Advertisement

ಭಾರತದ ವಿಕಾಸಕ್ಕಾಗಿ ಮತ್ತೊಮ್ಮೆ ಅವಕಾಶ ಕೊಡಿ

11:11 AM Apr 10, 2019 | Lakshmi GovindaRaju |

ಮೈಸೂರು: ದೇಶದ ವಿಕಾಸಕ್ಕಾಗಿ ಯುವ ಮತದಾರರು ತಪ್ಪದೇ ಮತಹಾಕಿ, ನಿಮ್ಮ ಒಂದು ಮತ ದೇಶದಲ್ಲಿ ಪೂರ್ಣ ಬಹುಮತದ, ಸುಭದ್ರ-ಸುಸ್ಥಿರ ಸರ್ಕಾರವನ್ನು ತರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

Advertisement

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಸೂರು-ಕೊಡಗು, ಚಾಮರಾಜ ನಗರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

18 ತುಂಬಿದ ಯುವ ಮತದಾರರು ತಪ್ಪದೇ ಮತ ಹಾಕಿ, ನಿಮ್ಮ ಒಂದು ಮತ ಚೌಕಿದಾರ್‌ ಮೋದಿಯನ್ನು ಸಶಕ್ತಗೊಳಿಸುತ್ತದೆ. ದೇಶದ ವಿಕಾಸ, ರಕ್ಷಣೆ, ಕಾಶ್ಮೀರದ ಸ್ಥಿತಿ ಬದಲಿಸಲು ನಿಮ್ಮ ಒಂದು ಮತಕ್ಕೆ ಐತಿಹಾಸಿಕ ಮಹತ್ವವಿದೆ ಎಂದರು.

ಗ್ರಾಮಗಳ ಅಭಿವೃದ್ಧಿ, ಬಡವರು-ಮಧ್ಯಮ ವರ್ಗ, ದಲಿತರು ಸೇರಿದಂತೆ ಎಲ್ಲ ವರ್ಗಗಳು, ಎಲ್ಲ ಕ್ಷೇತ್ರಗಳ ವಿಕಾಸ, ಅದುವೇ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಮ್ಮ ಮಂತ್ರ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಣಾಳಿಕೆ ಸಂಕಲ್ಪ ಪತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಭಾರತದ ಸುರಕ್ಷತೆಗಾಗಿ ಸೇನೆಯನ್ನು ಮತ್ತಷ್ಟು ಸಶಕ್ತಗೊಳಿಸುವ, 2030ಕ್ಕೆ ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವ, ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ,

Advertisement

ದೇಶದ 50 ಪ್ರಮುಖ ನಗರಗಳಲ್ಲಿ ಮೆಟ್ರೋ ಸೌಕರ್ಯ ಒದಗಿಸುವ, ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಭರವಸೆ ನೀಡಲಾಗಿದೆ. ಕಾಂಗ್ರೆಸ್‌ ಕೂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ, ನಮ್ಮದು ಸಂಕಲ್ಪ ಪತ್ರ, ಅವರದು ಕೇವಲ ಘೋಷಣಾ ಪತ್ರ ಎಂದು ಟೀಕಿಸಿದರು.

ಕಾಂಗ್ರೆಸ್‌ ಮತ್ತು ಅವರ ಮಿತ್ರ ಪಕ್ಷಗಳು ಮೋದಿ ತೊಲಗಿಸಿ ಅನ್ನುವುದನ್ನು ಬಿಟ್ಟು ಬೇರೇನು ಹೇಳುತ್ತಿಲ್ಲ. ಅವರು ಮೋದಿ ತೊಲಗಿಸಿ ಅಂತಾರೆ ನೀವೇನು ಹೇಳುತ್ತೀರಿ ಎಂದು ಜನತೆಯನ್ನು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಹಲವು ದಶಕಗಳಿಂದ ಗರೀಬಿ ಹಟಾವೋ ಅನ್ನುತ್ತಿದ್ದಾರೆ. ಆದರೆ, ದೇಶದ ಬಡತನ ನಿರ್ಮೂಲನೆಯಾಗಲಿಲ್ಲ. ದೇಶದಿಂದ ಕಾಂಗ್ರೆಸ್‌ನ್ನು ತೊಲಗಿಸಿದರೆ ದೇಶದ ಬಡತನವು ನಿರ್ಮೂಲನೆಯಾಗಲಿದೆ ಎಂದು ಕುಟುಕಿದರು.

ತೆರಿಗೆ ಪಾವತಿದಾರರಿಗೆ ಚೌಕಿದಾರ್‌ ಸರ್ಕಾರದಿಂದ ಸಮ್ಮಾನ ಸಿಗಲಿದೆ. ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳ ಸರ್ಕಾರ 2 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯ್ತಿ ನೀಡಿತ್ತು. ನಮ್ಮ ಸರ್ಕಾರ 5 ಲಕ್ಷ ರೂಪಾಯಿಗಳವರೆಗೆ ತೆರಿಗೆ ನೀಡಿದೆ.

