Advertisement

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ

12:53 PM Jun 02, 2017 | |

ಮೈಸೂರು: ಮುಂದಿನ ವಿಧಾನ ಸಭೆ ಚುನಾವಣೆಯ ನಾಯಕತ್ವವನ್ನು ಹೈಕಮಾಂಡ್‌ ತಮಗೆ ವಹಿಸಿದ್ದು, ಅದರಂತೆ 2018ರ ವಿಧಾನಸಭೆ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆದು ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಜಿಲ್ಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಹಿನ್ನೆಲೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಹೈಕಮಾಂಡ್‌ ಮುಂದಿನ ವಿಧಾನಸಬೆ ಚುನಾವಣೆಯ ನಾಯಕತ್ವವನ್ನು ತಮಗೆ ವಹಿಸಿದ್ದು, ಹೀಗಾಗಿ 2018ರ ಚುನಾವಣೆ ತಮ್ಮ ನಾಯಕತ್ವ ದಲ್ಲೇ ನಡೆಯಲಿದೆ ಎಂದರು.

ಕಾಂಗ್ರೆಸ್‌ ಪಕ್ಷ ಮತ್ತೂಮ್ಮೆ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಆದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ತೀರ್ಮಾನಿಸುವುದು ಹೈಕಮಾಂಡ್‌ ಬಿಟ್ಟದ್ದಾಗಿದೆ. ಆದರೆ ಚುನಾವಣೆ ನಂತರ ಆಯ್ಕೆಯಾದ ಶಾಸಕರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ಒನ್‌ಮ್ಯಾನ್‌ ಒನ್‌ಪೋಸ್ಟ್‌: ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ (ಒನ್‌ ಮ್ಯಾನ್‌ ಒನ್‌ ಪೋಸ್ಟ್‌) ಎಂದು ಹೈ ಕಮಾಂಡ್‌ ಹೇಳಿದ ಹಿನ್ನೆಲೆ ಡಾ.ಜಿ.ಪರಮೇಶ್ವರ್‌  ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಆದರೆ ಈವರೆಗೂ ನಾನು ಅವರ ರಾಜೀನಾಮೆ ಕೇಳಲ್ಲ, ಪಕ್ಷದ ವರಿಷ್ಠರ ತೀರ್ಮಾನದಂತೆ ಅವರೇ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ.

ಇನ್ನೂ ಕೆಪಿಸಿಸಿ ಅಧ್ಯಕ್ಷ, ಪದಾಧಿಕಾರಿ ನೇಮಕ ವಿಚಾರದಲ್ಲಿ ಯಾರಿಗೂ ಅಸಮಾಧಾನ ಅಥವಾ ಅತೃಪ್ತಿ ಇಲ್ಲ. ಅಲ್ಲದೆ ಹೈಕಮಾಂಡ್‌ ಇಂಧನ ಸಚಿವ ಡಿಕೆ ಶಿವಕುಮಾರ್‌ ಸೇರಿ ಎಲ್ಲರಿಗೂ ಜವಾಬ್ದಾರಿ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಎಲ್ಲಾ ಕಡೆ ಒಬ್ಬರೇ ಕಾರ್ಯಾಧ್ಯಕ್ಷರು ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ತಲಾ ಒಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿದೆ.

Advertisement

ಅಲ್ಲದೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಡಿ.ಕೆ.ಶಿವಕುಮಾರ್‌ಗೆ ಜವಾಬ್ದಾರಿ ನೀಡಿದ್ದು, ಎಲ್ಲರಿಗೂ ಅಧಿಕಾರ ಹಂಚಿಕೆಯಾಗಿದೆ. ಅದರಂತೆ ಮುಂದಿನ ಚುನಾವಣೆಗೆ ನಾವು ತಯಾರಾಗಿದ್ದು, ತಮ್ಮ ನೇತೃತ್ವದಲ್ಲೇ ಚುನಾವಣೆ ನಡೆಯುವ ಕಾರಣ ಅವರಿಗೆ ವಹಿಸಿದ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ ಎಂದರು.

ಸಚಿವ ಸಂಪುಟ ವಿಸ್ತರಣೆ: ವಿಧಾನಮಂಡಲ ಅಧಿವೇಶನದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಸಚಿವ ಸಂಪುಟದಲ್ಲಿ ಖಾಲಿಯಾಗುವ ಸ್ಥಾನ ಭರ್ತಿ ಮಾಡಲು ಅಧಿವೇಶನ ಮುಗಿದ ಬಳಿಕ ನಿರ್ಧರಿಸಲಿದ್ದು, ಯಾರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡೋಂಗಿನಾಟಕ ಬಿಡಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರಿಗೆ ಯಾವ ಸಮಸ್ಯೆಯೂ ಗೊತ್ತಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಲಿಕ್ಯಾಪ್ಟರ್‌ ಅಲ್ಲಿ ಓಡಾಡಲಿಲ್ಲವೇ. ಇಂತಹ ಡೋಂಗಿ ನಾಟಕವನ್ನು ಯಡಿಯೂರಪ್ಪ ಬಿಟ್ಟು ಬಿಡಬೇಕು ಎಂದು ತಿರುಗೇಟು ನೀಡಿದ ಅವರು, ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದರೆ ರಾಜ್ಯ ಸರ್ಕಾರ ಸಹ 4 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಳೆಯಾಗುವ ವಿಶ್ವಾಸವಿದೆ: ಪೂಜೆ ಮಾಡೋದ್ರಿಂದ ಮಳೆ ಬರುತ್ತಾ? ನಾನ್ಯಾವತ್ತೂ ಪೂಜೆ ಮಾಡಿಲ್ಲ ಹಾಗೂ ಮಾಡುವುದಿಲ್ಲ. ಹೀಗಾಗಿ ಮಳೆಗಾಗಿ ರಾಜ್ಯ ಸರ್ಕಾರ ಯಾವುದೇ ಪೂಜೆ ಮಾಡುತ್ತಿಲ್ಲ. ಅಲ್ಲದೆ ಪೂಜೆ ಮಾಡುವುದರಿಂದ ಮಳೆಯೂ ಬರುವುದಿಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾಗುವ ವಿಶ್ವಾಸವಿದೆ ಎಂದ ಅವರು, ಯುಪಿಎಸ್‌ಸಿ ಪ್ರಥಮ ರ್‍ಯಾಂಕ್‌ ಪಡೆದ ನಂದಿನಿಗೆ ಶುಭಾಶಯ ತಿಳಿಸಿದ ಸಿದ್ದರಾಮಯ್ಯ, ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next