ಹೊಸನಗರ: ರಾಜ್ಯದಲ್ಲಿ ಮತ್ತೆ ಚುನಾವಣೆ ಬಂದಿದೆ. ಈ ಚುನಾವಣೆಯೇ ಸುಖಾಸುಮ್ಮನೆ ದುಂದುವೆಚ್ಚ ಎಂಬ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಗ್ರಾಮೀಣ ಭಾಗದ ಕೃಷಿಕರು, ಮಲೆನಾಡಿನ ಒಂಟಿಮನೆ ಹೊಂದಿರುವ ಕುಟುಂಬಗಳು ಪರದಾಡುವಂತಾಗಿದೆ. ರೈತರು ತಮ್ಮಲ್ಲಿರುವ ಪರವಾನಗಿ ಹೊಂದಿರುವ ಬಂದೂಕುಗಳನ್ನು ಸ್ಥಳೀಯ ಠಾಣೆಯಲ್ಲಿ ಠೇವಣಿ ಮಾಡುವ ಬಗ್ಗೆ ಜಿಲ್ಲಾಡಳಿತ ಸೂಚಿಸಿರುವುದರಿಂದ ರೈತರು ಪರದಾಡುವಂತಾಗಿದೆ. ಚುನಾವಣೆ ಹೊತ್ತಿನಲ್ಲಿ ಇದು ಮಾಮೂಲಿ ಎಂದೆನಿಸಿದರೂ ಪ್ರಸಕ್ತ ಸನ್ನಿವೇಶದಲ್ಲಿ ತಮ್ಮಲ್ಲಿರುವ ಬಂದೂಕು ಒಪ್ಪಿಸಲು ಮಲೆನಾಡಿಗರು ಮೀನಮೇಷ ಎಣಿಸುವಂತಾಗಿದೆ. ಒಮ್ಮೆ ಬರ ಮತ್ತೂಮ್ಮೆ ಅತಿವೃಷ್ಟಿಯಾದರೆ ಇದೀಗ ಕಾಡುಪ್ರಾಣಿಗಳ ಕಾಟದಿಂದ ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ನಡುವೆ ತಮ್ಮಲ್ಲಿದ್ದ ಬಂದೂಕಿನಿಂದ ಹೆದರಿಸಿ ಬೆದರಿಸಿ ಕಷ್ಟಪಟ್ಟು ತಮ್ಮ ಬೆಳೆ ರಕ್ಷಿಸುಕೊಳ್ಳುತ್ತಿದ್ದ ಮಲೆನಾಡ ರೈತರ ಪಾಲಿಗೆ ಬಂದೂಕನ್ನು ಠಾಣೆಗಳಿಗೆ ಒಪ್ಪಿಸುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಒಂಟಿಮನೆ ಪಚೀತಿ!: ಕೃಷಿ ಕುಟುಂಬಗಳ ಪರದಾಟ ಒಂದಡೆಯಾದರೆ ಇನ್ನು ಕಾಡು ಪ್ರದೇಶದಲ್ಲಿ ಹೆಚ್ಚಿರುವ ಒಂಟಿಮನೆ ಕುಟುಂಬಗಳು ತಮ್ಮ ರಕ್ಷಣೆಗಾಗಿ ಪರವಾನಗಿ ಬಂದೂಕು ಪಡೆದುಕೊಂಡಿವೆ. ಒಂದು ಕಡೆ ತಾವು ಭಿತ್ತನೆ ಮಾಡಿದ ಭತ್ತ, ಜೋಳ, ಮೆಣಸು, ಏಲಕ್ಕಿ, ತೆಂಗು, ಅಡಕೆ ಬೆಳೆಯನ್ನು ಕಾಡುಕೋಣ, ಹಂದಿ, ಮಂಗಗಳಿಂದ ರಕ್ಷಿಸಕೊಳ್ಳಬೇಕು. ಮತ್ತೂಂದಡೆ ನಿರ್ಜನ ಪ್ರದೇಶದಲ್ಲಿರುವ ಒಂಟಿಮನೆ ರಕ್ಷಣೆಗಾಗಿ ಪಡೆದ ಬಂದೂಕನ್ನು ಸ್ಥಳೀಯ ಠಾಣೆ ಸುಪರ್ದಿಗೆ ನೀಡುವ ಅಸಹಾಯಕ ಸ್ಥಿತಿ. ಇದು ಇವರ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಪದೇ ಪದೇ ಚುನಾವಣೆ: ಮೊನ್ನೆ ಮೊನ್ನೆಯಷ್ಟೆ ನಡೆದ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಲೆನಾಡ ರೈತರು ತಮ್ಮಲ್ಲಿದ್ದ ಬಂದೂಕನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿ ಒಂದೂವರೆ ತಿಂಗಳಿಗೆ ವಾಪಸ್ ಪಡೆದಿದ್ದರು. ಇದೀಗ ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಮತ್ತೆ ಬಂದೂಕು ಹಿಡಿದು ಠಾಣೆಗೆ ಬರುವಂತಾಗಿದೆ.
ಈ ಚುನಾವಣೆ ಮುಗಿಯುವ ಹೊತ್ತಿಗೆ ಲೋಕಸಭಾ ಚುನಾವಣೆ ನಡೆಯಲಿದ್ದು ಮತ್ತೆ ಬಂದೂಕು ಒಪ್ಪಿಸಬೇಕಾದ ಅನಿವಾರ್ಯತೆ. ಹೀಗಾದರೆ ನಮ್ಮ ಬದುಕು ಹೇಗೆ ಸ್ವಾಮಿ. ಯಾರಲ್ಲಿ ನಮ್ಮ ಕಷ್ಟ ಹೇಳಿಕೊಳ್ಳೋದು ಎಂದು ಮಲೆನಾಡಿಗರು ಅಲವತ್ತುಕೊಳ್ಳುವಂತಾಗಿದೆ.
ಹೊಸನಗರದಲ್ಲಿ 700 ಬಂದೂಕುಗಳು! ಮಲೆನಾಡ ನಡುಮನೆಯಂತಿರುವ ಹೊಸನಗರ ತಾಲೂಕಿನ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 700 ಬಂದೂಕುಗಳಿವೆ. ಹೊಸನಗರ ಠಾಣೆಯಲ್ಲಿ 192, ರಿಪ್ಪನ್‌ಪೇಟೆಯಲ್ಲಿ 313 ಮತ್ತು ನಗರ ಠಾಣೆಯಲ್ಲಿ 197 ಬಂದೂಕುಗಳನ್ನು ರೈತರು ಹೊಂದಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮಲ್ಲಿರುವ ಬಂದೂಕುಗಳನ್ನು ಠಾಣೆಯಲ್ಲಿ ಠೇವಣಿ ಮಾಡುತ್ತಿದ್ದಾರೆ.
ಕುಮುದಾ ಬಿದನೂರು