“ಬಿಗ್ ಬಾಸ್’ನಿಂದ ವಾಪಸ್ಸು ಬಂದ ನಂತರ ಮೋಹನ್ ಅವರ ಸುದ್ದಿಯೇ ಇರಲಿಲ್ಲ. ಅವರೆಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ. ಮೋಹನ್ ಸದ್ದಿಲ್ಲದೆ ಒಂದು ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ. ಅದಕ್ಕೆ ಅವರಿಟ್ಟಿರುವ ಹೆಸರು “ಹಲೋ ಮಾಮ’. “ಥೂ ಹಂಗ್ ಕರೀಬೇಡಿ’ ಎಂಬ ಅಡಿಬರಹವೂ ಇದೆ. ಈ ಚಿತ್ರದ ಮುಹೂರ್ತವನ್ನು ಆಷಾಢಕ್ಕೂ ಮುನ್ನವೇ ಅಂದರೆ ಜೂನ್ 22ರಂದು ಶುರು ಮಾಡಿ, ಒಂದು ದಿನದ ಚಿತ್ರೀಕರಣವನ್ನೂ ಮಾಡಿ ಮುಗಿಸಿದ್ದಾರೆ ಮೋಹನ್.
ಇದೊಂದು ಪಕ್ಕಾ ಕಾಮಿಡಿ ಚಿತ್ರ ಎನ್ನುತ್ತಾರೆ ಅವರು. “ಇವತ್ತು ಮಾಮಗಳು ಮಾಡುವಷ್ಟು ದುಡ್ಡನ್ನು ಬೇರೆ ಯಾರೂ ಮಾಡುವುದಿಲ್ಲ. ಕಷ್ಟಪಡುವವರು ಕಷ್ಟಪಡುತ್ತಲೇ ಇರುತ್ತಾರೆ. ಇನ್ನು ಕೆಲವರು ಯಾವುದೇ ಕಷ್ಟ ಪಡದೆ, ಮಧ್ಯಸ್ಥಿಕೆ ವಹಿಸಿ, ಈಸಿಯಾಗಿ ದುಡ್ಡು ಸಂಪಾದನೆ ಮಾಡುತ್ತಾರೆ. ಇದು ಯಾವುದೋ ಒಂದು ಕ್ಷೇತ್ರದಲ್ಲಲ್ಲ, ಎಲ್ಲಾ ಕ್ಷೇತ್ರದಲ್ಲೂ ಇದೆ. ಆ ತರಹದ್ದೊಂದು ಪ್ರಪಂಚವನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮೋಹನ್.
ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ಒಂದು ಪ್ರಮುಖ ಪಾತ್ರವನ್ನೂ ಅವರು ಮಾಡುತ್ತಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ “ರಂಗಿ ತರಂಗ’ದ ಅರವಿಂದ್ ರಾವ್ ಇದ್ದಾರೆ. ಇನ್ನು ಎ.ಜಿ. ಶೇಷಾದ್ರಿ ಮತ್ತು ಮೋಹನ್ ಜೊತೆಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಹಲೋ ಮಾಮ’ ಚಿತ್ರದಲ್ಲಿ ಇಬ್ಬರು ನಾಯಕಿಯರಿರುತ್ತಾರಂತೆ. ಇಬ್ಬರಿಗೆ ಹುಡುಕಾಟ ನಡೆಯುತ್ತಿದೆ. ಇನ್ನು ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇದ್ದು, ಆ ಪಾತ್ರಗಗಳನ್ನು ಗೊತ್ತಿರುವ ನಟಿಯರಿಂದಲೇ ಮಾಡಿಸಬೇಕು ಎಂಬುದು ಮೋಹನ್ ಯೋಚನೆ.
ಈಗಾಗಲೇ ಅವರು ಒಂದಿಷ್ಟು ನಟಿಯರಿಗೆ ಹೇಳಿದ್ದಾರೆ. ಅಂತಿಮವಾಗಿ ಯಾರ್ಯಾರು ಚಿತ್ರದಲ್ಲಿ ಇರುತ್ತಾರೋ ನೋಡಬೇಕು. ಇನ್ನು ಚಿತ್ರವನ್ನು ಪ್ರಗತಿ ಸಿನಿ ಕ್ರಿಯೇಷನ್ಸ್ ಮತ್ತು ಮೋಹನ್ ಟಾಕೀಸ್ ಜೊತೆಯಾಗಿ ನಿರ್ಮಿಸುತ್ತಿದೆ. ಧರಂದೀಪ್ ಅವರ ಸಂಗೀತ ಮತ್ತು ಪ್ರಸಾದ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಲ್ಲಾ ಸರಿ, ಮೋಹನ್ ಅಭಿನಯಿದ “ಕರುಣಾ-ನಿಧಿ’ ಎಂಬ ಚಿತ್ರ ಒಂದೂವರೆ ವರ್ಷಗಳ ಹಿಂದೆ ಶುರುವಾಗಿತ್ತು. ಆ ಚಿತ್ರದ ಕಥೆ ಏನಾಯಿತು ಎಂದರೆ, “ಆ ಚಿತ್ರದ ಕೆಲಸ ಬಹುತೇಕ ಮುಗಿದಿದೆ.
ಇನ್ನೊಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಸ್ವಲ್ಪ ಹಣಕಾಸಿನ ಸಮಸ್ಯೆಯಿಂದಾಗಿ ಚಿತ್ರ ನಿಂತಿದೆ. ಸದ್ಯದಲ್ಲೇ ಶುರುವಾಗಿ, ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ’ ಎನ್ನುತ್ತಾರೆ ಮೋಹನ್. ಇನ್ನು ಆ ಚಿತ್ರಕ್ಕೆ “ಕರುಣಾ-ನಿಧಿ’ ಎಂಬ ಹೆಸರು ಇಲ್ಲ ಎಂಬುದು ಗೊತ್ತಿರಲಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಟೈಟಲ್ ನಿರಾಕರಿಸಿದ್ದರಿಂದ, ಈಗ ಚಿತ್ರಕ್ಕೆ “ಇತ್ಯರ್ಥ’ ಎಂಬ ಹೆಸರನ್ನು ಇಡಲಾಗಿದೆ.