ಕಳೆದ ಐದು ವರ್ಷಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಹಣದುಬ್ಬರ ನಿಯಂತ್ರಣದಲ್ಲಿದೆ.ಕಾಂಗ್ರೆಸ್‌ ಸರ್ಕಾರದಲ್ಲಿ ಗೃಹ ಸಾಲದ ಮೇಲಿನ ಬಡ್ಡಿ, ಶೈಕ್ಷಣಿಕ ಸಾಲದ ಇಎಂಐ ಎಷ್ಟಿತ್ತು? ಚೌಕಿದಾರ್‌ ಸರ್ಕಾರ, ಗೃಹ ಸಾಲದ ಮೇಲಿನ ಬಡ್ಡಿದರ ಹಾಗೂ ಶೈಕ್ಷಣಿಕ ಸಾಲದ ಇಎಂಐ ಮೊತ್ತವನ್ನೂ ಕಡಿಮೆ ಮಾಡಿದೆ ಎಂದರು.

ಕಾಂಗ್ರೆಸ್‌ ದೇಶಕ್ಕೆ 2ಜಿ ಹಗರಣವನ್ನು ಕೊಡು¤. ನಮ್ಮ ಸರ್ಕಾರ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಹಾಗೂ ಕಡಿಮೆ ಬೆಲೆಗೆ ಡೇಟಾವನ್ನು ದೇಶದ ಜನತೆಗೆ ಕೊಟ್ಟಿದೆ ಎಂದು ಹೇಳಿದರು.

ರೈತರಿಗೆ ದ್ರೋಹ: ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರಗಳು ಬಡವರ ಹೆಸರಿನಲ್ಲಿ ಯೋಜನೆ ರೂಪಿಸಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿವೆ ಎಂದು ಟೀಕಿಸಿದ ಅವರು, ಸಾಲಮನ್ನಾ ಹೆಸರಲ್ಲಿ ಈ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ. ಸರ್ಕಾರ ಸಾಲಮನ್ನಾ ಮಾಡುತ್ತೇವೆ ಎನ್ನುತ್ತಿದ್ದರು ರೈತರ ಮನೆಗಳಿಗೆ ಬ್ಯಾಂಕುಗಳ ನೋಟಿಸ್‌ ಹೋಗುವುದು ನಿಂತಿಲ್ಲ.

ಇದನ್ನು ಸಾಲಮನ್ನಾ ಎನ್ನುತ್ತಾರೆಯೇ ಎಂದು ಜರಿದರು. ಸಾಲಮನ್ನಾ ಬದಲಿಗೆ ರೈತರನ್ನು ಸಶಕ್ತಗೊಳಿಸುವ ಪ್ರಧಾನಮಂತ್ರಿ ಕಿಸಾನ್‌ ಯೋಜನೆಗೆ ಕರ್ನಾಟಕ ಸರ್ಕಾರ ಸಬೂಬು ಹೇಳಿಕೊಂಡು ರೈತರ ಪಟ್ಟಿ ಕೊಡದೆ ರಾಜ್ಯದ ರೈತರಿಗೆ ಯೋಜನೆಯ ಲಾಭ ತಪ್ಪಿಸಿದೆ ಎಂದು ದೂರಿದರು.

ಕೇಂದ್ರದ ಮಾಜಿ ಸಚಿವ ಎಸ್‌.ಎಂ.ಕೃಷ್ಣ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಸಹ ಉಸ್ತುವಾರಿ ಕಿರಣ್‌ ಮಹೇಶ್ವರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್‌ ಸಿಂಹ, ಚಾಮರಾಜ ನಗರ ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಸೇರಿದಂತೆ ಬಿಜೆಪಿಯ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ನಂಗಾನಾಚ್‌: ಕರ್ನಾಟಕದಲ್ಲಿ ಕಾಂಗ್ರೆಸ್‌ ನಂಗಾನಾಚ್‌ ಮಾಡುತ್ತಿದೆ. ಮುಖ್ಯಮಂತ್ರಿಯನ್ನು ಪಂಚಿಂಗ್‌ ಬ್ಯಾಗ್‌ ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕರು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಮಾದರಿ ವ್ಯವಹಾರ.

ಕರ್ನಾಟಕದಲ್ಲಿ ಕುಟುಂಬ ರಾಜಕಾರಣ, ವಂಶವಾದ, ಭ್ರಷ್ಟ ರಾಜಕಾರಣ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜರಿದರು. ಸ್ವಕ್ಷೇತ್ರವನ್ನು ಬಿಟ್ಟು ದಕ್ಷಿಣಕ್ಕೆ ಓಡಿ ಬಂದಿರುವ ನಾಮ್‌ಧಾರ್‌, ಕರ್ನಾಟಕದಲ್ಲಿ ತಮ್ಮದೇ ಪಕ್ಷದ ಸರ್ಕಾರವಿದ್ದರೂ ಎಚ್‌.ಡಿ.ದೇವೇಗೌಡರು ಕೈ ಕೊಡಲಿದ್ದಾರೆ ಎಂಬ ಭಯದಿಂದ ಸುರಕ್ಷಿತ ಕ್ಷೇತ್ರವಿಲ್ಲದೆ, ಕೇರಳಕ್ಕೆ ಓಡಿ ಹೋಗಿದ್ದಾರೆ ಎಂದು ರಾಹುಲ್‌ ಗಾಂಧಿ ಹೆಸರೇಳದೆ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next