹ ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಈ ಅಧಿವೇಶನದ ಬಳಿಕ ಉಗ್ರ ಸ್ವರೂಪದ ರೀತಿಯಲ್ಲಿ ಧರಣಿ ಸತ್ಯಾಗ್ರಹ, ರಸ್ತೆತಡೆ, ಹೆದ್ದಾರಿ ತಡೆ, ರೈಲು ರೋಖೋ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್ ಹಾಗೂ ವಿಧಾನಸೌಧ ಮುತ್ತಿಗೆ ಅಂತಹ ನಿರಂತರ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮನೀಷ್ ಜಾಜು, ಶಿವಲಿಂಗಪ್ಪ ಬಂಡಕ, ಮಹಮ್ಮದ ಮಿರಾಜೊದ್ದೀನ್, ಅಸ್ಲಾಂ ಚೌಂಗೆ, ಭದ್ರಶೆಟ್ಟಿ ಇದ್ದರು.
ಸಂಸದರು-ಶಾಸಕರಿಗೆ ಘೇರಾವ್
ಕಲ್ಯಾಣ ಕರ್ನಾಟಕ ಭಾಗದ ಅನೇಕ ಯೋಜನೆಗಳನ್ನು ಕಸಿದುಕೊಂಡರೂ ಈ ಭಾಗದ ಸಂಸದರು ಹಾಗೂ ಶಾಸಕರು ಮೌನ ವಹಿಸುವ ಮೂಲಕ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಸಂಸದರು, ಶಾಸಕರು ಕಂಡಲ್ಲೇ ಘೇರಾವ್ ಹಾಕುವ ಹೋರಾಟ ನಡೆಸಲಾಗುವುದು. ಜತೆಗೆ ಕೆಕೆಆರ್‌ಡಿಬಿ ಕಚೇರಿ ಮತ್ತು ಜನಪ್ರಿನಿಧಿಗಳ ಮನೆಗೆ ಹೋಗಿ ಮುತ್ತಿಗೆ ಹಾಕಲಾಗುತ್ತದೆ.
ಲಕ್ಷ್ಮಣ ದಸ್ತಿ, ಅಧ್ಯಕ್ಷ, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಹೋರಾಟ ಸಮಿತಿ